ಇತ್ತೀಚಿನ ಸುದ್ದಿ
ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಎಸ್ ಐಟಿಯಿಂದ ಹಿರಿಯ ಐಪಿಎಸ್ ಅಧಿಕಾರಿ ಸೌಮ್ಯಲತಾ ಔಟ್?
24/07/2025, 15:42

ಬೆಂಗಳೂರು(reporterkarnataka.com): ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರಕಾರ ನೇಮಿಸಿದ ವಿಶೇಷ ತನಿಖಾ ತಂಡ(ಎಸ್ ಐಟಿ)ದಿಂದ ಹೊರಗುಳಿಯಲು ಹಿರಿಯ ಐಪಿಎಸ್ ಅಧಿಕಾರಿ ಸೌಮ್ಯಲತಾ ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಅವರ ಬದಲಾಯಿಸುವ ಎಲ್ಲ ಸಾಧ್ಯತೆಗಳು ಕಂಡು ಬಂದಿದೆ.
ಈ ಕುರಿತು ಮಾಧ್ಯಮ ಜತೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸೌಮ್ಯಲತಾ ಹೊರಗುಳಿಯುವ ವಿಚಾರವಾಗಿ ಅಧಿಕೃತವಾಗಿ ಅವರು ನನಗೆ ಮಾಹಿತಿ ನೀಡಿಲ್ಲ. ಅನಪಿಷಿಯಲ್ ಅವರು ಪತ್ರ ಬರೆದಿದ್ದಾರೆ.
ಹೊರಗುಳಿಯುವ ಬಗ್ಗೆ ಅದರಲ್ಲಿ ಹೇಳಿದ್ದಾರಂತೆ.
ಅವರನ್ನ ತಂಡದಿಂದ ರೀಪ್ಲೇಸ್ ಮಾಡಲಾಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ, ಕೊಲೆ ಹಾಗೂ ಸಾಮೂಹಿಕ ಸಮಾಧಿ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರಕಾರ ಇತ್ತೀಚೆಗೆ ಎಸ್ ಐಟಿ ರಚಿಸಿತ್ತು. ಕೊಲೆಗೀಡಾದ ಮೃತದೇಹಗಳನ್ನು ತಾನೇ ಸ್ವತಃ ಸಮಾಧಿ ಮಾಡಿದ್ದೆ ಎಂದು ಅನಾಮಿಕನೊಬ್ಬ ಬೆಳ್ತಂಗಡಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿರುವ ಹಿನ್ನೆಲೆಯಲ್ಲಿ ಪ್ರಕರಣ ಕುರಿತು ಎಸ್ ಐಟಿ ತನಿಖೆ ನಡೆಸಬೇಕೆಂಬ ಕೂಗು ಕೇಳಿ ಬಂದಿತ್ತು.