ಇತ್ತೀಚಿನ ಸುದ್ದಿ
Dk BJP | ದ.ಕ.ದಲ್ಲಿ ಬಿಜೆಪಿಯ ಗೆಲ್ಲಲು ಸಾಧ್ಯವಾಗದ ಹೇಡಿಗಳು ನಮ್ಮ ಶಾಸಕರ ಮೇಲೆ ಹಗೆ ಸಾಧಿಸುತ್ತಿದ್ದಾರೆ: ದ.ಕ. ಯುವ ಮೋರ್ಚಾ ಆರೋಪ
08/03/2025, 12:01

ಮಂಗಳೂರು(reporterkarnataka.com):ರಾಜ್ಯದಲ್ಲಿ ತುಘಲಕ್ ಆಡಳಿತ ನಡೆಯುತ್ತಿದೆಯೋ ಅಥವಾ ಸಿದ್ದರಾಮಯ್ಯ ಅವರ ಆಡಳಿತ ನಡೆಯುತ್ತಿದೆಯೋ ಅನುಮಾನ ಸೃಷ್ಟಿಯಾಗಿದೆ. ರಾಜ್ಯಭಾರ ನಡೆಸುವ ಸರ್ಕಾರ ರಾಜ್ಯದ ಅಭಿವೃದ್ಧಿ , ಜನರ ಹಿತಾಸಕ್ತಿಯನ್ನ ಕಾಪಾಡಲು ಸಾಧ್ಯವಾಗದೇ, ಬಿಜೆಪಿ ನಾಯಕರ ಮೇಲೆ ಪದೇ ಪದೇ ದ್ವೇಷದ ರಾಜಕಾರಣವನ್ನ ಮಾಡಿಕೊಂಡು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ನಾಯಕರನ್ನ ಗೆಲ್ಲಲು ಸಾಧ್ಯವಾಗದ ಹೇಡಿಗಳು ಬಿಜೆಪಿ ಶಾಸಕರ ಮೇಲೆ ಹಗೆಯನ್ನ ಮುಂದುವರೆಸಿದ್ದಾರೆ
ಎಂದು ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಉಲ್ಲಾಳ್ ನಂದನ್ ಮಲ್ಯ ಹೇಳಿದ್ದಾರೆ.
ಜಿಲ್ಲೆಯ ಪದವು ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಮಾರ್ಚ್ 2ರಂದು ಬ್ರಹ್ಮಕಲಶೋತ್ಸವ ಕಾರ್ಯಕ್ರಮವಿದ್ದು, ಅದಕ್ಕೆ ಶಾಸಕರಾದ ವೇದವ್ಯಾಸ್ ಕಾಮತ್ ಆಗಮಿಸಿರುತ್ತಾರೆ. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಮುಖಂಡ , ವೇದವ್ಯಾಸ್ ಕಾಮತ್ ಹಾಗೂ ಜೊತೆಗಾರರು ತಮ್ಮ ಮೇಲೆ ಅವಾಚ್ಯ ಶಬ್ಧ ಬಳಸಿದ್ದಾರೆ. ಹಲ್ಲೆ ನಡೆಸಿದ್ದಾರೆ ಎಂದು ದೂರನ್ನ ದಾಖಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಂಕನಾಡಿ ಪೊಲೀಸರು ಪೂರ್ವಾಪರ ತಿಳಿಯದೇ, ಯಾವುದೇ ತನಿಖೆಯನ್ನೂ ನಡೆಸದೇ ಬಿಜೆಪಿ ಶಾಸಕರ ಮೇಲೆ ಎಫ್‌ಐಆರ್ ದಾಖಲು ಮಾಡಿದೆ.
ಕಾಂಗ್ರೆಸ್ ತನ್ನ ಅಧಿಕಾರವನ್ನ ದುರುಪಯೋಗ ಮಾಡಿಕೊಂಡು ಬಿಜೆಪಿ ಶಾಸಕರ ಮೇಲೆ ಕೇಸ್‌ಗಳನ್ನ ಹಾಕಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇಂಥಾ ಕೆಟ್ಟ ರಾಜಕೀಯ ಮಾಡಿ ಕೇಸ್ ಫೈಲ್ ಮಾಡಿಸೋದು ಇದೇ ಮೊದಲಲ್ಲ. ಹಿಂದೆ ಹರೀಶ್ ಪುಂಜಾ, ಭರತ್ ಶೆಟ್ಟಿ ಅವರ ವಿರುದ್ಧವೂ ಹೀಗೆ ದೂರನ್ನ ದಾಖಲಿಸಿದ್ದರು ಎಂದು ಅವರು ನೆನಪಿಸಿದರು.
ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ರಾಜ್ಯಪಾಲರಿಗೆ ಬಾಂಗ್ಲಾ ಪ್ರಧಾನಿಯ ಸ್ಥಿತಿ ಬರುತ್ತದೆ ಎಂದರೂ ಕೂಡ ಅವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಕೇಸ್ ದಾಖಲಿಸಿ ಎಂದಾಗ ಇದೇ ಪೊಲೀಸರು ಲೀಗಲ್ ಒಪಿನಿಯನ್ ಬಂದ್ರೆ ಮಾಡುತ್ತೇವೆ ಎಂದಿದ್ದರು. ಆದ್ರೇ ಈಗ ವೇದವ್ಯಾಸ್ ಕಾಮತ್ ಅವರ ವಿರುದ್ಧ ದೂರು ದಾಖಲಿಸಲು ಯಾವ ಲೀಗಲ್ ಒಪಿನಿಯನ್ ಬಂದಿದೆ ?
ನಿಮಗೆ ಬಹಿರಂಗ ಸವಾಲು ಹಾಕುತ್ತೇವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ವಿಷಯದಲ್ಲಿ ಏನೇನು ಬದಲಾವಣೆ ಆಗಿದೆ ಎಂಬುದನ್ನು ಚರ್ಚೆ ಮಾಡೋಣ ಬನ್ನಿ. ಈ ಕ್ಷೇತ್ರ ನಿಮ್ಮ ಅವಧಿಯಲ್ಲಿ ಹೇಗಿತ್ತು, ನಮ್ಮ ಶಾಸಕರ ಅವಧಿಯಲ್ಲಿ ಹೇಗಾಗಿದೆ ಎಂಬುದನ್ನು ಇಡೀ ಮಂಗಳೂರಿನ ಜನತೆಯ ಮುಂದೆ ಇಡೋಣ.
ಅಂತರಾಷ್ಟ್ರೀಯ ಮಟ್ಟದ ಎಮ್ಮೆಕೆರೆಯ ಸ್ವಿಮ್ಮಿಂಗ್ ಪೂಲ್, ಮಂಗಳಾದೇವಿಯ ಸುಸಜ್ಜಿತ ಆರೋಗ್ಯ ಕೇಂದ್ರ, ಜೈಲ್ ರೋಡ್ ಪಶು ಸಂಗೋಪನ ಕೇಂದ್ರ, ಉರ್ವ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್, ಸೆಂಟ್ರಲ್ ಮಾರ್ಕೆಟ್, ಕದ್ರಿ ಮಾರ್ಕೆಟ್ ಕಂಕನಾಡಿ ಮಾರ್ಕೆಟ್, ಮಂಗಳಾದೇವಿ ಮುಖ್ಯ ರಸ್ತೆ, ಕಾರ್ ಸ್ಟ್ರೀಟ್ ಮುಖ್ಯ ರಸ್ತೆ, ಜೈಲ್ ರೋಡ್, ಕದ್ರಿ ಪಾರ್ಕ್ ರಸ್ತೆ, ಪಡೀಲ್-ಪಂಪ್ ವೆಲ್ ರಸ್ತೆ, ಸೇರಿದಂತೆ ನೂರಾರು ರಸ್ತೆಗಳ ಕಾಂಕ್ರೀಟೀಕರಣ, ಮಂಗಳ ಸ್ಟೇಡಿಯಂ ಅಭಿವೃದ್ಧಿ, ಹಲವಾರು ಪಾರ್ಕ್ ಗಳ ಅಭಿವೃದ್ಧಿ, ಬೃಹತ್ ಗ್ರಂಥಾಲಯ ಕಟ್ಟಡಗಳು, ರಿವರ್ ಫ್ರಂಟ್ ಯೋಜನೆ ಅನುಷ್ಠಾನ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಿಯುಸಿ ಹಾಗೂ ಡಿಗ್ರಿಗೆ ನೂತನ ಸುಸಜ್ಜಿತ ಕಟ್ಟಡಗಳು,
ಅನೇಕಾರು ಕೆರೆ ಅಭಿವೃದ್ಧಿ, ಹೀಗೆ ಸಾಲು ಸಾಲು ಅಭಿವೃದ್ಧಿಯ ಪರ್ವವೇ ಕ್ಷೇತ್ರದ ಜನತೆಯ ಮುಂದೆ ಇದೆ. ಅಲ್ಲದೇ ನೂರಾರು ಮಂದಿರಗಳ, ದೈವಸ್ಥಾನಗಳ ಅಭಿವೃದ್ಧಿಗೆ ಶಾಸಕರು ತಂದ ಅನುದಾನವಂತೂ ಒಂದು ರೀತಿಯ ದಾಖಲೆಯೇ ಸರಿ.
ನಿಮ್ಮ ಹಣೆಬರಹಕ್ಕೆ ಒಂದು ಶಿಲನ್ಯಾಸವೂ ಸಾಧ್ಯವಾಗಿಲ್ಲ. ಹೀಗಾಗಿ ನಿಮ್ಮ ಹೊಟ್ಟೆ ಉರಿಯುವುದು ಸಹಜ. ಅದಕ್ಕಾಗಿಯೇ ಕುತಂತ್ರ ರಾಜಕಾರಣದಿಂದಲೇ ಶಾಸಕರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದೀರಿ ಎಂದು
ಉಲ್ಲಾಳ್ ನಂದನ್ ಮಲ್ಯ
ಹೇಳಿಕೆಯಲ್ಲಿ ತಿಳಿಸಿದ್ದಾರೆ.