ಇತ್ತೀಚಿನ ಸುದ್ದಿ
ಗುರುತಿನ ಚೀಟಿ ಇಲ್ಲದೆ ಸ್ಕ್ಯಾನಿಂಗ್ ಮಾಡಿದರೆ ಕ್ರಮ: ಜಿಲ್ಲಾ ಆರೋಗ್ಯಾಧಿಕಾರಿ ಎಚ್ಚರಿಕೆ
23/09/2025, 21:01

ಮಂಗಳೂರು(reporterkarnataka.com): ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಸ್ಕ್ಯಾನಿಂಗ್ ನಡೆಸಲು ರೋಗಿಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕಾಗಿದ್ದು ತಪ್ಪಿದ್ದಲ್ಲಿ ಅಂತಹ ಸೆಂಟರ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್ ತಿಮ್ಮಯ್ಯ ಎಚ್ಚರಿಸಿದ್ದಾರೆ.
ಅವರು ಮಂಗಳವಾರ ಜನನ ಪೂರ್ವ ಲಿಂಗ ನಿರ್ಣಯ ತಡೆ ಕಾಯಿದೆ 1994ಕ್ಕೆ ಸಂಬಂಧಿಸಿದ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯಲ್ಲಿ ಮಾತನಾಡಿದರು.
ಗುರುತಿನ ಚೀಟಿಯನ್ನು ನಿಖರವಾಗಿ ಪರಿಶೀಲಿಸಬೇಕು. ಈ ಬಗ್ಗೆ ಸ್ಕ್ಯಾನಿಂಗ್ ಸೆಂಟರ್ ಬಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ವರದಿಗಳಿಗೆ ಆಯಾ ತಜ್ಞ ವೈದ್ಯರುಗಳೇ ಸಹಿ ಹಾಕಬೇಕು. ಸಿಬ್ಬಂದಿಗಳು ಸಹಿ ಹಾಕುವಂತಿಲ್ಲ ಎಂದರು. ಮೆಡಿಕಲ್‍ಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಗರ್ಭಪಾತ ಮಾತ್ರೆಗಳನ್ನು ಮಾರುತ್ತಿರುವ ಬಗ್ಗೆ ಆಗ್ಗಿಂದಾಗೆ ಭೇಟಿ ನೀಡಿ ಪರಿಶೀಲಿಸಬೇಕು. ಈ ಬಗ್ಗೆ ಔಷಧ ನಿಯಂತ್ರಣ ಇಲಾಖೆಯೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಸಿ / ಪಿಎನ್‍ಡಿಟಿ ಕಾಯ್ದೆ ಹಾಗೂ ಕಾನೂನಿನ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕಾಲೇಜು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲೆಯಲ್ಲಿ ಒಟ್ಟು 189 ಸ್ಕ್ಯಾನಿಂಗ್ ಸೆಂಟರ್ ಗಳು ಕಾರ್ಯನಿರ್ವಹಿಸುತ್ತಿದೆ. ಈ ಪೈಕಿ 12 ಸರಕಾರಿ ಹಾಗೂ 177 ಖಾಸಗಿ ಕೇಂದ್ರಗಳಾಗಿವೆ ಎಂದು ಅವರು ತಿಳಿಸಿದರು. 2024-25ರಲ್ಲಿ ಜಿಲ್ಲೆಯಲ್ಲಿ 12,540 ಗಂಡು ಮಕ್ಕಳು ಹಾಗೂ 11758 ಹೆಣ್ಣು ಮಕ್ಕಳು ಜನನವಾಗಿದ್ದು ಗಂಡು ಹೆಣ್ಣು ಅನುಪಾತ 938 ಆಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸ್ಕ್ಯಾನಿಂಗ್ ಸೆಂಟರ್ ಗಳ ತಪಾಸಣೆ ಮಾಡಲು ತಂಡ ರಚಿಸಲಾಗಿದ್ದು, 2025ರ ಏಪ್ರಿಲ್‍ನಿಂದ ಆಗಸ್ಟ್ ರವರೆಗೆ ಜಿಲ್ಲೆಯಲ್ಲಿ 274 ಖಾಸಗಿ ಹಾಗೂ 15 ಸ್ಕ್ಯಾನಿಂಗ್ ಸೆಂಟರ್ ಗಳ ತಪಾಸಣೆ ನಡೆಸಲಾಗಿದೆ ಎಂದು ತಿಳಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಮಟ್ಟದ ಸಲಹಾ ಸಮಿತಿ ಅಧ್ಯಕ್ಷೆ ಡಾ.ಅಮೃತಾ ಭಂಡಾರಿ ವಹಿಸಿದ್ದರು. ಸಭೆಯಲ್ಲಿ ಸಮಿತಿ ಸದಸ್ಯರಾದ ಡಾ.ಸುಂದರಿ, ರಾಣಿ ಮಂಗಳ, ಅನಿತ್‍ರಾಜ್ ಭಟ್, ಡಾ. ದೀಪಾ ಪ್ರಭು, ಚಂದ್ರಹಾಸ, ವಸಂತ ಪೆರಾಜೆ, ಡಾ. ನಂಜೇಶ್ ಕುಮಾರ್, ಬಿ.ಎ. ಖಾದರ್ ಶಾ ಮತ್ತಿತರರು ಉಪಸ್ಥಿತರಿದ್ದರು.