ಇತ್ತೀಚಿನ ಸುದ್ದಿ
ಕುಡಿದ ಮತ್ತಿನಲ್ಲಿ ತಂದೆಯಿಂದ ಮಗನ ಭೀಕರ ಹತ್ಯೆ: ಮಚ್ಚಿನಿಂದ ಕೊಚ್ಚಿ ಕೊಲೆ; ಆರೋಪಿ ಬಂಧನ
04/01/2026, 18:16
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ತಂದೆಯೇ ತನ್ನ ಮಗನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಭೀಕರ ಘಟನೆ ನಡೆದಿದೆ.
ಮೃತ ದುರ್ದೈವಿಯನ್ನು ಪ್ರದೀಪ್ ಆಚಾರ್ (29) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಮೃತನ ತಂದೆ ರಮೇಶ್ ಆಚಾರ್ ಆಗಿದ್ದಾನೆ.

ಕ್ಷುಲಕ ಕಾರಣಕ್ಕೆ ಮದ್ಯಪಾನ ಮಾಡಿ ಆಗಾಗ್ಗೆ ಮನೆಯಲ್ಲೇ ಗಲಾಟೆ ಮಾಡುತ್ತಿದ್ದ ತಂದೆ–ಮಗನ ನಡುವಿನ ಕಲಹ ತೀವ್ರವಾಗಿದ್ದು, ಅವರ ಕಾಟದಿಂದ ಬೇಸತ್ತ ಪ್ರದೀಪ್ ತಾಯಿ ಮನೆ ಬಿಟ್ಟು ಹೋಗಿದ್ದರು. ನಂತರ ಮನೆಯಲ್ಲಿ ತಂದೆ–ಮಗ ಇಬ್ಬರೇ ವಾಸವಿದ್ದರು ಎನ್ನಲಾಗಿದೆ.
ನಿನ್ನೆ ರಾತ್ರಿ ಮದ್ಯದ ಅಮಲಿನಲ್ಲಿ ರಮೇಶ್ ಆಚಾರ್ ತನ್ನ ಮಗ ಪ್ರದೀಪ್‌ನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. ಗಂಭೀರ ಗಾಯಗೊಂಡ ಪ್ರದೀಪ್ ರಕ್ತದ ಮಡುವಿನಲ್ಲಿ ಇಡೀ ರಾತ್ರಿ ಬಿದ್ದು ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.
ಬೆಳಗ್ಗೆ ಮಗನ ಮೃತದೇಹವನ್ನು ಹಾಲ್‌ನಿಂದ ಹೊರಾಂಗಣಕ್ಕೆ ಎಳೆದು ತಂದಿದ್ದ ಆರೋಪಿಯನ್ನು ಕಂಡ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀತೇಂದ್ರ ಕುಮಾರ್ ದಯಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.













