5:10 AM Thursday16 - January 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ: ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸ ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಗೂಂಡಾ ಕಾಯಿದೆ ಹಾಕಿ: ಪೊಲೀಸ್ ಕಮಿಷನರ್ ಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

01/08/2023, 23:01

ಮಂಗಳೂರು(reporterkarnataka.com): ಮಾದಕ ವಸ್ತು ಹಾವಳಿ ಮಂಗಳೂರಿನಲ್ಲಿ ವಿಪರೀತ ಹೆಚ್ಚಾಗುತ್ತಿದ್ದು, ಡ್ರಗ್ಸ್ ಸರಬರಾಜು ಮಾಡುವವರನ್ನು ಗೂಂಡಾ ಕಾಯಿದೆಯಡಿ ಬಂಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಕಮಿಷನರ್ ಗೆ ಖಡಕ್ ಸೂಚನೆ ನೀಡಿದರು.
ಅವರು ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಪ್ರಗತಿ ಪರಿಶೀಲನೆ ಹಾಗೂ ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಹಿಂದೆ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು. ಪುನಃ ಮತ್ತೊಮ್ಮೆ ಆ ಸ್ಥಾನದಲ್ಲಿ ಬರಲು ಸಂಬಂಧಿಸಿದ ಅಧಿಕಾರಿಗಳೆಲ್ಲರೂ ಶ್ರಮವಹಿಸಬೇಕು. ಜಿಲ್ಲಾಧಿಕಾರಿಗಳು ತಿಂಗಳಿಗೊಮ್ಮೆ ಎಲ್ಲಾ ಅಧಿಕಾರಿಗಳ ಸಭೆ ನೀಡಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಹೇಳಿದರು.
ಅನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಗುಂಪು, ಯಾವುದೇ ಸಿದ್ದಾಂತದವರು ಕಾನೂನು ಕೈಗೆತ್ತಿಕೊಂಡು ಅನೈತಿಕ ಪೊಲೀಸ್ ಗಿರಿ ನಡೆಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲು ಸ್ಪಷ್ಟ ಸೂಚನೆ ನೀಡಿದರು.
ಸರ್ಕಾರದ ಸವಲತ್ತುಗಳು ಜನಸಾಮಾನ್ಯರಿಗೆ ತಲುಪುವಲ್ಲಿ ಅಧಿಕಾರಿಗಳು ಶ್ರಮ ವಹಿಸಬೇಕು. ಇದರಲ್ಲಿ ನಿರ್ಲಕ್ಷ, ಬೇಜವಾಬ್ದಾರಿ, ಭ್ರಷ್ಟಾಚಾರ ಕಂಡುಬಂದರೆ ಮುಲಾಜಿಲ್ಲದೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿಗಳು ಕಚೇರಿಯಲ್ಲಿ ಕೂರದೆ ಫೀಲ್ಡ್ ಗೆ ಇಳಿಯಬೇಕು ಆದಾಗ ಮಾತ್ರ ಸ್ಥಳೀಯ ಸಮಸ್ಯೆಗಳು ಅರಿವಿಗೆ ಬರುತ್ತವೆ. ಸುಮ್ಮನೆ ಜನಸಾಮಾನ್ಯರಿಗೆ ಕಿರುಕುಳ ಕೊಟ್ಟರೆ ಸಹಿಸಲಾಗದು, ಕರಾವಳಿ ಭಾಗದಲ್ಲಿ ಜನರು ಬಹಳ ಜಾಗೃತರಿದ್ದು ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದವರು ಸೂಚಿಸಿದರು.
ಮಳೆಯಿಂದ ಪೂರ್ತಿ ಹಾನಿಯಾದ ಮನೆಗಳಿಗೆ 5 ಲಕ್ಷ ಪರಿಹಾರಕ್ಕೆ ಇಂದೇ ಆದೇಶ ಹೊರಡಿಸುತ್ತೇನೆ ಎಂದು ಮೊದಲಿದ್ದ ರೀತಿಯಲ್ಲೇ ಎ, ಬಿ, ಸಿ ಕೆಟಗರಿಯಲ್ಲಿ ವಿಂಗಡಿಸಿ ಪರಿಹಾರ ನೀಡುವಂತೆ ಹೇಳಿದರು.
ಕಡಲ ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲು ತೀರ್ಮಾನಿಸಿದ್ದೇವೆ. ಕಡಲ ಕೊರೆತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಸೇರಿಸಿ ಸಮಗ್ರ ಚರ್ಚೆ ಮಾಡಿ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲು ತಿಳಿಸಿದರು.
ಸುಶಿಕ್ಷಿತರ ಜಿಲ್ಲೆ ಮಂಗಳೂರು ಶಿಕ್ಷಣ ಸೂಚ್ಯಂಕದಲ್ಲಿ ಕುಸಿಯುತ್ತಿರುವುದು ಒಳ್ಳೆ ಬೆಳವಣಿಗೆ ಅಲ್ಲ. ಈ ಬಗ್ಗೆ ಡಿಡಿಪಿಐ ಅವರಿಂದ ವಿವರಣೆ ಕೇಳಿದರು.
ಆರೋಗ್ಯ ಸೂಚ್ಯಂಕದಲ್ಲೂ ಕುಸಿದಿದೆ. ದಕ ಜಿಲ್ಲೆ 2015 ರಲ್ಲಿ 3 ಸ್ಥಾನದಲ್ಲಿತ್ತು. ಈಗ 23ನೇ ಸ್ಥಾನಕ್ಕೆ ಕುಸಿದಿರುವುದು ಏಕೆ, ತಾಯಿ ಮಕ್ಕಳ ಮರಣ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿರುವುದಕ್ಕೆ ಎಂ.ಎಂ.ಆರ್ ಸಮೀಕ್ಷೆಯ ವರದಿಯನ್ನು ತಿಳಿದುಕೊಂಡು ಅದನ್ನು ತಡೆಗಟ್ಟಲು‌ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಇನ್ನು ಮುಂದೆ ಅವರಿಗೆ ನೀಡಿದ ಕ್ವಾಟ್ರಸ್ ಗಳಲ್ಲೇ ನೆಲೆಸುವಂತೆ ಕ್ರಮ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ರೈತರಿಗೆ ಬೀಜ, ರಸಗೊಬ್ಬರದ ಕೊರತೆ ಆಗಬಾರದು. ಒಮ್ಮೆ ಬೀಜ, ರಸಗೊಬ್ಬರ ಕೊಟ್ಟರೆ ಮುಗಿಯಿತು ಎಂದು ಅಧಿಕಾರಿಗಳು ವರ್ತಿಸಬಾರದು. ಬೆಳೆಹಾನಿಯಾಗಿ ಮತ್ತೆ ಬೀಜ, ರಸಗೊಬ್ಬರಕ್ಕೆ ಬೇಡಿಕೆ ರೈತರಿಂದ ಬಂದರೆ ಬೇಡಿಕೆ ಪೂರೈಸಬೇಕು ಎಂದು ಸೂಚಿಸಿದರು.
ಅಡಕೆಗೆ ಎಲೆಚುಕ್ಕೆ ರೋಗ, ಹಳದಿ ರೋಗ, ಕೀಟ ಬಾದೆ ಯಾವ ಪ್ರಮಾಣದಲ್ಲಿ ಬಂದಿದೆ ಎನ್ನುವ ಬಗ್ಗೆ ಮಾಹಿತಿ ಪಡೆದ ಮುಖ‍್ಯಮಂತ್ರಿಗಳು ಈ ಸಂಬಂಧ ಕೃಷಿ ವಿಜ್ಞಾನಗಳು ಹಾಗೂ ತಜ್ಞರನ್ನು ಕರೆದು ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು 1.5 ಲಕ್ಷ ಕಿಲೋ ಲೀಟರ್ನಿಂದ 2 ಲಕ್ಷ ಕಿಲೋ ಲೀಟರ್ಗಳವರೆಗೆ ಹೆಚ್ಚಿಸಿದ್ದೇವೆ. ಇದರಿಂದ ಮೀನುಗಾರರಿಗೆ ಸರ್ಕಾರದಿಂದ 250 ಕೋಟಿ ರೂ.ಗಳಷ್ಟು ನೆರವು ನೀಡಿದ್ದೇವೆ. ಇದು ಮೀನುಗಾರ ಸಮುದಾಯಕ್ಕೆ ತಲುಪುತ್ತದೆಯೇ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಇದರಿಂದ ಸಮುದಾಯಕ್ಕೆ ದೊಡ್ಡ ಅನುಕೂಲವಾಗಿದೆ ಎಂದು ಉತ್ತರಿಸಿದರು.
ಮೀನುಗಾರಿಕಾ ದೋಣಿಗಳಲ್ಲಿನ ಸೀಮೆ ಎಣ್ಣೆ ಇಂಜಿನ್ಗಳನ್ನು ಪೆಟ್ರೋಲ್ ಇಂಜಿನ್ಗಳಾಗಿ ಬದಲಾಯಿಸಲು ತಲಾ 50,000 ರೂ. ಸಹಾಯಧನ ನೀಡುತ್ತಿದ್ದೇವೆ. ಪ್ರಸಕ್ತ ಸಾಲಿನಲ್ಲಿ 4,000 ಸೀಮೆ ಎಣ್ಣೆ ಇಂಜಿನ್ಗಳ ಬದಲಾವಣೆಗೆ 20 ಕೋಟಿ ರೂ. ಸಹಾಯಧನ ಒದಗಿಸಲಾಗುವುದು ಎಂದು ನಾವು ಆಯವ್ಯವಯದಲ್ಲಿ ಘೋಷಿಸಿದ್ದೇವೆ, ಈ ಕಾರ್ಯಕ್ರಮ ಸರಿಯಾಗಿ ಜಾರಿಯಾವಂತೆ ಕ್ರಮ ವಹಿಸಲು ಅಧಿಕಾರಿಗಳು ಸೂಚಿಸಿದರು.
ಶಕ್ತಿ ಯೋಜನೆಯಿಂದ ಜನರಿಂದ ಮತ್ತು ವಿದ್ಯಾರ್ಥಿ ಸಮೂಹದಿಂದ ಉತ್ತಮ ಸ್ಪಂದನೆ ಇರುವುದರಿಂದ ಸದ್ಯದಲ್ಲೇ 4000 ಹೆಚ್ಚುವರಿ ಬಸ್ ಗಳನ್ನು ಖರೀದಿಸುವುದಾಗಿ ಸಿಎಂ ತಿಳಿಸಿದರು.
ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳ ಲಾಭ ಜಿಲ್ಲೆಯ ಪ್ರತಿಯೊಬ್ಬ ಫಲಾನುಭವಿಗೂ ದೊರಕುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಾಸಕರು ಯಾವುದೇ ಪಕ್ಷದವರಿರಲಿ ಅವರನ್ನು ಅಧಿಕಾರಿಗಳು ಜನಪ್ರತಿನಿಧಿಗಳು ಎಂದು ಪರಿಗಣಿಸಿ ಅವರಿಗೆ ಗೌರವ ಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ರಜನೀಶ್ ಗೋಯಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಲ್. ಕೆ. ಅತಿಕ್, ಮಂಗಳೂರು ಮೇಯರ್ ಜಯಾನಂದ ಅಂಚನ್ ವೇದಿಕೆಯಲ್ಲಿದ್ದರು.
ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯಕ್, ಭಾಗಿರಥಿ ಮುರುಳ್ಯ ಹಾಗೂ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಪ್ರತಾಪ ಸಿಂಹ ನಾಯಕ್, ಮಂಜುನಾಥ್ ಭಂಡಾರಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು