ಇತ್ತೀಚಿನ ಸುದ್ದಿ
Delhi | ಸಂವಿಧಾನ ವಿರೋಧಿ ರಾಜ್ಯ ಸರಕಾರ ರಾಜೀನಾಮೆ ನೀಡಲಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹ
25/03/2025, 10:13

ನವದೆಹಲಿ(reporterkarnataka.com): ಮುಸ್ಲೀಮರಿಗೆ ಗುತ್ತಿಗೆಯಲ್ಲಿ ಶೇ 4% ಮೀಸಲಾತಿ ನೀಡುವ ಮೂಲಕ ಈ ಸರ್ಕಾರ ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡುತ್ತಿದೆ. ಸಂವಿಧಾನ ವಿರೋಧ ಸರ್ಕಾರ ಕರ್ನಾಟಕದಲ್ಲಿದ್ದು, ಈ ಸರ್ಕಾರ ಆಡಳಿತ ನಡೆಸಲು ಯಾವುದೇ ನೈತಿಕ ಹಕ್ಕಿಲ್ಲ, ಇಡೀ ಸರ್ಕಾರವೇ ರಾಜೀನಾಮೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ನವ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ಪ್ರಕರಣಗಳಲ್ಲಿ ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ. ಆದರೂ, ಇವರು ಧರ್ಮದ ಆಧಾರದಲ್ಲಿ ಮೀಸಲಾತಿ ತರುತ್ತಿದ್ದಾರೆ. ಅದೂ ಕೂಡ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಹೊರಟಿದ್ದಾರೆ. ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಯಾವುದೇ ಅವಕಾಶ ಇಲ್ಲ. ಟೆಂಡರ್ ನಲ್ಲಿ ಪಾರದರ್ಶಕತೆ ಕಾಯ್ದೆಯನ್ನೇ ರದ್ದು ಪಡಿಸುವುದು ಒಳ್ಳೆಯದು. ಸುಮಾರು ಶೇ. 30ರಿಂದ 40% ರಷ್ಟು ಮೀಸಲಾತಿ ನೀಡಿದರೆ, ಪಾರದರ್ಶಕತೆಗೆ ಎಲ್ಲಿ ಗೌರವ ಇರುತ್ತದೆ ಎಂದು ಪ್ರಶ್ನಿಸಿದರು.
ಅಲ್ಲದೇ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಯಾವಾಗಲೂ ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಾರೆ. ಆದರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರ ಸಂವಿಧಾನದ ವಿರುದ್ದ ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ಮುಸಲ್ಮಾನರಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇಲ್ಲ ಅಂತ ಶಿವಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ. ಸಂವಿಧಾನ ತಿದ್ದುಪಡಿ ತರುತ್ತೇವೆ ಅಂತ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಗೂ ಮುಂಚೆ ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಹೇಳಿದ್ದರು. ಆದರೆ, ಸಂವಿಧಾನದ ಮೂಲ ಉದ್ದೇಶವನ್ನೇ ಬದಲಾವಣೆ ಮಾಡಿರುವುದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ಸಿನ ಮುಖವಾಡ ಕಳಚಿ ಬಿದ್ದಿದೆ. ಸಂವಿಧಾನದ ಮೇಲೆ ಪ್ರಮಾಣ ವಚನ ತೆಗೆದುಕೊಂಡು ಅದರ ವಿರುದ್ದ ಕೆಲಸ ಮಾಡುತ್ತಾರೆ ಎಂದರೆ ಇದು ಸಂವಿಧಾನ ವಿರೋಧಿ ಅಷ್ಟೇ ಅಲ್ಲ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಕ್ಕೂ ವಿರುದ್ದವಾಗಿದೆ. ತುಷ್ಟೀಕರಣದ ಪರಾಕಾಷ್ಟೇ ಮೀರಿದೆ. ತುಷ್ಟೀಕರಣಕ್ಕಾಗಿ ದೇಶವನ್ನು ಒಡೆಯುವ ತೀರ್ಮಾನ ತೆಗೆದುಕೊಳ್ಳುವುದು ಸಂವಿಧಾನಿಕ ಹುದ್ದೆಯಲ್ಲಿರುವವರಿಗೆ ಇದು ನ್ಯಾಯಾನಾ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ಬಂದಾಗ ಕಾಂಗ್ರೆಸ್ ನವರು ತನ್ನ ಆಡಳಿತಕ್ಕಾಗಿ ದೇಶ ವಿಭಜನೆ ಮಾಡಿದರು. ಶಾಭಾನು ಪ್ರಕರಣದಲ್ಲಿ ಕುರ್ಚಿ ಉಳಿಸಿಕೊಳ್ಳಲು ಕಾನೂನು ಬದಲಾವಣೆ ಮಾಡಿದ್ದರು. ಈಗ ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿದ್ದಾರೆ. ರಾಹುಲ್ ಗಾಂಧಿಯವರಿಗೆ ಇನ್ನು ಮುಂದೆ ಸಂವಿಧಾನವನ್ನು ಹಿಡಿಕೊಳ್ಳುವ ಯಾವುದೇ ನೈತಿಕ ಹಕ್ಕಿಲ್ಲ. ಈ ಸರ್ಕಾರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
*ಹನಿಟ್ರ್ಯಾಪ್ ಕಾಂಗ್ರೆಸ್ ಬುಡಕ್ಕೆ ಬರುತ್ತದೆ*
ಇದೇ ವೇಳೆ ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಹನಿಟ್ರ್ಯಾಪ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹನಿಟ್ರ್ಯಾಪ್ ವಿಚಾರದಲ್ಲಿ ಮತ್ತೆ ರಾಜಕಾರಣ ಶುರುವಾಗಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ವಿಧಾನಸಭೆಯಲ್ಲಿ ತಮ್ಮದಷ್ಟೇ ಅಲ್ಲ 48 ಜನರ ಹನಿಟ್ರ್ಯಾಪ್ ಆಗಿದೆ ಅಂತ ಹೇಳಿದ್ದಾರೆ. ಇದು ಬಹಳ ಗಂಭೀರ ವಿಷಯ. ಅವರು ದೂರು ಕೊಡುತ್ತೇನೆ ಅಂತ ಹೇಳಿದ್ದರು. ಇನ್ನು ದೂರು ಕೊಟ್ಟಿಲ್ಲ. ತನಿಖೆಯೂ ನಡೆಯುತ್ತಿಲ್ಲ. ಅಂದರೆ, ಕಾಂಗ್ರೆಸ್ ಹೈಕಮಾಂಡ್ ಇದರಲ್ಲಿ ಮಧ್ಯ ಪ್ರವೇಶ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಈ ಪ್ರಕರಣ ಮುಚ್ಚಿಹಾಕುವ ಕುರಿತು ಚರ್ಚೆ ನಡೆದಿದೆ. ಕಾಂಗ್ರೆಸ್ ನ ಬುಡಕ್ಕೆ ಈ ಪ್ರಕರಣ ಬರುತ್ತದೆ ಎಂದು ಅವರಿಗೆ ಗೊತ್ತಾಗಿದೆ ಎಂದರು.
ಇವತ್ತಿನ ಡಿಸಿಎಂ ಹೇಳಿಕೆಯನ್ನು ನೋಡಿದಾಗ ಇವರು ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿದ್ದಾರೆ. ನೈತಿಕವಾಗಿಯೂ ರಾಜ್ಯವನ್ನು ಹಾಳು ಮಾಡಿದ್ದಾರೆ. ಈಗ ಸಂವಿಧಾನ ವಿರುದ್ದವಾಗಿ ನಡೆದುಕೊಂಡಿದ್ದಾರೆ. ಇದು ಜನವಿರೋಧಿ ಸರ್ಕಾರ ಇದು ಎಷ್ಟು ಬೇಗ ತೊಲಗುತ್ತದೆಯೋ ಅಷ್ಟು ಕರ್ನಾಟಕಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.