ಇತ್ತೀಚಿನ ಸುದ್ದಿ
ಕುಶಾಲನಗರ ವೈದ್ಯರ ಮೇಲೆ ಸುಳ್ಳು ಆರೋಪ. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಜಿಲ್ಲಾಧಿಕಾರಿಗೆ ಮನವಿ
20/11/2025, 21:19
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಚೇತನ್ ರವರ ಮೇಲೆ ಲೈಂಗಿಕ ಕಿರುಕುಳ ಹಾಗೂ ಜಾತಿ ನಿಂದನೆ ಸುಳ್ಳು ದೂರು ನೀಡಿರುವ ಬಗೆ ಖಂಡಿಸಿ ಇಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಮಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
*ಘಟನೆಯ ವಿವರ*. ಕಳೆದ 2020ರಲ್ಲಿ ಹೆಬ್ಬಾಲೆ ಗ್ರಾಮದ ಮಹಿಳೆಯೊಬ್ಬರು ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ನಂತರ 2025 ರಲ್ಲಿ ಅವರು ನೈಸರ್ಗಿಕ ಬದಲಾವಣೆಯಲ್ಲಿ ಮತ್ತೆ ಗರ್ಭವತಿ ಆಗಿದ್ದಾರೆ. ಈ ಸಂಬಂಧ ಸರ್ಕಾರದಿಂದ ಇಂತಹ ಪ್ರಕರಣಗಳಲ್ಲಿ ರೂ 60000 ಪರಿಹಾರ ನೀಡುವ ನಿಯಮ ಇದ್ದು ವೈದ್ಯಾಧಿಕಾರಿಗಳು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು. ಆದರೆ ಗರ್ಭವತಿಯಾದ ಕುಟುಂಬದವರು ವೈದ್ಯಾಧಿಕಾರಿಗಳನ್ನು 5 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದರು.
ಸರ್ಕಾರಕ್ಕೆ ತಾನು ಪತ್ರ ಬರೆದಿದ್ದು ಹಣ ಬಂದ ನಂತರ ಕೂಡಲೇ ಪರಿಹಾರ ಮೊತ್ತವನ್ನು ವಿತರಿಸುವುದಾಗಿ ಅವರು ಹೇಳಿದರು ಕೂಡ ತಾವೇ ಸ್ವತಹ ಹಣ ನೀಡುವಂತೆ ಅವರು ಒತ್ತಾಯಿಸಿದ್ದರು. ಇದನ್ನು ನಿರಾಕರಿಸಿದ ವೇಳೆ ಇದೀಗ ವೈದ್ಯರಾದ ಚೇತನ್ ರವರ ಮೇಲೆ ಲೈಂಗಿಕ ಕಿರುಕುಳ ಹಾಗೂ ಜಾತಿ ನಿಂದನೆ ದೂರು ನೀಡಿದ್ದಾರೆ ಎಂದು ಆರೋಪಿಸಿ, ಸುಳ್ಳು ದೂರು ನೀಡುವ ಮೂಲಕ ನಮಗೆ ಮಾನಸಿಕ ಹಿಂಸೆ ನೀಡುವುದರಿಂದ ವೈದ್ಯ ವೃತ್ತಿಯನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಬಳಿ ತಮ್ಮ ಮನವಿಯನ್ನು ಅರ್ಪಿಸಿದರು.













