ಇತ್ತೀಚಿನ ಸುದ್ದಿ
ದಿಲ್ಲಿಯಲ್ಲಿ ಭಾರಿ ವರುಣಾಘಾತ: ರಸ್ತೆ ಸಂಚಾರ ವ್ಯತ್ಯಯ; ಹಲವು ವಿಮಾನ ಯಾನ ರದ್ದು
23/05/2022, 17:45
ಹೊಸದಿಲ್ಲಿ(reporterkarnataka.com): ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (IGI) ವಿಮಾನ ನಿಲ್ದಾಣದಿಂದ ಹಲವು ವಿಮಾನಗಳ ಹಾರಾಟವನ್ನು ಸ್ಥಗಿತ ಗೊಳಿಸಲಾಗಿದೆ.
ಭಾರಿ ಗಾಳಿ ಮಳೆಯಿಂದಾಗಿ ದೆಹಲಿಯ ಕೆಲವು ಭಾಗಗಳಲ್ಲಿ ಮರಗಳು ಧರೆಗುರುಳಿವೆ. ಇದರಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಮೇಲೆ ಮಳೆಯು ಪ್ರತಿಕೂಲ ಪರಿಣಾಮ ಬೀರಿದ್ದು ಹಲವು ವಿಮಾನಗಳ ಹಾರಾಟವನ್ನು ಸ್ಥಗಿತ ಗೊಳಿಸಲಾಗಿದೆ. ನವೀಕರಿಸಿದ ವಿಮಾನ ಮಾಹಿತಿಗಾಗಿ ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರನ್ನು ಕೋರಿದ್ದಾರೆ.
ಈ ನಡುವೆ ಭಾರತೀಯ ಹವಾಮಾನ ಇಲಾಖೆ (IMD) ಮಧ್ಯಮ ತೀವ್ರತೆಯ ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಿದೆ. ಗಂಟೆಗೆ 60-90 ಕಿ.ಮಿ. ವೇಗದಲ್ಲಿ ಬಿರುಗಾಳಿಯು ಮುಂದುವರಿಯಲಿದೆ ಎಂದು ತಿಳಿಸಿದೆ. ಜನಸಾಮಾನ್ಯರು ಮನೆಯಿಂದ ಹೊರಬೀಳದೇ ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ.