ಇತ್ತೀಚಿನ ಸುದ್ದಿ
ದ.ಕ. ಜಿಲ್ಲೆಯಲ್ಲಿ ದನಗಳಿಗೆ ಚರ್ಮಗಂಟು ರೋಗ: ಮುನ್ನೆಚ್ಚರಿಕೆ ವಹಿಸಲು ಸೂಚನೆ
02/12/2022, 13:53

ಸುಳ್ಯ(reporterkarnataka.com): ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡ ಚರ್ಮಗಂಟು ರೋಗ ಈಗ ದ.ಕ. ದಲ್ಲಿ ಕಾಣಿಸಿಕೊಂಡಿದೆ. ಆ ಮೂಲಕ ಹೈನುಗಾರರ ನಿದ್ದೆಗೆಡಿಸುವಂತೆ ಮಾಡಿದೆ.
ಜಿಲ್ಲೆಯ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕುಗಳ ಕೆಲವು ಗ್ರಾಮಗಳಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗದ ಲಕ್ಷಣಗಳು ಕಂಡು ಬಂದಿವೆ.
ಚರ್ಮಗಂಟು ರೋಗವು ದನ ಮತ್ತು ಎಮ್ಮೆಗಳಲ್ಲಿ ಕಂಡು ಬರುವ ವೈರಸ್ ಕಾಯಿಲೆಯಾಗಿದ್ದು ಕ್ಯಾಪ್ರಿಪಾಕ್ಸ್ ಎಂಬ ವೈರಾಣುವಿನಿಂದ ಹರಡುತ್ತದೆ. ರೋಗ ತಗುಲಿದ ಪ್ರಾಣಿಯಿಂದ ರಕ್ತ ಹೀರುವ ಸೊಳ್ಳೆ,ಉಣ್ಣೆ ನೊಣಗಳು ಆರೋಗ್ಯವಂತ ಜಾನುವಾರುಗಳಿಗೆ ಕಚ್ಚುವ ಮೂಲಕ ರೋಗವನ್ನು ಹರಡುತ್ತವೆ. ರೋಗಪೀಡಿತ ಜಾನುವಾರುಗಳ ರಕ್ತ, ಕೀವು, ದೈಹಿಕ ಸ್ರಾವಗಳ ನೇರ ಸಂಪರ್ಕದಿಂದಲೂ ರೋಗಾಣು ಹರಡಬಹುದು.
ಬೆಳ್ತಂಗಡಿ ತಾಲೂಕಿನ ಹೊಸಂಗಡಿ, ಚಿಬಿದ್ರೆ, ಧರ್ಮಸ್ಥಳ ಗ್ರಾಮಗಳ ಶಂಕಿತ 5 ಹಸುಗಳ ಕಡಬದ ಕಡಬ, ಕುಟುಪಾಡಿ, ಬಂಟ್ರ ಗ್ರಾಮಗಳ 3 ಹಸುಗಳ, ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು, ಮಕರ್ಂಜೆ ಗ್ರಾಮಗಳ 2 ಚರ್ಮ ಗಂಟು ರೋಗ ಶಂಕಿತ ಹಸುಗಳ ರಕ್ತದ ಮಾದರಿಯನ್ನು ಜಿಲ್ಲಾ ಪ್ರಯೋಗಕ್ಕೆ ಈಗಾಗಲೇ ರವಾನಿಸಲಾಗಿದೆ.
ಚರ್ಮಗಂಟು ರೋಗದ ಲಕ್ಷಣಗಳು ಕಂಡು ಬರುತ್ತಿದ್ದಂತೆ ಇದೀಗ ಜಿಲ್ಲೆಯ ಪ್ರತಿ ತಾಲೂಕಿಗೆ ತಲಾ 19,000 ಲಸಿಕೆಯನ್ನು ಇಲಾಖೆ ವತಿಯಿಂದ ಪೂರೈಸಲಾಗಿದ್ದು, ಅಲ್ಲಲ್ಲಿ ಶಿಬಿರಗಳನ್ನು ಏರ್ಪಡಿಸುವ ಮೂಲಕ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ.