ಇತ್ತೀಚಿನ ಸುದ್ದಿ
ಮಾದಕ ವಸ್ತು ಮಾರಾಟ: ಬಿಹಾರದ ಇಬ್ಬರು ಆರೋಪಿಗಳ ಬಂಧನ; 1 ಕೆಜಿಗೂ ಅಧಿಕ ಗಾಂಜಾ ವಶ
02/09/2025, 22:30

ಮಂಗಳೂರು(reporterkarnataka.com): ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ಹೊರ ರಾಜ್ಯದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಹರ್ಷ ಕುಮಾರ್ ಮತ್ತು ಅಮರ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಹರ್ಷ ಕುಮಾರ್ ಎಂಬಾತನಿಂದ 1 ಕೆಜಿ 230 ಗ್ರಾಂ ಮತ್ತು ಅಮರ್ ಕುಮಾರ್ ಎಂಬಾತನಿಂದ 80 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 75,000 ರೂ. ಆಗಿದೆ.
ಆರೋಪಿಗಳು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುವನ್ನು ಮಾರಾಟ ಮತ್ತು ಸಾಗಾಟ ಮಾಡುತ್ತಿದ್ದಾಗ ಪಣಂಬೂರು ಪೊಲೀಸರು ದಸ್ತಗಿರಿ ಮಾಡಿ ಮಾದಕ ವಸ್ತುಗಳನ್ನು ಮತ್ತು ಮೊಬೈಲ್ ಫೋನ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ 62ನೇ ತೋಕೂರು ಗ್ರಾಮದ, ತೋಕೂರು ರೈಲ್ವೇ ಸ್ಟೇಶನ್ ಬಳಿ ಸಾರ್ವಜನಿಕರು ಓಡಾಡುವ ರಸ್ತೆಯ ಬದಿಯಲ್ಲಿ ಇಬ್ಬರು ಯುವಕರು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪಣಂಬೂರು ಠಾಣಾ ಪಿಎಸ್ಐ ಜ್ಞಾನಶೇಖರರವರಿಗೆ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ನಗರ ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತಕರಾದ ಶ್ರೀಕಾಂತ್ ಕೆ. ಅವರ ನಿರ್ದೆಶನದಂತೆ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಲೀಂ ಅಬ್ಬಾಸ್ ಅವರ ನೇತೃತ್ವದಲ್ಲಿ ಜ್ಞಾನಶೇಖರ ಅವರು ತಮ್ಮ ಸಿಬ್ಬಂದಿಗಳ ಜೊತೆ ಕಾರ್ಯಾಚರಣೆ ನಡೆಸಿದ್ದರು.
ಆರೋಪಿಗಳ ಪೈಕಿ ಒಬ್ಬಾತನು ಬಿಹಾರದ ಪಟ್ನಾದಲ್ಲಿ ಮೀಶೋ ಮತ್ತು ಫ್ಲಿಫ್ ಕಾರ್ಟ್ ಹಬ್ ನಲ್ಲಿ ಮತ್ತು ಇನ್ನೊಬ್ಬ ದೆಹಲಿಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.