ಇತ್ತೀಚಿನ ಸುದ್ದಿ
ಧರ್ಮಸ್ಥಳ : ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಬಂದೂಕು, ಎರಡು ತಲವಾರು ವಶ
17/09/2025, 22:25

ಮಂಗಳೂರು(Reporterkarnataka.com):ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಕ್ರ:39/2025 (ಬಿಎನ್ಎಸ್ 2023) ಪ್ರಕಾರ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡ (SIT)ವು ಆಗಸ್ಟ್ 26, 2025ರಂದು ಉಜಿರೆ ಗ್ರಾಮದ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ಶೋಧ ನಡೆಸಿತು.
ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು, ಪಂಚರು, ಸಿಬ್ಬಂದಿ, ಸೋಕೋ ಅಧಿಕಾರಿಗಳು ಹಾಗೂ ಎಸ್ಐಟಿ ತಂಡದ ಸದಸ್ಯರ ಸಮ್ಮುಖದಲ್ಲಿ ಶೋಧ ಕಾರ್ಯಾಚರಣೆ ನಡೆಯಿತು. ಈ ವೇಳೆ ಮನೆಯಿಂದ ಒಂದು ಬಂದೂಕು ಮತ್ತು ಎರಡು ತಲವಾರುಗಳು ಪತ್ತೆಯಾದವು. ಪತ್ತೆಯಾದ ವಸ್ತುಗಳನ್ನು ವಶಪಡಿಸಿಕೊಂಡು, ಸಂಬಂಧಿತ ದಾಖಲೆಗಳೊಂದಿಗೆ ಮುಂದಿನ ಕಾನೂನು ಕ್ರಮಕ್ಕೆ ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಲಾಯಿತು.
ಈ ಕುರಿತು ಎಸ್ಐಟಿ ಅಧಿಕಾರಿಗಳು ಪೊಲೀಸ್ ಅಧೀಕ್ಷಕರಿಗೆ ಅಧಿಕೃತ ದೂರು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 16, 2025ರಂದು ಹೊಸ ಪ್ರಕರಣ ದಾಖಲಿಸಲಾಯಿತು. ಅಕ್ರ:108/2025 ಪ್ರಕಾರ Arms Act 1959ರ ಕಲಂ 25(1)(1-A) ಮತ್ತು 25(1)(1-B)(a) ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.
ಪ್ರಕರಣದ ಗಂಭೀರತೆಯನ್ನು ಗಮನಿಸಿ ಶಸ್ತ್ರಾಸ್ತ್ರಗಳು ಯಾವ ಮೂಲದಿಂದ ಬಂದವು, ಯಾರ ಬಳಕೆಗೆ ಇಟ್ಟಿದ್ದರು, ಮತ್ತೇನಾದರೂ ಅಕ್ರಮ ಚಟುವಟಿಕೆಗಳಿಗೆ ಸಂಬಂಧವಿದೆಯೇ ಎಂಬುದರ ಬಗ್ಗೆ ಪೊಲೀಸರು ಆಳವಾದ ತನಿಖೆ ನಡೆಸುತ್ತಿದ್ದಾರೆ.