ಇತ್ತೀಚಿನ ಸುದ್ದಿ
ಪ್ರಧಾನಿ ಮೋದಿಯವರ ಚಿತ್ರ ವಿರೂಪಗೊಳಿಸಿದ್ದು ಅಪರಾಧ: ಪ್ರತಿಪಕ್ಷ ನಾಯಕ ಆರ್.ಅಶೋಕ್
29/04/2025, 19:07
ಬೆಂಗಳೂರು(reporterkarnataka.com):ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಕಾಂಗ್ರೆಸ್ ವಿರೂಪಗೊಳಿಸಿದ್ದು ಅಪರಾಧ. ಪ್ರಧಾನಿಯವರ ವ್ಯಕ್ತಿತ್ವಕ್ಕೆ ಕಾಂಗ್ರೆಸ್ ಅಪಮಾನ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿತ್ವಕ್ಕೆ ಅಪಮಾನ ಮಾಡುವಂತೆ ಕಾಂಗ್ರೆಸ್ ಪೋಸ್ಟ್ ಮಾಡಿದೆ. ಸಿಎಂ ಸಿದ್ದರಾಮಯ್ಯ, ಸಚಿವ ತಿಮ್ಮಾಪುರ ಅವರ ಹೇಳಿಕೆ ನಮ್ಮ ಹೇಳಿಕೆಯಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸ್ಪಷ್ಟವಾಗಿ ಹೇಳಿದ್ದಾರೆ. ಅಂದಮೇಲೆ ಇವರಿಗೆಲ್ಲ ಯಾವ ಮರ್ಯಾದೆ ಉಳಿದಿದೆ? ಅವರ ಪಕ್ಷದವರೇ ಮರ್ಯಾದೆ ಕೊಡದ ಸ್ಥಿತಿಯಲ್ಲಿರುವ ಇವರು ಪ್ರಧಾನಿಯ ಚಿತ್ರವನ್ನು ಕೆಟ್ಟದಾಗಿ ರೂಪಿಸಿರುವುದು ಅಪರಾಧ ಎಂದರು.
ಕಾಂಗ್ರೆಸ್ ನಾಯಕರು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಅಸಾದುದ್ದೀನ್ ಓವೈಸಿ ಪಾಕಿಸ್ತಾನಕ್ಕೆ ಸವಾಲು ಹಾಕಿದ್ದಾರೆ. ಸಿಎಂ ರೇವಂತ್ ರೆಡ್ಡಿ ಕೂಡ ದೇಶಭಕ್ತಿ ಪ್ರದರ್ಶಿಸಿದ್ದಾರೆ. ಇವರೆಲ್ಲರೂ ಅಂಥವರ ಬಳಿ ದೇಶಭಕ್ತಿಯ ಪಾಠ ಹೇಳಿಸಿಕೊಳ್ಳಬೇಕು. ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯೇ ತಪ್ಪು ಒಪ್ಪಿಕೊಂಡಿದ್ದಾರೆ. ಆದರೆ ಇಲ್ಲಿನ ಕಾಂಗ್ರೆಸ್ ನಾಯಕರು ಎಲ್ಲಕ್ಕೂ ಪ್ರಧಾನಿ ಮೋದಿಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅವರು ನುಡಿದರು.
ಅತಿ ಕಡಿಮೆ ಮತಗಳಲ್ಲಿ ಗೆದ್ದ ಸಿಎಂ ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಹೀರೋ ಆಗಿದ್ದಾರೆ. ಅವರು ಲಾಹೋರ್‌ಗೆ ಹೋಗಿ ಚುನಾವಣೆಗೆ ನಿಂತರೆ ಒಂದು ಲಕ್ಷ ಮತ ಅಂತರದಲ್ಲಿ ಜಯ ಸಾಧಿಸಬಹುದು. ಮುಂದೆ ಅವರಿಗೆ ಪಾಕಿಸ್ತಾನದ ನಾಗರಿಕ ಪ್ರಶಸ್ತಿಯೂ ಸಿಗಬಹುದು. ಎಲ್ಲರೂ ನಿಮ್ಮ ಜೊತೆಗಿದ್ದೀನಿ ಎಂದು ಹೇಳುವಾಗ ಸಿದ್ದರಾಮಯ್ಯ ನಿಮ್ಮ ಜೊತೆಗಿಲ್ಲ ಎನ್ನುತ್ತಾರೆ. ಶಾಂತಿಪ್ರಿಯರೆಂದು ಹೇಳಿಕೊಳ್ಳುವ ಇವರು ಪೊಲೀಸ್ ಅಧಿಕಾರಿಗೆ ಹೊಡೆಯಲು ಹೋಗಿದ್ದಾರೆ. ಇದು ಇಡೀ ಪೊಲೀಸ್ ಇಲಾಖೆಗೆ ಮಾಡಿದ ಅವಮಾನ. ಪೊಲೀಸರನ್ನು ಯಾರು ಬೇಕಾದರೂ ಹೊಡೆಯಬಹುದು ಎಂದು ಮುಖ್ಯಮಂತ್ರಿಯೇ ಸಂದೇಶ ನೀಡಿದ್ದಾರೆ. ಮತ್ತೊಂದು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ನೀನ್ಯಾಕೆ ಬಂದೆ ಎಂದು ಪ್ರಶ್ನಿಸುತ್ತಾರೆ. ಇಂತಹ ದುರಂಹಕಾರ ಬಹಳ ದಿನ ನಡೆಯುವುದಿಲ್ಲ. ಕುರ್ಚಿ ಬಿಡಬೇಕಿರುವುದರಿಂದಲೇ ಎಲ್ಲರಿಗೂ ಹೀಗೆ ಬೈಯುತ್ತಿದ್ದಾರೆ ಎಂದರು.
ಕರ್ನಾಟಕ ರೌಡಿಗಳ ರಾಜ್ಯವಾಗಿದೆ. ಇಂತಹ ಸ್ಥಿತಿಯಲ್ಲಿ ಪೊಲೀಸರಿಗೆ ಹೊಡೆಯಲು ಹೋದರೆ ಮುಂದೆ ಜನರು ಕೂಡ ಹೊಡೆಯುತ್ತಾರೆ. ಕಾಂಗ್ರೆಸ್‌ಗೆ ಬಿಜೆಪಿಯನ್ನು ತಡೆಯಲು ಸಾಧ್ಯವಿಲ್ಲ. ಇವರು ಪಾಕಿಸ್ತಾನದ ಪರವಾಗಿ ಮಾತಾಡಿದ್ದಕ್ಕೆ ಹೋರಾಟ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇವೆಲ್ಲ ಸಾಮಾನ್ಯ. ಅದನ್ನು ಸಹಿಸಲು ಇವರಿಗೆ ಆಗಿಲ್ಲ ಎಂದು ಅವರು ಹೇಳಿದರು.
*ಕೇಸ್ ದಾಖಲಿಸಿ:*
ಭಯೋತ್ಪಾದಕರು ಧರ್ಮ ನೋಡಿ ಸಾಯಿಸಿಲ್ಲ ಎಂದಾದರೆ ಕಾಂಗ್ರೆಸ್‌ನವರು ಮಾಧ್ಯಮಗಳು ಹಾಗೂ ಸಂತ್ರಸ್ತರ ವಿರುದ್ಧ ಪ್ರಕರಣ ದಾಖಲಿಸಲಿ. ಇಲ್ಲವಾದರೆ ಮಂಡಿಯೂರಿ ಕ್ಷಮೆ ಯಾಚಿಸಲಿ. ಪಾಕಿಸ್ತಾನದ ಪರವಾದ ಹೇಳಿಕೆ ನೀಡುವವರು ದೇಶದ್ರೋಹಿಗಳು ಎಂದರು.














