ಇತ್ತೀಚಿನ ಸುದ್ದಿ
Davanagere | ವೀರಶೈವ ಲಿಂಗಾಯತ ಎಲ್ಲ ಗುರು ಭಕ್ತರು ಒಂದಾದರೆ ನಮ್ಮನ್ನು ತಡೆಯುವವರು ಯಾರೂ ಇಲ್ಲ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
22/07/2025, 20:11

*ವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ ಸಿಕ್ಕಿದೆ: ಬಸವರಾಜ ಬೊಮ್ಮಾಯಿ*
ದಾವಣಗೆರೆ(reporterkarnataka.com): ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಗುರುಗಳು ಎಲ್ಲ ಭಕ್ತರು ಒಂದಾಗಬೇಕು ಆಗ ನಮ್ಮನ್ನು ಯಾರು ತಡೆಯುವುದಿಲ್ಲ. ವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ಅವರು ಇಂದು ದಾವಣಗೆರೆಯ ಶ್ರೀಮದ್ ಅಭಿನವ ರೇಣುಕ ಮಂದಿರದಲ್ಲಿ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ದಿವ್ಯಸಾನಿಧ್ಯದಲ್ಲಿ ಏರ್ಪಡಿಸಲಾದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.
ನಾವೆಲ್ಲ ಬಹಳ ಸಂಕೀರ್ಣ ಕಾಲದಲ್ಲಿ ಇಲ್ಲಿ ಸೇರಿದ್ದೇವೆ. ನಮಗೆ ಬಹಳ ದೊಡ್ಡ ಇತಿಹಾಸ ಇದೆ. ಅಷ್ಟೆ ಗಟ್ಡಿಯಾದ ಭವಿಷ್ಯ ಇದೆ ಅಂತ ಹೇಳುತ್ತೇವೆ. ಚಿಂತನೆ ಮಾಡುವ ಕಾಲ ಇದೆ. ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವ ಕಾಲ ಇದಲ್ಲ. ವಿಚಾರ ಮಾಡಬೇಕು ನಮಗೆ ಬಹಳ ದೊಡ್ಡ ಇತಿಹಾಸದ ಜೊತೆಗೆ ಸಂಸ್ಕಾರ ಸಂಸ್ಕತಿ ಇದೆ. ನಮ್ಮದೇ ಆದ ಚಿಂತನೆಯಲ್ಲಿ ನಡೆಯುತ್ತೇವೆ. ಧರ್ಮ, ನ್ಯಾಯ ನೀತಿಯ ಚೌಕಟ್ಟಿನಲ್ಲಿ ನಮ್ಮ ಚಿಂತನೆ ಇರುತ್ತದೆ. ನಾವು ಯಾವ ಚೌವಕಟ್ಟಿನಲ್ಲಿ ಇದ್ದೇವೆ ಆ ಚೌಟಕ್ಟಿನಲ್ಲಿ ಜಗತ್ತು ಇಲ್ಲ. ನಾವು ಚೌಕಟ್ಟು ಮೀರಿ ಚಿಂತನೆ ಬದಲಾಯಿಸಬೇಕಾ ಅಥವ ಚಿಂತನೆಯ ಒಳಗೆ ಇರುವವರನ್ನು ಚೌಕಟ್ಟಿನ ಒಳಗೆ ತರಬೇಕಾ ಎಂದು ಆಲೋಚಿಸಬೇಕು ಎಂದರು.
ರೇಣುಕಾಚಾರ್ಯರಿಂದ ಹಿಡಿದು ಬಸವೇಶ್ವರರ ವರೆಗೆ ಜ್ಞಾನ ಮತ್ತು ಧ್ಯಾನದಿಂದ ಪಡೆದುಕೊಂಡಿರುವ ಚಿಂತನೆ ಒರೆಗೆ ಹಚ್ಚುವ ಕಾಲ ಬಂದಿದೆ. ಸಮಾಜ ಮುನ್ನಡೆಸುವ ಶಕ್ತಿ ವೀರಶೈವ ಲಿಂಗಾಯತರಿಗಿದೆ ನಮ್ಮ ಚಿಂತನೆ ಮಾನವೀಯ ತಳಹದಿಯ ಮೇಲಿದೆ. ಗುರು ಮತ್ತು ವಿರಕ್ತರು ಬೇರೆ ಎನ್ನುವ ವಾದ ಬಿಟ್ಟು ಇಡಿ ಮಾನವ ಕುಲಕ್ಕೆ ನೇತೃತ್ವ ಕೊಡುವ ಸಮಯ ಬಂದಿದೆ. ಮಾನವ ಧರ್ಮಕ್ಕೆ ಜಯವಾಗಲಿ ಅಂತ ರೇಣುಕಾಚಾರ್ಯರು ಹೇಳಿದರು, ದಯವೇ ಧರ್ಮದ ಮೂಲವಯ್ಯ ಅಂತ ಬಸವಣ್ಣ ಹೇಳಿದರು. ಇದರಲ್ಲಿ ವ್ಯವತ್ಯಾಸ ಏನಿದೆ. ಮಹಾಪುರುಷರು ಒಂದೇ ರೀತಿಯಿಂದ ಚಿಂತನೆ ಮಾಡಿದಾಗ ನಮ್ಮಲ್ಲಿ ಭಿನ್ನತೆ ಏಕೆ, ಇದರಿಂದ ಸಮಾಜದ ಮೇಲೆ ಧಾರ್ಮಿಕವಾಗಿ ಏನು ಪರಿಣಾಮ ಆಗುತ್ತಿದೆ ಎನ್ನುವ ಅರಿವು ನಮಗಿರಬೇಕು. ಅಂಗೈಯಲ್ಲಿ ಲಿಂಗ ಹಿಡಿದಾಗ ಎಲ್ಲ ಒಂದಾಗುತ್ತದೆ. ಪರಮ ಪೂಜ್ಯರು, ಸಿದ್ದಾಂತ ಸಿಖಾಮಣಿ, ಬಸವಾರಿ ಶರಣರು ಎಲ್ಲರೂ ಹೇಳುವುದು ಲಿಂಗದಲ್ಲಿ ಐಕ್ಯರಾಗುವುದು. ಯಾರೋ ನಮ್ಮ ನಡುವೆ ಭಿನ್ನಾಭಿಪ್ರಾಯ ಉಂಟು ಮಾಡಲು ಪ್ರಯತ್ನಸುತ್ತಿದ್ದಾರೆ ಎಂದು ಅವರು ನುಡಿದರು.
*ಹೃದಯ ಶ್ರೀಮಂತಿಕೆ:*
ನಮ್ಮಲ್ಲಿ ಹೃದಯ ಶ್ರೀಮಂತಿಕೆ ಇದೆ. ಮೆದುಳು ಮತ್ತು ಹೃದಯ ಒಂದಾದಾಗ ಅದೇ ಅಮೃತ ಘಳಿಗೆ ಚಿಂತನೆ ಮತ್ತು ಭಾವನೆ ಒಂದಾದಾಗ ಅದೇ ಅಮೃತ ಗಳಿಗೆ ಪಂಚಪೀಠಾಧೀಶರು ಇಂದು ಅಂತಹ ಅಮೃತ ಘಳಿಗೆಗೆ ನಾಂದಿ ಹಾಡಿದ್ದಾರೆ. ಗುರುಗಳು ಎಲ್ಲರೂ ಒಟ್ಟಾಗಿರುವುದು ನಮಗೆ ದೊಡ್ಡ ಸ್ಪೂರ್ತಿ ಶಕ್ತಿ. ನಾವೆಲ್ಲ ಒಂದಾಗಿ ನಡೆದರೆ ವೀರಶೈವ ಲಿಂಗಾಯತ ಅಷ್ಟೇ ಅಲ್ಲ ಇಡೀ ಭಾರತ ನಮ್ಮ ಜೊತೆಗೆ ನಡೆಯುತ್ತದೆ ಎಂದು ಹೇಳಿದರು.
ಗುರು ಮತ್ತು ಭಕ್ತರ ನಡುವೆ ಪ್ರೀತಿ ವಾತ್ಸಲ್ಯದ ಸಂಬಂಧ, ಉತ್ಕೃಷ್ಟವಾದ ಪ್ರೀತಿ ಅಂದರೆ ಯಾವುದೇ ಷರತ್ತಿಲ್ಲದ ಪ್ರೀತಿ , ಉತ್ಕೃಷ್ಟ ಪ್ರೀತಿ ಸಿಗಬೇಕಾದರೆ ಗುರುವಿನಲ್ಲಿ ನಮ್ಮನ್ನು ನಾವೇ ಅರ್ಪನೆ ಮಾಡಿಕೊಳಗಳಬೇಕು ಗರುವಿನಲ್ಲಿ ಲೀನವಾಗಬೇಕು. ಗುರುಗಳ ಮಾತಿನಲ್ಲಿ ನನಗೆ ಆ ವಾತ್ಸಲ್ಯ ಸಿಕ್ಕಿದೆ. ಬಸಣ್ಣ ಅಂತ ಕರೆದಾಗ ನಾನು ಕರಗಿ ಹೋದೆ. ಗುರು ಮತ್ತು ಭಕ್ತರ ನಡುವೆ ಯಾವುದೆ ಹುದ್ದೆ ಅಧಿಕಾರ ಸಂಬಂಧ ಬರುವುದಿಲ್ಲ. ಕಾಲದ ಕರೆಯನ್ನು ಗಮನಿಸಿ ಪರಮಪೂಜ್ಯರು ಏನು ಕರೆ ಮಾಡಿದ್ದಾರೆ ಅದು ವಿಸ್ತರಣೆ ಆಗಬೇಕು. ಎಲ್ಲ ಗುರುಗಳು ಎಲ್ಲ ಭಕ್ತರು ಒಂದಾಗಬೇಕು ಅಗ ನಮ್ಮನ್ನು ಯಾರು ತಡೆಯುವುದಿಲ್ಲ. ನಮ್ಮ ಶಕ್ತಿಯ ಅರಿವು ನಮಗಿಲ್ಲ. ಶಕ್ತಿ ನಮ್ಮೊಳಗಡೆ ಇದೆ. ವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ ಸಿಕ್ಕಿದೆ ಎಂದರು.
ನಮಗೆ ಜೀವನ ಪದ್ಸತಿ ಮನಸನ್ನು ನಿಯಂತ್ರಣ ಮಾಡಲು ಬೇಕು ಮತ್ತು ವೈಚಾರಿಕತೆಯೂ ಬೇಕು. ಇವೆರಡೂ ಒಂದಾದಾಗ ಇಡೀ ಸಮಾಜ ಹಾಗೂ ಮನುಕುಲಕ್ಕೆ ಒಳ್ಳೆಯದಾಗುತ್ತದೆ. ಮಾನವ ಧರ್ಮಕ್ಕೆ ಜಯವಾಗಬೇಕಾದರೆ ವೀರಶೈವ ಲಿಂಗಾಯತರು ಒಗ್ಗಟ್ಟು ಆಗಬೇಕು. ಒಳಪಂಗಡಗಳ ಬಗ್ಗೆ ಚರ್ಚೆ ಯಾಗುತ್ತದೆ. ವೃತ್ತಿ ಆಧಾರಿತ ಜಾತಿಗಳು ನಿರ್ಮಾಣ ಆಗಿವೆ. ನಮ್ಮ ತಳಹದಿ ಗಟ್ಟಿಯಾಗಬೇಕೆಂದರೆ ಸವಾಲುಗಳನ್ನು ಒಗ್ಗಟ್ಟಾಗಿ ಎದುರಿಸಬೇಕು. ಒಂದು ಕಾಲ ಇತ್ತು ದುಡ್ಡೆ ದೊಡ್ಡಪ್ಪ ಅಂತ ಇತ್ತು. ಬರುವ ದಿನಗಳಲ್ಲಿ ದುಡಿಮೆಯೇ ದೊಡ್ಡಪ್ಪ, ಯಾರಿಗೆ ದುಡಿಮೆ ಇದೆ ಅವರಿಗೆ ಬಡತನವಿಲ್ಲ. ದುಡಿಮೆ ಕಲಿಸುವ ಸಮಾಜ ಅಂದರೆ ವೀರಶೈವ ಲಿಂಗಾಯತ ಸಮಾಜ ಎಲ್ಲಿವರೆಗೂ ಮಾನವನಿಗೆ ದುಡಿಮೆ ಮಾಡುವ ವಿಚಾರ ಇದೆ. ಅಲ್ಲಿವರೆಗೂ ವೀರಶೈವ ಲಿಂಗಾಯತ ಸಮಾಜದ ಜೀವಂತವಾಗಿರುತ್ತದೆ. ಕಾಲಕ್ಕೆ ತಕ್ಕಂತೆ ಒಕ್ಕಟ್ಟಾಗಿ ಗುರುಗಳ ಮಾರ್ಗದರ್ಶನದಂತೆ ನಡೆದುಕೊಂಡು ಹೋಗುತ್ತೇವೆ. ಸೂರ್ಯ ಚಂದ್ರ ಇರುವವರೆಗೂ ವೀರಶೈವ ಲಿಂಗಾಯತ ಶಕ್ತಿ ನಿರಂತರವಾಗಿ ಇರುತ್ತದೆ ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ರಾಜ್ಯ ರೇಲ್ವೆ ಖಾತೆಯ ಸಚಿವರಾದ ವಿ.ಸೋಮಣ್ಣ, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಮಾಜಿ ಸಂಸದರಾದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಬಿ.ಪಿ.ಹರೀಶ, ಸಿ.ಸಿ. ಪಾಟೀಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.