ಇತ್ತೀಚಿನ ಸುದ್ದಿ
ಬಾಂಗ್ಲಾದವರು ನುಸುಳುವವರೆಗೆ ಕೇಂದ್ರ ಗೃಹ ಇಲಾಖೆ ನಿದ್ದೆಗೆ ಜಾರಿತ್ತಾ?: ಸಚಿವ ಕೃಷ್ಣ ಬೈರೇಗೌಡ ಪ್ರಶ್ನೆ
07/01/2026, 19:29
*•ಒತ್ತುವರಿ ತೆರವು ಸರ್ಕಾರದ ಸಾಮಾನ್ಯ ಪ್ರಕ್ರಿಯೆ*
*•ಎರಡು ತಿಂಗಳ ಹಿಂದೆಯೇ 10 ಅನಧಿಕೃತ ಮನೆ ತೆರವು*
*•ಬಿಜೆಪಿಗರ ಮಾತಲ್ಲಿ ತಲೆ ಬುಡ ಇರಲ್ಲ*
ಬೆಂಗಳೂರು(reporterkarnataka.com):ಕೋಗಿಲು ಬಡಾವಣೆಯಲ್ಲಿ ಅತಿಹೆಚ್ಚು ಒತ್ತುವರಿಯಾಗಿರುವುದು 2021ರಲ್ಲಿ. ಆಗ ಕರ್ನಾಟಕದಲ್ಲಿದ್ದದ್ದು ಬಿಜೆಪಿ ಸರ್ಕಾರ. ಹೀಗಾಗಿ ಒತ್ತುವರಿದಾರರಿಗೆ ಬಿಜೆಪಿ ನಾಯಕರೇ ಶ್ರೀರಕ್ಷೆ ಎನ್ನಬಹುದೇ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಆಕ್ರೋಶ ಹೊರಹಾಕಿದರು.
ಕಂದಾಯ ಭವನದಲ್ಲಿ ಸೋಮವಾರ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ನಾವು ಒತ್ತುವರಿಗೆ ಬೆಂಬಲ ನೀಡಿದ್ದರೆ ತೆರವಿಗೆ ಮುಂದಾಗುತ್ತಿರಲಿಲ್ಲ. ಅಸಲಿಗೆ ಕೋಗಿಲು ಬಡಾವಣೆ ಭಾಗದಲ್ಲಿ ಅತಿಹೆಚ್ಚು ಒತ್ತುವರಿಯಾಗಿರುವುದೇ ಬಿಜೆಪಿ ಅಧಿಕಾರದ ಅವಧಿಯಲ್ಲಿ. ಹಾಗಾದರೆ ಅದನ್ನು ಬಿಜೆಪಿ ಪ್ರಾಯೋಜಿತ ಒತ್ತುವರಿ ಎನ್ನಬಹುದೇ? ಎಂದು ಪ್ರಶ್ನಿಸಿದ ಅವರು, ಬಿಜೆಪಿ ನಾಯಕರ ಮಾತಿಗೆ ತಲೆ ಬುಡ ಎಂಬುದೇ ಇರೋಲ್ಲ. ಸುಳ್ಳನ್ನು ಸತ್ಯ ಮಾಡುವುದನ್ನಷ್ಟೇ ಅವರು ಕರಗತ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದರು.
“ಕೋಗಿಲು ಬಡಾವಣೆಯಲ್ಲಿ ಎರಡು ತಿಂಗಳ ಹಿಂದೆಯೇ 10 ಅನಧಿಕೃತ ಮನೆಗಳನ್ನು ತೆರವು ಮಾಡಿಸಿ ಇತರರೂ ಖಾಲಿ ಮಾಡುವಂತೆ ಸೂಚಿಸಲಾಗಿತ್ತು. ಆದರೂ ತೆರವಿಗೆ ಮುಂದಾಗಿದ್ದರಿಂದ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಕಳೆದ ಒಂದು ವರ್ಷದಿಂದ ನನ್ನ ಸೂಚನೆಯ ಮೇರೆಗೆ ಎಲ್ಲಾ ಜಿಲ್ಲಾಧಿಕಾರಿಗಳು ಪ್ರತಿಯೋರ್ವ ತಹಶೀಲ್ದಾರರಿಗೆ ವಾರಕ್ಕೆ ಒಂದು ಒತ್ತುವರಿ ತೆರವುಗೊಳಿಸುವಂತೆ ಗುರಿ ನಿಗದಿ ಮಾಡಿದ್ದಾರೆ. ಅಲ್ಲದೆ, ಬಿಡಿಎ ಹಾಗೂ ಬಿಬಿಎಂಪಿ ಸಹ ಒತ್ತುವರಿ ತೆರವು ಕಾರ್ಯವನ್ನು ಆಗಾಗ್ಗೆ ಮಾಡುತ್ತಿರುತ್ತದೆ. ಅದರಂತೆ ಕೋಗಿಲು ಬಡಾವಣೆಯಲ್ಲೂ ಒತ್ತುವರಿ ತೆರವು ಮಾಡಲಾಗಿದೆ. ಇದು ಸರ್ಕಾರದ ಸಾಮಾನ್ಯ ಕೆಲಸವಾಗಿದ್ದು, ಎಲ್ಲವನ್ನೂ ಕಾನೂನುಬದ್ಧವಾಗಿಯೇ ನಿರ್ವಹಿಸಲಾಗಿದೆ” ಎಂದು ತಿಳಿಸಿದರು.
“ಅಲ್ಲಿ ನೆಲೆಸಿರುವ ನಿವಾಸಿಗಳ ಸಮೀಕ್ಷೆ ಮುಗಿದಿದೆ. ವರದಿ ಬಂದ ನಂತರ ಪರ್ಯಾಯ ವ್ಯವಸ್ಥೆಯನ್ನೂ ಅರ್ಹರಿಗೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಅವರು ಮಾನವೀಯ ನೆಲೆಯಲ್ಲಿ ಇದನ್ನು ನೋಡಿದ್ದಾರೆ. ಇದರಲ್ಲಿ ರಾಜಕೀಯ ಮಾಡುವುದು ಏನಿದೆ. ಕೆಲವರು ನನ್ನ ವಿರುದ್ಧ ಕೆಲವು ಕಾರಣಗಳಿಗೆ ಇದನ್ನು ರಾಜಕೀಯ ಅಸ್ತ್ರ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇವೆಲ್ಲ ಸಾಮಾನ್ಯ. ಹೀಗಾಗಿ ಇದಕ್ಕೆಲ್ಲ ಜಗ್ಗದೇ ನನ್ನ ಒಳ್ಳೆಯ ಕೆಲಸ ಮುಂದುವರೆಸುವೆ” ಎಂದರು.
“ಬಾಂಗ್ಲಾದೇಶದವರು ಅಲ್ಲಿ ನೆಲೆಸಿದ್ದರು ಎಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಹೊರ ದೇಶದವರು ಬಾರದಂತೆ ತಡೆಯುವುದು ಕೇಂದ್ರ ಗೃಹ ಸಚಿವಾಲಯದ ಕರ್ತವ್ಯ. ಅವರು ಬರುವವರೆಗೂ ಕೇಂದ್ರ ಗುಪ್ತಚರ ಇಲಾಖೆ ನಿದ್ದೆ ಮಾಡುತ್ತಿದೆಯಾ. ಇದು ಕೇಂದ್ರ ಗೃಹ ಸಚಿವಾಲಯದ ವೈಫಲ್ಯ, ನಾಲಾಯಕ್ ಎಂದು ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿದ್ದಾರೆಯೇ” ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು.
“ಇನ್ಫೋಸಿಸ್ ಗೆ ನೀಡಿದ ಭೂಮಿ ಮಾರಾಟ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಬೆಂಗಳೂರು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ. ತನಿಖೆ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು” ಎಂದರು.














