ಇತ್ತೀಚಿನ ಸುದ್ದಿ
DK | ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಎಸ್‌ಐಟಿ ತಂಡ ಇಂದು ಮಂಗಳೂರಿಗೆ? ತನಿಖಾ ಪ್ರಕ್ರಿಯೆ ಆರಂಭ ಸಾಧ್ಯತೆ
23/07/2025, 13:20

ಮಂಗಳೂರು(reporterkarnataka.com): ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಸಮಾಧಿಗಳು, ನಾಪತ್ತೆಗಳು ಮತ್ತು ಮಹಿಳೆಯರು ಮತ್ತು ವಿದ್ಯಾರ್ಥಿಗಳ ಮೇಲಿನ ಅಪರಾಧಗಳ ತನಿಖೆಗಾಗಿ ರಾಜ್ಯ ಸರಕಾರ ನೇಮಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಮಂಗಳೂರಿಗೆ ಆಗಮಿಸಲಿದ್ದು, ತನಿಖೆ ಆರಂಭಿಸಲಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಎಸ್ ಐಟಿ ತಂಡದ ಮುಖ್ಯಸ್ಥರು ಇಂದು ಸಂಜೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಚರ್ಚಿಸುವ ನಿರೀಕ್ಷೆ ಇದೆ. ಅದೇ ರೀತಿ ಎಸ್ ಐಟಿ ತಂಡ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಯಾವುದೇ ಕ್ಷಣದಲ್ಲಿ ಆಗಮಿಸುವ ಸಾಧ್ಯತೆಗಳಿವೆ.
ಈ ಮಧ್ಯೆ ರಾಜ್ಯ ಸರಕಾರ ಎಸ್ ಐಟಿ ತಂಡಕ್ಕೆ ಉನ್ನತ ಅಧಿಕಾರಿಗಳನ್ನೊಳಗೊಂಡ 20 ಮಂದಿ ಪೊಲೀಸರನ್ನು ಸೇರ್ಪಡೆಗೊಳಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.
ಹೊಸತಾಗಿ ಸೇರ್ಪಡೆಗೊಂಡ ಪೊಲೀಸರಲ್ಲಿ ಓರ್ವ ಎಸ್ ಪಿ, ಇಬ್ಬರು ಡಿಎಸ್ಪಿ, ನಾಲ್ವರು ಇನ್ಸ್ ಪೆಕ್ಟರ್, 7 ಮಂದಿ ಸಬ್ ಇನ್ಸ್ ಪೆಕ್ಟರ್, ಸಿಪಿಐ, ಎಎಸ್ ಐ ಇದ್ದಾರೆ. ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಖಡಕ್ ಪೊಲೀಸ್ ಅಧಿಕಾರಿಗಳನ್ನು ಸೇರಿಸಲಾಗಿದೆ.
ಎಸ್ ಐಟಿ ತಂಡ ಇಂದಿನಿಂದಲೇ ತನಿಖಾ ಪ್ರಕ್ರಿಯೆ ಆರಂಭಿಸುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಕಡತಗಳನ್ನು ಹಸ್ತಾಂತರಿಸುವುದಕ್ಕಾಗಿ ಬೆಳ್ತಂಗಡಿ ಮತ್ತು ಧರ್ಮಸ್ಥಳ ಠಾಣೆಯಲ್ಲಿ ಸಿದ್ದತೆಗಳು ನಡೆಯುತ್ತಿದೆ.
ಸಾರ್ವಜನಿಕರ ಹಾಗೂ ಪ್ರಗತಿಪರ ಸಂಘಟನೆಗಳ ತೀವ್ರ ಒತ್ತಡದ ಹಿನ್ನೆಲೆಯಲ್ಲಿ
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾದ ಅಪರಾಧದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿ ಸರಕಾರ ಶನಿವಾರ ಆದೇಶ ಹೊರಡಿಸಿತ್ರು.
ಕಳೆದ 20 ವರ್ಷಗಳಿಂದ ಧರ್ಮಸ್ಥಳದಲ್ಲಿ ನಡೆದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ನಾಪತ್ತೆ ಪ್ರಕರಣಗಳು, ಅಸಹಜ ಸಾವಿನ ಕೊಲೆ ಪ್ರಕರಣಗಳು ಮತ್ತು ಅತ್ಯಾಚಾರ ಪ್ರಕರಣಗಳ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ರಚಿಸುವಂತೆ ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿತ್ತು.