ಇತ್ತೀಚಿನ ಸುದ್ದಿ
ಡಾ. ಅಂಬೇಡ್ಕರ್‌ಗೆ ಅವಮಾನ: ಸೇವೆಯಿಂದ ವಜಾ ಮಾಡಲು ದಲಿತ ಸಂಘಟನೆಗಳ ಮಹಾ ಒಕ್ಕೂಟ ಒತ್ತಾಯ
27/01/2022, 14:52
ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿ ಧ್ವಜಾರೋಹಣಾ ನೆರವೇರಿಸಿದ ರಾಯಚೂರು ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ನಗರದಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟ ಒತ್ತಾಯ ಮಾಡಿದೆ.
ನಗರದ ತಾಲೂಕು ಕಚೇರಿ ಮುಂಭಾಗದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಬಳಿ ಜಮಾಯಿಸಿದ ಪ್ರತಿಭಟಿಸಿದ ದಲಿತ ಸಂಘಟನೆಗಳ ಮುಖಂಡರು ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅವರು ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ತೆಗೆಸಿ ಧ್ವಜಾರೋಹಣ ನೇರವೇರಿಸಿರುವುದು ಡಾ. ಅಂಬೇಡ್ಕರ್ ಅವರನ್ನು ಅವಮಾನ ಮಾಡಿದಂತೆ. ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿಟ್ಟು ಗಣರಾಜ್ಯೋತ್ಸ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಆದರೆ ರಾಯಚೂರು ನ್ಯಾಯಾಧೀಶರು ಅಂಬೇಡ್ಕರ್ ಭಾವಚಿತ್ರ ತೆಗೆಸಿ ಧ್ವಜಾರೋಹಣ ಮಾಡಿದ್ದಾರೆ. ಇದು ದೇಶದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಕೂಡಲೇ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ನ್ಯಾಯಾಧೀಶರನ್ನು ಸರ್ಕಾರ ಸೇವೆಯಿಂದ ವಜಾಗೊಳಿಸಲು ಹಿಂದೇಟು ಹಾಕಿದರೆ, ಗ್ರಾಮೀಣ ಮಟ್ಟದಿಂದ ಸಂಘಟನೆ ಮಾಡಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ದಲಿತ ಸಂಘಟನೆಗಳ ಮಹಾ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಉಮೇಶ್ ಚಂದ್ರ ಬ್ಯಾನರ್ಜಿ, ದಲಿತ ಮುಖಂಡರಾದ ಕಾಂತರಾಜು, ಟಿ. ರಾಮಾಂಜನೇಯ, ವೀರೇಶ್, ಎಂ. ಮಾರಣ್ಣ, ಮಹೇಂದ್ರ, ಈರಣ್ಣ ಸೇರಿದಂತೆ ಮುಂತದಾವರು ಇದ್ದರು.