ಇತ್ತೀಚಿನ ಸುದ್ದಿ
ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ಉಚಿತ ಸಂಸ್ಕಾರ ಬೇಸಿಗೆ ಶಿಬಿರ ‘ಮಕ್ಕಳ ಕಲರವ’
03/04/2026, 20:40
ಪುತ್ತೂರು(reporterkarnataka.com): ಹಲವಾರು ವರ್ಷಗಳಿಂದ ನೂರಾರು ಬೀದಿ ಶ್ವಾನಗಳಿಗೆ ಪ್ರತಿದಿನ ತನ್ನ ಸ್ವಂತ ಖರ್ಚಿನಲ್ಲಿ ಆಹಾರವನ್ನು ನೀಡುತ್ತಿರುವುದು ಮಾತ್ರವಲ್ಲದೆ, ಸಕಾಲದಲ್ಲಿ ಸಂತಾನ ಹರಣ ಚಿಕಿತ್ಸೆಯನ್ನು ಮಾಡಿಸಿ ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದಾಗಿ ಗಣೇಶ ಭಟ್ ಕೇರ ಖಂಡಿಗ ಇವರು ಹೇಳಿದರು.
ದೇವಾಲಯ ಸಂವರ್ಧನಾ ಸಮಿತಿ, ಪುತ್ತೂರಿನ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ವತಿಯಿಂದ, ಪಾಂಗಳಾಯಿ ಅರಸು ಮುಂಡಿತ್ತಾಯ ಇದರ ವಠಾರದಲ್ಲಿ ನಡೆದ ಮೊದಲ ದಿನದ ‘ಮಕ್ಕಳ ಕಲರವ’ ಬೇಸಿಗೆ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ದೀಪ ಪ್ರಜ್ವಲನೆಗೈದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ತಮ್ಮ ಪೋಷಕರೊಂದಿಗೆ ಹಸಿದ ಬೀದಿ ನಾಯಿಗಳಿಗೆ ಹಾಗೂ ಇನ್ನಿತರ ಅಶಕ್ತ ಪ್ರಾಣಿಗಳಿಗೆ ಆಹಾರ ಮತ್ತು ನೀರನ್ನು ಒದಗಿಸಿ ಪ್ರಾಣಿ ದಯೆ ತೋರುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದೇವಾಲಯ ಸಂವರ್ಧನಾ ಸಮಿತಿಯ ಜಿಲ್ಲಾಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಇವರು ಮಾತನಾಡುತ್ತಾ, ಧಾರ್ಮಿಕ ಶಿಕ್ಷಣ ತರಗತಿಗಳು ಪ್ರಾರಂಭವಾದ ಬಗೆ ಹಾಗೂ ಅದು ಈ ವರೆಗೆ ನಡೆದು ಬಂದ ದಾರಿಯನ್ನು ವಿವರಿಸಿ ಶಿಬಿರಾರ್ಥಿಗಳಿಗೆಲ್ಲ ಶುಭ ಕೋರಿದರು.
ಮಕ್ಕಳಾದ ಗರಿಮಾ ಮತ್ತು ತಂಡದವರು ಪ್ರಾರ್ಥಿಸಿದರು. ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಇದರ ಸಂಚಾಲಕರಾದ ಕೃಷ್ಣವೇಣಿ ಪ್ರಸಾದ್ ಮುಳಿಯ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ರಶ್ಮಿಯವರು ಉದ್ಘಾಟಕರನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಪಾಂಗಳಾಯಿ ದೈವಸ್ಥಾನದ ಅಧ್ಯಕ್ಷರಾದ ಗೋಪಾಲ ನಾಯಕ್ ಅವರು ಶುಭ ಹಾರೈಸಿದರು. ಗಣೇಶ ಭಟ್ ಅವರ ಪತ್ನಿ ಪ್ರೀತಿ ಸುಧಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದೂ ಧಾರ್ಮಿಕ ಶಿಕ್ಷಣದ ಪುಸ್ತಕ ಸಮಿತಿಯ ನಿರ್ವಾಹಕರಾದ ಶಂಕರಿ ಶರ್ಮ ವಂದಿಸಿದರು. ಪುತ್ತೂರು ನಗರಸಭೆಯ ಮಾಜಿ ಉಪಾಧ್ಯಕ್ಷರಾದ ವಿನಯ ಭಂಡಾರಿ ಹಾಗೂ ದೈವಸ್ಥಾನದ ಮಾಜಿ ಅಧ್ಯಕ್ಷರಾದ ಸಂಪತ್ ಕುಮಾರ್ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಬೋಧಕರಾಗಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಡಾ. ವಿಜಯ ಸರಸ್ವತಿ, ಪ್ರಭಾವತಿ, ಸುಧಾ ಹೆಬ್ಬಾರ್, ಶಂಕರಿ ಶರ್ಮ ಹಾಗೂ ನಿರ್ವಾಹಕರಾಗಿ ಪ್ರತಿಮಾ ಸಂಪತ್, ಉಮಾನಾಥ್ ಮತ್ತು ವಿನುತ, ಕ್ಷಮಾ ಸಂತೋಷ್ ಮುಂತಾದವರು ಸಹಕರಿಸಿದರು. ಮಾವಿನ ಎಲೆಯಿಂದ ವಿಶೇಷ ತೋರಣ, ಮಕ್ಕಳಿಂದ ಸರಳವಾಗಿ ಗಣಪತಿ ಪೂಜೆ, ದಿನನಿತ್ಯ ಪಠಿಸುವ ಶ್ಲೋಕಗಳು, ಆಟ ಇತ್ಯಾದಿಗಳನ್ನು ಎಲ್ಲರು ಸೇರಿ ನಡೆಸಿಕೊಟ್ಟರು. ಸುಮಾರು 185 ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡ ಮೊದಲ ದಿನದ ಶಿಬಿರವು ಅತ್ಯಂತ ಸಂಭ್ರಮದಿಂದ ನಡೆಯುತ್ತಿದೆ.












