ಇತ್ತೀಚಿನ ಸುದ್ದಿ
ಕದ್ರಿ ಉದ್ಯಾನವನದಲ್ಲಿ ಜ.23ರಿಂದ ಫಲಪುಷ್ಪ ಪ್ರದರ್ಶನ; ವಂದೇ ಭಾರತ್ ರೈಲು ಪ್ರತಿಕೃತಿ
21/01/2026, 23:21
ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕಾ ಇಲಾಖೆ, ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಹಾಗೂ ಸಿರಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ ಜ.23ರಿಂದ 26ರವರೆಗೆ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒ ನರ್ವಾಡೆ ವಿನಾಯಕ ಕಾರ್ಬಾರಿ, ಈ ಬಾರಿ ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಿದ ‘ವಂದೇ ಭಾರತ್ ರೈಲು’ ಪ್ರತಿಕೃತಿ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿರಲಿದೆ.ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಜ.23ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದ್ದು, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ವಿವಿಧ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಪ್ರದರ್ಶನವು ಮೂರು ದಿನಗಳ ಕಾಲ ಪ್ರತಿದಿನ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರಲಿದೆ ಎಂದು ತಿಳಿಸಿದರು.
ರೈಲು, ಮಿಕ್ಕಿ ಮೌಸ್ ಕಲಾಕೃತಿ ಬಣ್ಣಬಣ್ಣದ ಹೂವುಗಳಿಂದ ಸಿದ್ಧಪಡಿಸಿದ ‘ವಂದೇ ಭಾರತ್ ರೈಲು’ ಕಲಾಕೃತಿಯಲ್ಲಿ ಮೂರು ಬೋಗಿಗಳು ಇದ್ದು, 24 ಅಡಿ ಉದ್ದವಿರಲಿದೆ. ಬೆಟ್ಟಗುಡ್ಡಗಳ ಮಧ್ಯೆ ಸುರಂಗದಿಂದ ಹೊರಬರುವಂತೆ ಕಾಣುವ ರೈಲು 30 ಅಡಿ ಹಳಿಯ ಮೇಲೆ ಸಾಗುತ್ತಿರುವ ದೃಶ್ಯ ನಿರ್ಮಿಸಲಾಗಿದೆ. ಕೆಳಭಾಗದಲ್ಲಿ ನದಿ ಹರಿಯುವ ವಿನ್ಯಾಸವೂ ಇರಲಿದೆ.
ಹೂವಿನ ಮಿಕ್ಕಿ ಮೌಸ್ ಕಲಾಕೃತಿ ಹಾಗೂ ಸೆಲ್ಫಿ ಪಾಯಿಂಟ್ ಕೂಡಾ ಆಕರ್ಷಣೆಯಾಗಿರಲಿದೆ.
ಹೂಗಳು ಮತ್ತು ವಿಶೇಷ ಪ್ರದರ್ಶನ ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಡಯಾಂಥಸ್, ಆಸ್ಟರ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಪೆಟೋನಿಯಾ, ಟೊರಿನೋ ಸೇರಿದಂತೆ ವಿವಿಧ ಹೂಗಳನ್ನು ಕುಂಡಗಳಲ್ಲಿ ಬೆಳೆಸಲಾಗಿದೆ. ತರಕಾರಿ ಕೈತೋಟ, ಜಿಲ್ಲೆಯ ಮಹತ್ವವನ್ನು ಬಿಂಬಿಸುವ ಹಣ್ಣು–ತರಕಾರಿ ಕಲಾಕೃತಿಗಳು, ಅಲಂಕಾರಿಕ ಗಿಡಗಳು, ಬೋನ್ಸಾಯಿ ಗಿಡಗಳ ಪ್ರದರ್ಶನ ಹಾಗೂ ಇಕೆಬಾನೆ ಹೂವಿನ ಜೋಡಣೆಯ ಪ್ರದರ್ಶನ ಏರ್ಪಡಿಸಲಾಗುತ್ತದೆ.
ಈ ಸಂದರ್ಭ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶಶಿಧರ್ ಎಚ್., ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಸದಸ್ಯರಾದ ಕೆ. ರಾಮ ಮುಗ್ರೋಡಿ, ಜಿ.ಕೆ. ಭಟ್, ಜಗನ್ನಾಥ್ ಗಾಂಭೀರ್, ಸಿರಿ ತೋಟಗಾರಿಕಾ ಸಂಘದ ಉಪಾಧ್ಯಕ್ಷೆ ಭಾರತಿ ನಿರ್ಮಲ್, ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್ ಸಿ.ಎಂ., ಪ್ರದೀಪ್ ಡಿಸೋಜ, ಕೆ. ಪ್ರವೀಣ್, ವೈಕುಂಠ ಹೇರಳೆ ಹಾಗೂ ಹರೀಶ್ಚಂದ್ರ ಅಡ್ಕ ಉಪಸ್ಥಿತರಿದ್ದರು.
ಪ್ರವೇಶ ದರ
ವಯಸ್ಕರಿಗೆ ₹30 ಹಾಗೂ ಮಕ್ಕಳಿಗೆ ₹20 ಪ್ರವೇಶ ದರ ನಿಗದಿಪಡಿಸಲಾಗಿದೆ. ಶಾಲಾ ಶಿಕ್ಷಕರೊಂದಿಗೆ ಸಮವಸ್ತ್ರದಲ್ಲಿ ಆಗಮಿಸುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುವುದು.












