ಇತ್ತೀಚಿನ ಸುದ್ದಿ
Doctor | ರೋಗಿಗಳಲ್ಲಿ ಬದುಕುವ ಚೈತನ್ಯ ಚಿಗುರಿಸಬಲ್ಲ ಡಾಕ್ಟರ್!: ಪೀಪಲ್ಸ್ ಫ್ರೆಂಡ್ಲಿ ವೈದ್ಯ ಡಾ. ಮುನೀರ್ ಅಹಮ್ಮದ್
16/02/2025, 10:00

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ವೈದ್ಯರನ್ನು ನಾವು ‘ವೈದ್ಯೋ ನಾರಾಯಣೊ ಹರಿ’ ಎನ್ನುತ್ತೇವೆ. ಯಾಕೆಂದರೆ ಅನಾರೋಗ್ಯಕ್ಕೆ ಒಳಗಾದ ನಮ್ಮನ್ನು ಬದುಕಿಸುವ ಅವರು ದೇವರಿಗೆ ಸಮಾನ ಎಂದು. ಆದರೆ ಇಂದಿನ ಕಾಲದಲ್ಲಿ ವೈದ್ಯರು ಕಾಂಚಾನದ ಬೆನ್ನು ಬಿದ್ದಿದ್ದಾರೆ. ಮೆಡಿಕಲ್ ಮಾಫಿಯಾ ತಲೆ ಎತ್ತಿದೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿಯೂ ಮರುಭೂಮಿಯಲ್ಲಿ ಅಪರೂಪದಲ್ಲಿ ಒಯಾಸಿಸ್ ಕಂಡು ಬಂದಂತೆ ಅಲ್ಲೊಬ್ಬ, ಇಲ್ಲೊಬ್ಬ ವೈದ್ಯರು ಕಾಣಸಿಗುತ್ತಾರೆ. ಅಂತಹ ವೈದ್ಯರಲ್ಲಿ ಡಾ. ಮುನೀರ್ ಅಹಮ್ಮದ್ ಅವರು ಒಬ್ಬರು.
ಸಿಂಪಲ್ ವ್ಯಕ್ತಿತ್ವ, ನವಿರಾದ ಹಾಸ್ಯ, ರೋಗಿಗಳಲ್ಲಿ ಬದುಕುವ ಚೈತನ್ಯವನ್ನು ಮತ್ತೆ ಚಿಗುರಿಸಬಲ್ಲ ಅದಮ್ಯ ಶಕ್ತಿ ಇರುವ ವೈದ್ಯರೇ ಡಾ.ಮುನೀರ್ ಅಹಮ್ಮದ್. ಸ್ನಾತಕೋತ್ತರ ಎಂಡಿ ಪದವಿ ಪಡೆದ ಡಾ.ಮುನೀರ್ ಅವರು ಕನ್ಸಲ್ಟೆಂಟ್ ಫಿಸಿಶಿಯನ್ ಆಗಿ ತನ್ನ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿದ್ದಾರೆ. ವೈದ್ಯಕೀಯ ಪದವಿ ಕಲಿಯುವಾಗ ಕೈಗೊಂಡ ಪ್ರತಿಜ್ಞೆಯ ಅನುಸಾರವಾಗಿಯೇ ವೃತ್ತಿ ಜೀವನವನ್ನು ನಡೆಸುತ್ತಿರುವ ಬೆರಳೆಣಿಯ ವೈದ್ಯರ ಪಟ್ಟಿ ಡಾ. ಮುನೀರ್ ಸೇರುತ್ತಾರೆ ಎನ್ನುವುದು ಅವರಿಂದ ಚಿಕಿತ್ಸೆ ಪಡೆದ ರೋಗಿಗಳ ಅಭಿಮಾನದ ನುಡಿ.
ಡಾ. ಮುನೀರ್ ಅವರು ಎಂದೂ ಫೀಸಿನ ಹಿಂದೆ ಬಿದ್ದವರಲ್ಲ. ಸಪ್ಪೆ ಮುಖ ಹಾಕಿಕೊಂಡು ಅವರ ಕ್ಲಿನಿಕ್ ಗೆ ಬಂದ ರೋಗಿಗಳು ನಗು ಮುಖದಿಂದ, ಧನ್ಯತಾ ಮನೋಭಾವದಿಂದ ಹೊರಗೆ ಬರುತ್ತಿರುವುದೇ ಇದಕ್ಕೆ ಸಾಕ್ಷಿ. ಹಲವು ಕಾರಣಗಳಿಗೆ ಒತ್ತಡಕ್ಕೊಳಗಾದ ರೋಗಿಗಳನ್ನು ಅವರ ಕುಟುಂಬದವರನ್ನು ನಕ್ಕು ಹೊರಗೆ ಬರುವಷ್ಟರ ಮಟ್ಟಿಗೆ ತಮಾಷೆಯ ಕಲೆಯೂ ಈ ವೈದ್ಯರಲ್ಲಿ ಅಡಕವಾಗಿದೆ. ಬದುಕುವ ಆಸೆಯನ್ನೇ ಬಿಟ್ಟ ಅದೆಷ್ಟೋ ಮಂದಿಯಲ್ಲಿ ಬದುಕಿನ ಚೈತನ್ಯವನ್ನು ಮೂಡಿಸಿದ್ದಾರೆ.
ತನ್ನ ಕೈ ಕೆಳಗಿನ ಸಿಬ್ಬಂದಿಗಳ ವಿಷಯದಲ್ಲಿಯೂ ಡಾ.ಮುನೀರ್ ಅವರು ತುಂಬಾ ಪರ್ಫೆಕ್ಟ್. ಬೈಯುವುದು, ಮೂದಲಿಸುವುದು ಇವರ ಜಾಯಮಾನವೇ ಅಲ್ಲ. ಕೈಕೆಳಗಿನ ಸಿಬ್ಬಂದಿಗಳು ಏನೇ ತಪ್ಪು ಮಾಡಿದರೂ ಶಿಕ್ಷೆ ಎನ್ನುವುದು ಇಲ್ಲ. ಬದಲಿಗೆ ಅವರಿಗೆ ಮತ್ತಷ್ಟು ಮಾರ್ಗದರ್ಶವನ್ನು ನೀಡಿ ವೈದ್ಯಕೀಯ ರಂಗದಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸುತ್ತಾರೆ. ಹೆಚ್ಚಿನ ವೈದ್ಯರ ಜತೆ ನರ್ಸ್ ಗಳು ರೌಂಡ್ಸ್ ಗೆ ಹೋಗುವಾಗ ಡಾಕ್ಟರ್ ಬೈಯುತ್ತಾರೋ ಏನೋ ಎಂದು ಗಲಿಬಿಲಿಗೊಳಗಾಗುತ್ತಾರೆ. ಆದರೆ, ಡಾ. ಮುನೀರ್ ಅವರ ವಿಷಯದಲ್ಲಿ ಟ್ರೈನೀ ನರ್ಸ್ ಗಳಿಂದ ಆರಂಭಗೊಂಡು ಸೀನಿಯರ್ ನರ್ಸ್ ಗಳ ವರೆಗೆ ಎಲ್ಲರೂ ಆತ್ಮವಿಶ್ವಾಸದಿಂದಲೇ ಇರುತ್ತಾರೆ. ರೋಗಿಗಳಿಗೆ ಇಂಜೆಕ್ಷನ್ ಚುಚ್ಚುವುದರಿಂದ ಹಿಡಿದು ಎಲ್ಲ ರೀತಿಯ ಟ್ರೀಟ್ ಮೆಂಟಿನಲ್ಲೂ ತನ್ನದೇ ಆದ ಛಾಪನ್ನು ಅವರು ಕಾಪಾಡಿಕೊಂಡು ಬಂದಿದ್ದಾರೆ.
ರೋಗದಿಂದ ಇನ್ನೇನು ಬದುಕುವುದೇ ಇಲ್ಲ ಎಂಬ ತೀರ್ಮಾನಕ್ಕೆ ಬಂದ ಅದೆಷ್ಟೋ ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ, ದೇಹ ಔಷಧಿಗೆ ಸ್ಫಂದಿಸುವಂತೆ ಮಾಡುವ ಮಾಂತ್ರಿಕತೆಯೂ ಅವರಿಗೆ ಗೊತ್ತು. ‘ದಾದಾತ್ನ್ದ ಈರೆಗ್ ಲಕ್ಕಲೆಯೇ, ನಡಪುಲೆ, ಯಾವು ಯೇತ್ ಮೂಲೆ ಕುಲ್ಲವರ್ ಇಲ್ಲಗ್ ಪೋಲೆ. ಈರೆನ್ ತೂದು ತೂದು ಬೋರಂಡ್’ ಎಂದು ತುಳುವಿನಲ್ಲಿ ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತಾರೆ.
ಎಷ್ಟು ಚಂದ ಆಗಿದ್ದಾರೆ. ಇವರಿಗೆ ಹುಷಾರಿಲ್ಲದ ಹಾಗೆ ಕಾಣುತ್ತಾ? ಅಂತ ನರ್ಸ್ ಗಳಲ್ಲಿ ರೋಗಿಯ ಮುಂದೆ ಹೇಳಿ ಅವರನ್ನು ಹುರಿದುಂಬಿಸುತ್ತಾರೆ.
ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವರಿಗೆ ಸಾಧಿಸುವ ಛಲ ಇತ್ತು. ತಂದೆ ಮೊಹಮ್ಮದ್ ಕಮಲ್ ಅವರು ಮೂಡಾದ
ಚೇರ್ ಮ್ಯಾನ್ ಆಗಿದ್ದರು.ಸಮಾಜ ಸೇವೆಯಲ್ಲಿ ತೊಡಗಿದ್ದ ಅವರಿಗೆ ಸ್ವಂತ ಮನೆಯೂ ಇರಲಿಲ್ಲ.
ವೈದ್ಯರಾದ ಡಾ. ಮುನೀರ್ ಅವರು ಸುಮಾರು 48 ವರ್ಷಗಳಿಂದ ವೈದ್ಯಕೀಯ ವೃತ್ತಿಯಲ್ಲಿ ತೃಪ್ತಿಕರ ಜೀವನ ನಡೆಸುತ್ತಿದ್ದಾರೆ. ಮಂಗಳೂರು ವಿವಿ ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಐಎಂಐ ವೈದ್ಯಕೀಯ ಸಂಘದ ಲೈಫ್ ಟೈಮ್ ಸದಸ್ಯರಾಗಿದ್ದಾರೆ.
ಎಪಿಐ, ಎಎಂಸಿ ಸದಸ್ಯ.ಕೂಡ ಹೌದು. ಪತ್ನಿ ಹೌಸ್ ವೈಫ್, ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಾಕೆ ಇಂಟಿರಿಯಾರ್ ಡಿಸೈನರ್, ಮತ್ತೊಬ್ಬಳು ತಂದೆಯಂತೆಯೇ ವೈದ್ಯೆ.
ಡಾ.ಮುನೀರ್ ಅವರು ಮಂಗಳೂರಿನ ಯುನಿಟಿ ಹಾಸ್ಪಿಟಲ್, ಇಂದಿರಾ ಹಾಸ್ಪಿಟಲ್, ಹೈ ಲ್ಯಾಂಡ್, ತೊಕ್ಕೊಟ್ಟು ನೇತಾಜಿ ಹಾಸ್ಪಿಟಲ್ ಗಳಲ್ಲಿ ಸೇವೆಗೆ ಲಭ್ಯವಿರುತ್ತಾರೆ. ಮಂಗಳೂರಿನ
ಹೈಲ್ಯಾಂಡ್ ನ ಎಸ್. ಕೆ ಕಾಂಪ್ಲೆಕ್ಸ್ ನಲ್ಲಿ ಅವರ ಕ್ಲಿನಿಕ್ ಇದೆ.
ತೀರಾ ಅಗತ್ಯ ಎಂದರಷ್ಟೇ ಆಸ್ಪತ್ರೆಗಳಿಗೆ ದಾಖಲಾಗಲು ಹೇಳುತ್ತಾರೆ. ಹಣದ ಮುಖ ನೋಡಿ ಚಿಕಿತ್ಸೆ ಕೊಡದ ಡಾ. ಮುನೀರ್ ಅವರಿಗೆ ವೈದ್ಯೋ ನಾರಾಯಣೊ ಹರಿ ಎಂಬ ಮಾತು ಅಕ್ಷರಶಃ ಅನ್ವಯಿಸುತ್ತದೆ.
ನಾನು ಬದುಕಿ ಉಳಿದ್ದೇನೆ ಎಂದರೆ ಡಾ. ಮುನೀರ್ ಅಹಮದ್ ಅವರಿಂದ. 10 ವರ್ಷಗಳ ಹಿಂದೆಯೇ ಬದುಕುಳಿಯುವ ಸ್ಥಿತಿಯಲ್ಲಿ ಇರಲಿಲ್ಲ. ಇವರ ಕೈಗುಣದಿಂದ ಇವತ್ತಿಗೂ ಜೀವಂತ ವಾಗಿದ್ದೇನೆ.
– ರೇವತಿ ಮಂಗಳೂರು