ಇತ್ತೀಚಿನ ಸುದ್ದಿ
ಚಿತ್ತರಂಜನ್ ಬೋಳಾರ್ ಸಾರಥ್ಯದಲ್ಲಿ ಆತ್ಮಶಕ್ತಿ ಸಹಕಾರಿಯ ಅಸಾಮಾನ್ಯ ಸಾಧನೆ: ಕಂಕನಾಡಿ ಗರೋಡಿ ಕ್ಷೇತ್ರದ ಅಧ್ಯಕ್ಷರ ಶ್ಲಾಘನೆ
23/06/2025, 11:33

ಸುರತ್ಕಲ್(reporterkarnataka.com): ಸುರತ್ಕಲ್ ಪೂರ್ವ ಆರ್ಕೇಡ್ ನಲ್ಲಿ ಕಾರ್ಯಾಚರಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖೆಯನ್ನು ಶುಕ್ರವಾರ ಸುರತ್ಕಲ್ ಮುಖ್ಯ ರಸ್ತೆಯಲ್ಲಿರುವ ವಿಜಯ ಮಹಲ್ ಕಾಂಪ್ಲೆಕ್ಸ್ ಸುಸಜ್ಜಿತ ಹವಾನಿಯಂತ್ರಿತ ಶಾಖೆಗೆ ಸ್ಥಳಾಂತರಗೊಳಿಸಲಾಯಿತು.
ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದ ಅಧ್ಯಕ್ಷರಾದ ಕೆ. ಚಿತ್ತರಂಜನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುರತ್ಕಲ್ ಶಾಖೆ ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರ ಆಗಿರುವುದು ತುಂಬಾ ಸಂತೋಷದ ವಿಷಯ. ನಮ್ಮದೇ ಸೊಸೈಟಿ ಆಗಬೇಕೆಂಬ ನಮ್ಮ ಮಹದಾಸೆಗೆ ಆತ್ಮಶಕ್ತಿ ಸಹಕಾರ ಶಕ್ತಿ ನೀಡಿದೆ. ಈ ಸಂಸ್ಥೆಯು ಇಷ್ಟು ವೇಗವಾಗಿ ೩೩ ಶಾಖೆಗಳನ್ನು ಮಾಡಿರುವುದು ಅಸಾಮಾನ್ಯ ಸಾಧನೆ. ಇದರಲ್ಲಿ ಚಿತ್ತರಂಜನ್ ಬೋಳಾರ್ ಅವರ ಕ್ರಿಯಾಶೀಲ ನಾಯಕತ್ವ ಎಲ್ಲಾ ಸಿಬ್ಬಂದಿಗಳ ಅವಿರತವಾದ ಶ್ರಮ ಮತ್ತು ಆಡಳಿತ ಮಂಡಳಿಯವರ ಸಹಕಾರ ಇದೆ ಎಂದು ಶ್ಲಾಘಿಸಿದರು.
ಗಣಕೀಕೃತ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಚಿತ್ತರಂಜನ್ ಬೋಳಾರ್ ಅವರು ಆತ್ಮಶಕ್ತಿ ಸಹಕಾರಿಯನ್ನು ಅಭೂತಪೂರ್ವವಾಗಿ ಮತ್ತು ಶಿಸ್ತು ಬದ್ಧವಾಗಿ ಬೆಳೆಸಿದ್ದಾರೆ. ಸಂಸ್ಥೆಯ ಬೆಳವಣಿಗೆಗೆ ಚಿತ್ತರಂಜನ್ ಅವರ ನಾಯಕತ್ವವೇ ಕಾರಣ. ಒಂದು ಸಂಸ್ಥೆ ಲಾಭದಾಯಕವಾಗಿ ಬೆಳೆದರೆ ಅದರಿಂದ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ. ಆತ್ಮಶಕ್ತಿಯ ೩೩ ಶಾಖೆಗಳ ಮೂಲಕ ೨೦೦ ಕ್ಕೂ ಅಧಿಕ ಜನರಿಗೆ ಕೆಲಸ ಲಭಿಸಿದೆ. ಆತ್ಮಶಕ್ತಿ ಸಹಕಾರಿಯು ಅಭೂತಪೂರ್ವವಾಗಿ ಬೆಳೆಯಲು ಚಿತ್ತಣ್ಣನ ಕ್ರಿಯಾಶೀಲತೆಯ ಜೊತೆಗೆ ನಿರ್ದೇಶಕರ ಹಾಗೂ ಸಿಬ್ಬಂದಿಗಳ ಉತ್ತಮ ಕಾರ್ಯ ನಿರ್ವಹಣೆಯೂ ಇದೆ. ಸುರತ್ಕಲ್ ಭಾಗದಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಇನ್ನಷ್ಟು ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್ ರವರು ಮಾತನಾಡಿ, ಕಳೆದ ೧೩ ವರ್ಷಗಳಿಂದ ಆತ್ಮಶಕ್ತಿ ಸಂಸ್ಥೆಯು ಜಿಲ್ಲಾದ್ಯಂತ ಉತ್ತಮ ಸೇವೆ ನೀಡುತ್ತಿದೆ. ಕ್ರಿಯಾಶೀಲ ನಾಯಕತ್ವ, ಉತ್ತಮ ನಿರ್ದೇಶಕ ಮಂಡಳಿ, ನುರಿತ ಸಿಬ್ಬಂದಿಗಳು, ಆತ್ಮಶಕ್ತಿ ಸಂಸ್ಥೆಯ ಬೆಳವಣಿಗೆಯ ಹಿಂದೆ ಇದೆ. ಈ ಸಂಸ್ಥೆ ರಾಜ್ಯ ಮಟ್ಟದಲ್ಲಿ ಉನ್ನತವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಶ್ರೀ ನಾರಾಯಣಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಮನಸ್ಸು ಮಾಡಿದರೆ ಹೇಗೆ ಬೆಳೆಯಬಹುದು, ಏನು ಮಾಡಬಹುದು ಎಂಬುವುದನ್ನು ಆತ್ಮಶಕ್ತಿ ಸಹಕಾರಿ ಸಂಸ್ಥೆ ಮಾಡಿ ತೋರಿಸಿದೆ. ಎಲ್ಲಿ ಕ್ರಿಯಾಶೀಲ ನಾಯಕತ್ವ, ದಕ್ಷ ಆಡಲಿತ ಮಂಡಳಿ, ನುರಿತ ಸಿಬ್ಬಂದಿಗಳು ಒಂದು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಾರೋ ಅಲ್ಲಿ ಮೇಲ್ಮುಖವಾಗಿ ಬೆಳೆಯಬಹುದು ಎಂಬುದಕ್ಕೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಉತ್ತಮ ಉದಾಹರಣೆಯಾಗಿದೆ. ಒಂದು ಸಂಸ್ಥೆ ಸಣ್ಣ ಅವಧಿಯಲ್ಲಿ ಹೇಗೆ ಬೆಳೆಯಬಹುದು ಎಂಬುವುದನ್ನು ಆತ್ಮಶಕ್ತಿ ಸಹಕಾರಿ ಸಂಸ್ಥೆ ಸಾಧಿಸಿ ತೋರಿಸಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಉತ್ತಮವಾಗಿ ಸಹಕಾರಿ ಸಂಸ್ಥೆಗಳು ಜನರಿಗೆ ಸೇವೆ ಒದಗಿಸುತ್ತಿದೆ. ಆತ್ಮಶಕ್ತಿ ಸಹಕಾರಿ ಸಂಸ್ಥೆಯು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದು ಬೇಗ ೧೦೦ ಶಾಖೆಗಳು ತೆರೆಯಲಿ ಎಂದು ಶುಭ ಹಾರೈಸಿದರು.
ಸಹಕಾರ ಸಂಘಗಳ ನಿವೃತ್ತ ಉಪನಿಬಂಧಕ ಚಂದ್ರಶೇಖರ ಸುವರ್ಣ ಮಾತನಾಡಿ ಆತ್ಮಶಕ್ತಿ ಸಹಕಾರಿಯು ೧೩ ವರ್ಷದ ಅವಧಿಯಲ್ಲಿ ೩೩ ಶಾಖೆ ತೆರೆದು ಅತ್ಯುತ್ತಮವಾಗಿ ಕೆಲಸ ಮಾಡಿ ಹಲವಾರು ಪ್ರಶಸ್ತಿ ಪಡೆದಿದೆ. ಇದು ಆತ್ಮಶಕ್ತಿ ಸಹಕಾರಿಯ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಹಾಗೂ ಅವರ ನಿರ್ದೇಶಕ ಮಂಡಳಿಯ ಕ್ರಿಯಾಶೀಲತೆಗೆ ಸಾಕ್ಷಿ. ಒಂದು ಆರ್ಥಿಕ ಸಂಸ್ಥೆ ಉನ್ನತವಾಗಿ ಅದು ನೀಡುವ ಸೇವೆ ಮುಖ್ಯವಾಗುತ್ತದೆ. ಈ ಸಂಸ್ಥೆಯನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದರಿAದ ಸದಸ್ಯರ ಮನಸ್ಸು ಗೆದ್ದಿದೆ. ಯಾವುದೇ ಸಂಸ್ಥೆ ಉತ್ತಮವಾಗಿ ಬೆಳೆಯಬೇಕಾದರೆ ಮೊದಲಿಗೆ ಸದಸ್ಯರ ಮನಸ್ಸು ಗೆಲ್ಲಬೇಕು. ಅದು ಸಾಧ್ಯ ಆಗಿದ್ದರಿಂದ ಆತ್ಮಶಕ್ತಿ ಇಷ್ಟು ಬೆಳೆಯಲು ಸಾಧ್ಯವಾಗಿದೆ. ಮುಂದೆ ಇದು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಆಗಿ ಬೆಳೆಯಲಿ ಎಂದು ಆಶಯ ವ್ಯಕ್ತ ಪಡಿಸಿದರು.
ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಜಯಾನಂದ ಎಮ್ ಮಾತನಾಡಿ ಆತ್ಮಶಕ್ತಿ ಸಂಸ್ಥೆಯ ಸಿಬ್ಬಂದಿಗಳ ಅವಿರತ ಶ್ರಮದಿಂದ ಅತ್ಯದ್ಬುತ ಪ್ರಗತಿ ಸಾದ್ಯವಾಗಿದೆ. ಇದಕ್ಕೆ ಎಲ್ಲರೂ ಕಾರಣರು. ಬದ್ಧತೆ, ತ್ಯಾಗ, ಪ್ರೀತಿ ಇದ್ದರೆ ಉನ್ನತವಾಗಿ ಬೆಳೆಯಬಹುದು ಎಂಬುದು ಈ ಸಂಸ್ಥೆ ಮಾಡಿ ತೋರಿಸಿದೆ. ಗ್ರಾಹಕರು ನಮ್ಮ ವಠಾರಕ್ಕೆ ಬರುವಾಗ ಅವರನ್ನು ಅತ್ಯಂತ ಪ್ರೀತಿಯಿಂದ ಎದುರುಗೊಳ್ಳಬೇಕು. ಅವರಿಗೆ ನಾವು ಮಾಡುವ ಸೇವೆ ತಲುಪಬೇಕು. ಅಂತಹ ಸೇವೆ ಕೊಟ್ಟ ಸಂಸ್ಥೆ ಬೆಳೆಯುತ್ತದೆ. ಆತ್ಮಶಕ್ತಿ ಸಹಕಾರಿಯಲ್ಲಿ ಇದು ಸಾಧ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಹದಿಮೂರು ವರ್ಷಗಳಿಂದ ಸದಸ್ಯರಿಗೆ ಉತ್ತಮ ಮೊತ್ತದ ಡಿವಿಡೆಂಡ್ ಕೊಡಬೇಕಾದರೆ ನಿರಂತರವಾಗಿ ಲಾಭದಾಯಕವಾಗಿರಬೇಕು. ನಮ್ಮ ಎಲ್ಲಾ ಶಾಖೆಗಳಲ್ಲಿ ಸ್ಟಾö್ಯಂಪ್ ಪೇಪರ್ ಅನ್ನು ಸಂಜೆ ೫.೩೦ರ ತನಕ ಕೊಡುತ್ತಿದ್ದೇವೆ. ಇದಕ್ಕೆ ಕಾರಣ ನಮ್ಮ ಸಿಬ್ಬಂದಿಗಳು . ಎಲ್ಲಾ ಕಡೆ ಆರೋಗ್ಯ ಶಿಬಿರ ಆಯೋಜನೆ ಮಾಡುತ್ತಿದ್ದೇವೆ. ವಾರ್ಷಿಕ ಒಂದು ಕೋಟಿಗೂ ಮಿಕ್ಕಿ ಆರೋಗ್ಯ ವಿಮೆ ಮಾಡುತ್ತಿದ್ದೇವೆ. ಸುರತ್ಕಲ್ ಶಾಖೆಯ ಸ್ಥಳಾಂತರ ಸಮಾರಂಭದ ಪ್ರಯಕ್ತ ೧೦೦೦ ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. ೧೦.೫೦ ವನ್ನು ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂ ಗೆ ಗರಿಷ್ಟ ಮೌಲ್ಯ ರೂ. ೮,೦೦೦/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲವನ್ನು ಸದಸ್ಯರಿಗೆ ನೀಡಲಾಗುವುದು. ನಮ್ಮ ಎಲ್ಲಾ ಶಾಖೆಗಳಲ್ಲಿ ನೆಫ್ಟ್, ಆರ್‌ಟಿಜಿಎಸ್ ಸೇವೆಯು ವ್ಯವಹಾರದ ಸಮಯದಲ್ಲಿ ಲಭ್ಯವಿದ್ದು, ಅದೇ ರೀತಿ ವಿಮಾ ಪಾಲಿಸಿಗಳಾದ ಎಲ್‌ಐಸಿ, ಕೇರ್, ಇಫ್ಕೋಟೋಕಿಯ, ಜನರಲ್ ಇನ್ಸುರೆನ್ಸ್ ಕಂಪೆನಿ ಮುಂತಾದ ಕಂಪೆನಿಗಳ ವಿಮಾ ಸೌಲಭ್ಯಗಳು ಲಬ್ಯವಿದ್ದು, ಗ್ರಾಹಕರು ಇದರ ಸದುಪಯೋಗ ಪಡೆಯಬೇಕೆಂದು ವಿನಂತಿಸಿದರು.
ಸುರತ್ಕಲ್ ಶಾಖೆ ಜೊತೆ ಉತ್ತಮ ಭಾಂದವ್ಯ ಹೊಂದಿರುವ ಹಿರಿಯ ಸದಸ್ಯರಾದ ಸುಂದರ ಎಚ್ ಆರ್, ಉಮಾ ಕೆ, ರವಿಕಲಾ ಬಿ ರೈ, ಸದಾಶಿವ ಕೆ,. ಸೀತಾಲಕ್ಷ್ಮೀ ಕುಳಾಯಿ, ಚಂದ್ರಶೇಖರ ರೈ ನಾನಿಲ್, ಮಾಧವ ಎಂ ಅಂಚನ್, ಸದಾನಂದ ಎಚ್. ವಿ., ಬಿ. ರಾಜಾರಾಮ್ ಸೋಮಯಾಜಿ, ಬಾಲಕೃಷ್ಣ, ಭಾಸ್ಕರ್, ನರೇಂದ್ರ ಐ, ರಾಜು ಮೊಯಿಲಿ ಅವರನ್ನು ಗೌರವಿಸಲಾಯಿತು.
ಬಿಲ್ಲವ ಸಮಾಜ ಸೇವಾ ಸಂಘ ಇಡ್ಯಾ ಸುರತ್ಕಲ್ ಇದರ ಅಧ್ಯಕ್ಷರಾದ ಯಮುನಾ ಶೇಖರ್, ಕುಳಾಯಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೇಶವ ಸುವರ್ಣ, ಬಿಲ್ಲವ ಸಮಾಜ ಸೇವಾ ಸಂಘ ಹಳೆಯಂಗಡಿ ಇದರ ಅಧ್ಯಕ್ಷರಾದ ಚಂದ್ರಶೇಖರ್ ನಾನಿಲ್, ಯುವವಾಹಿನಿ (ರಿ.) ಪಣಂಬೂರು, ಕುಳಾಯಿ ಘಟಕದ ಅಧ್ಯಕ್ಷ ಧನೀಶ್ ಕುಳಾಯಿ, ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ನ ಮಾಜಿ ಅಧ್ಯಕ್ಷರಾದ ಚೆನ್ನಕೇಶವ, ಶೈಲೇಂದ್ರ ಸುವರ್ಣ, ಕಟ್ಟಡದ ಮಾಲಿಕ ಸತೀಶ್ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ಪರಮೆಶ್ವರ ಪೂಜಾರಿ, ಆನಂದ ಎಸ್ ಕೊಂಡಾಣ, ಸೀತಾರಾಮ್ ಎನ್, ರಮಾನಾಥ್ ಸನಿಲ್, ಮುದ್ದು ಮೂಡುಬೆಳ್ಳೆ, ದಿವಾಕರ್ ಬಿ ಪಿ, ಗೋಪಾಲ್ ಎಂ, ಉಮಾವತಿ, ಸಲಹೆಗಾರರಾದ ಅಶೋಕ್ ಕುಮಾರ್ ಪಾಲ್ಗೊಂಡಿದ್ದರು.
ಆತ್ಮಶಕ್ತಿ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ ವಂದಿಸಿದರು. ಸಹಾಯಕ ಪ್ರಬಂಧಕ ವಿಶ್ವನಾಥ್ ಹಾಗೂ ಶಾಖಾಧಿಕಾರಿ ಸುಮನ ರವರು ಕಾರ್ಯಕ್ರಮ ನಿರೂಪಿಸಿದರು.