ಇತ್ತೀಚಿನ ಸುದ್ದಿ
ಗದ್ದುಗೆಗಾಗಿ ಹತ್ಯೆ ನಡೆದಿದ್ದ ದೇವರಸನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕೊಲೆಗೀಡಾದ ವ್ಯಕ್ತಿಯ ಪತ್ನಿ ಸೌಭಾಗ್ಯ ಆಯ್ಕೆ
16/12/2024, 23:32
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಸಿಕ್ಕಿತು ಅನ್ನುವ ಹಾಗೆ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಕೇಳಲು ಹೋಗಿ ಕೊಲೆಯಾಗಿ ಪ್ರಾಣ ಕಳೆದುಕೊಂಡವನ ಪತ್ನಿಗೆ ಅಧಿಕಾರ ಸಿಕ್ಕಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕು ದೇವರಸನಹಳ್ಳಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಅಧಿಕಾರ ಹಂಚಿಕೆ ವಿಚಾರದಲ್ಲಿ ಅಲ್ಲಿನ ಪಂಚಾಯಿತಿ ಸದಸ್ಯೆ ಸೌಭಾಗ್ಯ ಎಂಬುವವರ ಪತಿ ನಂಜುಂಡಸ್ವಾಮಿಯನ್ನು ಪಿತೂರಿ ಮಾಡಿ ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದ್ದ ಘಟನೆ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಅಧಿಕಾರ ಹಂಚಿಕೆ ಪ್ರಕಾರ ಪತ್ನಿ ಸೌಭಾಗ್ಯ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸಬೇಕು ಎಂದು ನಂಜುಂಡಸ್ವಾಮಿ ಕೆಲ ಸದಸ್ಯರುಗಳ ಜೊತೆ ಮಾತುಕತೆಗೆ ತೆರಳಿದ್ದ ಸಂದರ್ಭ ಕೊಲೆಯಾಗಿದ್ದುದ್ದನ್ನು ಇಲ್ಲಿ ಸ್ಮರಿಸಬಹುದು.
ಇಂದು ಅದೇ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಕೊಲೆಯಾದವರ ಪತ್ನಿ ಸೌಭಾಗ್ಯ ಅವರೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಘಟನೆಯಿಂದಾಗಿ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಒಕ್ಕೂರಲಿನಿಂದ ಸಂತ್ರಸ್ತೆ ಸೌಭಾಗ್ಯ ಅವರನ್ನು ಬೆಂಬಲಿಸಿ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಇಂದು ಅವರು ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
23 ಸದಸ್ಯ ಬಲ ಹೊಂದಿರುವ ಗ್ರಾಮ ಪಂಚಾಯಿತಿಗೆ ಇಂದು ನಡೆದ ಚುನಾವಣೆಯಲ್ಲಿ 20 ಸದಸ್ಯರು ಹಾಜರಾಗಿ ಮೂರು ಮಂದಿ ಗೈರು ಹಾಜರಾಗಿದ್ದರು.
ಅವರು ಆಯ್ಕೆಯಾಗುತ್ತಿದ್ದಂತೆ ಗ್ರಾಮಸ್ಥರು ಹಾಗೂ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ನೂತನ ಅಧ್ಯಕ್ಷರಿಗೆ ಚುನಾವಣಾ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಾಲಾರ್ಪಣೆ ಮಾಡಿ ಅಧಿಕಾರ ವಹಿಸಿದರು.
ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಶಿಲ್ಪಾ ಅವರು ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಇದೇ ಸಂದರ್ಭ ಅಧ್ಯಕ್ಷೆ ಸೌಭಾಗ್ಯ ಸೇರಿದಂತೆ ಕೊಲೆಯಾದ ನಂಜುಂಡಸ್ವಾಮಿ ಅವರ ಕುಟುಂಬಸ್ಥರು ಆತನನ್ನು ನೆನೆದು ಕಣ್ಣೀರುಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಬಳಿಕ ನೂತನ ಅಧ್ಯಕ್ಷೆ ಸೌಭಾಗ್ಯ ಹಾಗೂ ಮುಖಂಡ ಹೆಮ್ಮರಗಾಲ ಸೋಮಣ್ಣ ಮಾತನಾಡಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಲ್ಲರೂ ಒಗ್ಗಟ್ಟಾಗಿ ಪಂಚಾಯತಿ ಅಭಿವೃದ್ಧಿಗೆ ಶ್ರಮಿಸಬೇಕು. ಅಲ್ಲದೆ ಈ ಅಧಿಕಾರ ಹಂಚಿಕೆ ವಿಚಾರದಲ್ಲಿ ಇಂದು ಎಲ್ಲಾ ಸದಸ್ಯರು ಪಕ್ಷಾತೀತವಾಗಿ ಸೌಭಾಗ್ಯ ಅವರನ್ನು ಬೆಂಬಲಿಸಿ ಅವಿರೋಧವಾಗಿ ಅಧ್ಯಕ್ಷರನ್ನಾಗಿ ಮಾಡಿರುವುದು ಕೊಲೆಯಾದ ನಂಜುಂಡಸ್ವಾಮಿಯವರ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ ಎಂದು ಘಟನೆಯ ಬಗ್ಗೆ ತಿಳಿಸಿದರು. ಎಲ್ಲಾ ಸದಸ್ಯರುಗಳನ್ನು ಅಭಿನಂದಿಸಿದರು.
ಈ ಸಂದರ್ಭ ಮುಖಂಡರುಗಳಾದ ಕರಳಪುರ ನಾಗರಾಜ್, ಗೋಳೂರು ಮುದ್ದು ಮಾದ ಶೆಟ್ಟಿ,ಮಹದೇವ್, ರಾಜು ಮಹದೇವಯ್ಯ, ಸುರೇಶ್, ಸೋಮು ಸೇರಿದಂತೆ ಗ್ರಾಮದ ಮುಖಂಡರು ಮತ್ತು ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು.