12:00 AM Wednesday16 - July 2025
ಬ್ರೇಕಿಂಗ್ ನ್ಯೂಸ್
ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ… ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ,… ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಭಿವೃದ್ಧಿಪಡಿಸಿದ ವಿಶೇಷ ಡಿಜಿಲಾಕರ್ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ… Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು… ಸಿಗಂಧೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ್ Chikkamagaluru | ಮೂಡಿಗೆರೆ: ವಿದ್ಯುತ್ ತಂತಿ ಸ್ವರ್ಶಿಸಿ ಅನ್ನದಾತ ದಾರುಣ ಸಾವು ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:… ಕನ್ನಡದ ಮೇರು ನಟಿ ಸರೋಜಾದೇವಿ ನಿಧನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬೊಮ್ಮಾಯಿ… Kodagu | ವಿರಾಜಪೇಟೆ: ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಬೆಂಕಿ ಆಕಸ್ಮಿಕ; ಅಪಾರ…

ಇತ್ತೀಚಿನ ಸುದ್ದಿ

ದ.ಕ. ಉಸ್ತುವಾರಿ ದಿನೇಶ್ ಗುಂಡೂರಾವ್: ಕರಾವಳಿಯಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಪ್ಲಾನ್

09/06/2023, 19:26

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ರಾಜ್ಯ ಕಾಂಗ್ರೆಸ್ ಸರಕಾರ ಜಿಲ್ಲಾವಾರು ಉಸ್ತುವಾರಿ ಸಚಿವರುಗಳ ನೇಮಕ ಮಾಡಿದ್ದು, ದ.ಕ. ಜಿಲ್ಲೆಗೆ ದಿನೇಶ್ ಗುಂಡೂರಾವ್, ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನೇಮಿಸಿದೆ. ಆ ಮೂಲಕ ಕರಾವಳಿಯಲ್ಲಿ ಕೇಸರಿ ಪಡೆಯ ಪ್ರಾಬಲ್ಯಕ್ಕೆ ಬ್ರೇಕ್ ಹಾಕಲು ಯೋಜನೆ ರೂಪಿಸಿದೆ.
ಬಿಜೆಪಿಯ ಭದ್ರಕೋಟೆಯಂತಿರುವ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಕೇಸರಿ ಪ್ರಾಬಲ್ಯಕ್ಕೆ ಹೊಡೆತ ಕೊಡುವ ಉದ್ದೇಶದಿಂದ ಸಮರ್ಥ ಸಚಿವರ ಹುಡುಕಾಟದಲ್ಲಿ ಕಾಂಗ್ರೆಸ್ ಪಕ್ಷವು ಕೊನೆಗೂ ಕೆಪಿಸಿಸಿ ಮಾಜಿ ಅಧ್ಯಕ್ಷ, ನಿರ್ಧಾರ ಕೈಗೊಳ್ಳುವಲ್ಲಿ ಸಮರ್ಥ ನಾಯಕ ಎನಿಸಿಕೊಂಡಿರುವ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಮೊನ್ನೆ ಮೊನ್ನೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಮಾತ್ರ
ಗೆದ್ದಿತ್ತು. 2018ರ ಚುನಾವಣೆಗೆ ಹೋಲಿಸಿದರೆ ಒಂದು ಸ್ಥಾನ ಹೆಚ್ಚುವರಿ ಪಡೆದರೂ ಕಾಂಗ್ರೆಸ್ ಜಿಲ್ಲೆಯಲ್ಲಿ ಕಳಪೆ ಸಾಧನೆಯನ್ನೇ ಮಾಡಿದೆ. ಇದಕ್ಕೂ ಕಾರಣಗಳಿವೆ. ಕಾಂಗ್ರೆಸ್ ಅಂದ ಮಾತ್ರಕ್ಕೆ ಅಲ್ಲಿರುವ ನಾಯಕರೆಲ್ಲ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹಾಗೆ ಪಕ್ಷ ನಿಷ್ಠೆ ಉಳ್ಳವರು, ಜಾತ್ಯತೀತ ಮನೋಭಾವದವರು, ಸಮಾಜವಾದವನ್ನು ಬೆನ್ನಿಗೆ ಅಂಟಿಸಿಕೊಂಡವರು, ಸಂವಿಧಾನಕ್ಕೆ ಬದ್ಧರಾಗಿರುವವರು ಎಂದು ಅರ್ಥವಲ್ಲ. ಜಿಲ್ಲಾ ಕಾಂಗ್ರೆಸ್ ನಲ್ಲಿ ಸಾಕಷ್ಟು ಕೋಮುವಾದಿಗಳು, ಜಾತಿವಾದಿಗಳಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲೆಯ ಕಾಂಗ್ರೆಸ್ ನಾಯಕರೊಳಗಿನ
ಹಗ್ಗಜಗ್ಗಾಟ, ಬಿಜೆಪಿ ಪ್ರಾಬಲ್ಯಕ್ಕೆ ತಡೆಯೊಡ್ಡುವಷ್ಟು ಸಾಮರ್ಥ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರಿಗೆ ಇಲ್ಲದಿರುವುದು. ಇವೆಲ್ಲ ಕಾರಣದಿಂದ ಕಾಂಗ್ರೆಸ್ ಗೆ ಇಲ್ಲಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ಪ್ರಾಮಾಣಿಕ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದ ಎರಡು ಕ್ಷೇತ್ರಗಳಲ್ಲಿ ಪುತ್ತೂರು ಕ್ಷೇತ್ರದಿಂದ ಗೆದ್ದಿರುವ ಅಶೋಕ್ ಕುಮಾರ್ ರೈ ಅವರು ಮೊದಲ ಬಾರಿಗೆ ಶಾಸಕರಾದವರು. ಮಂಗಳೂರು ಕ್ಷೇತ್ರದಿಂದ ಗೆದ್ದಿರುವ ಯು.ಟಿ. ಖಾದರ್ ಅವರು 4ನೇ ಬಾರಿ ಗೆದ್ದವರು. ಖಾದರ್ ಅವರು ಸಚಿವರಾಗಿ ಅನುಭವ ಹೊಂದಿದವರು. ಸಜ್ಜನ ಮತ್ತು ಸಮರ್ಥ ನಾಯಕ ಕೂಡ ಹೌದು ಎನ್ನುವುದನ್ನು ಅವರ ವಿರೋಧಿಗಳು ಕೂಡ ಒಪ್ಪಿಕೊಳ್ಳುತ್ತಾರೆ. ಹಾಗಾಗಿ ಖಾದರ್ ಅವರೇ ಉಸ್ತುವಾರಿ ಸಚಿವರಾಗುತ್ತಾರೆ ಎಂದು ಎಲ್ಲ ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ ಬಿಜೆಪಿಯ ಪ್ರಬಲ ಕೋಟೆಯಾಗಿರುವ ದ.ಕ. ಜಿಲ್ಲೆಗೆ ಎಲ್ಲರೊಂದಿಗೂ ಸ್ನೇಹದಿಂದಿರುವ, ಸರಳ, ಸೌಮ್ಯ ಸ್ವಭಾವದ ಖಾದರ್ ಅವರನ್ನು ಉಸ್ತುವಾರಿ ಸಚಿವ ಮಾಡಿದರೆ ಬಿಜೆಪಿ ಪ್ರಾಬಲ್ಯವನ್ನು ತಗ್ಗಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದನ್ನು ಮನಗಂಡ ಕಾಂಗ್ರೆಸ್, ಖಾದರ್ ಅವರಿಗೆ ಸಚಿವ ಸ್ಥಾನ ನೀಡಿಲ್ಲ. ಬದಲಿಗೆ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿರುವ ಬಿಜೆಪಿಗೆ ಬಲವಾದ ಏಟು ನೀಡುವ ದೃಷ್ಟಿಯಿಂದ ಖಾದರ್ ಅವರಿಗೆ ಸ್ಪೀಕರ್ ಎಂಬ ಉನ್ನತ ಸ್ಥಾನವನ್ನು ನೀಡಿ ಅಲ್ಪಸಂಖ್ಯಾತರನ್ನು ಗೌರವಿಸಿದೆ. ಇದೀಗ ಅಲ್ಪಸಂಖ್ಯಾತ ಸಮುದಾಯದ ಖಾದರ್ ಅವರಿಗೆ ಕಾಂಗ್ರೆಸ್ ಮಾತ್ರವಲ್ಲ ಎಲ್ಲ ಪಕ್ಷದ ಶಾಸಕರು ಗೌರವ ನೀಡುವುದು ಅನಿವಾರ್ಯವಾಗಿದೆ. ರಾಜ್ಯಪಾಲರನ್ನು ಬಿಟ್ಟರೆ ಸ್ಪೀಕರ್ ಸ್ಥಾನ ರಾಜ್ಯದ ಎರಡನೇ ಅತ್ಯುನ್ನತ ಸ್ಥಾನವಾಗಿದೆ.
ಇನ್ನು ದಿನೇಶ್ ಗುಂಡೂರಾವ್ ಅವರ ವಿಷಯಕ್ಕೆ ಬರುವುದಾದರೆ ದಿನೇಶ್ ಅವರು 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದವರು. ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಅತಿಯಾದ ಆತ್ಮವಿಶ್ವಾಸ ಹಾಗೂ ಕೆಲವು ತಪ್ಪು ನಿರ್ಧಾರಗಳಿಂದ ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿತ್ತೇ ಹೊರತು ಅಂದಿನ ಕೆಪಿಸಿಸಿ ಅಧ್ಯಕ್ಷರು ಸೋಲಿಗೆ ಕಾರಣರಲ್ಲ ಎನ್ನುವುದು ಗೋಡೆ ಬರಹದಷ್ಟೇ ಸ್ಪಷ್ಟ. ಅದಲ್ಲದೆ ದಿನೇಶ್ ಗುಂಡೂರಾವ್ ಅವರು ರಾಜ್ಯ ಕಾಂಗ್ರೆಸ್ ನ ಮೊದಲ ಸ್ತರದ ನಾಯಕರು. ತನಗೆ ಅನಿಸಿದ್ದನ್ನು ಯಾವುದೇ ಮುಲಾಜಿಲ್ಲದೆ ಗಟ್ಟಿಯಾಗಿ ಹೇಳಬಲ್ಲ ಗಟ್ಟಿತನ ಇವರಲ್ಲಿದೆ. ಇದನ್ನೆಲ್ಲ ಒಪ್ಪಿಕೊಂಡಿರುವ ಕಾಂಗ್ರೆಸ್ ಹೈಕಮಾಂಡೇ ದಿನೇಶ್ ಗುಂಡೂರಾವ್ ಅವರನ್ನು ದ.ಕ. ಜಿಲ್ಲೆಗೆ ಕಳುಹಿಸಿದೆ ಎಂಬ ಮಾಹಿತಿ ಇದೆ. ಮುಂದೆ ಏನಾಗುತ್ತೆ ಕಾದು ನೋಡೋಣ.

ಇತ್ತೀಚಿನ ಸುದ್ದಿ

ಜಾಹೀರಾತು