ಇತ್ತೀಚಿನ ಸುದ್ದಿ
ಸಿಲಿಕಾನ್ ಸಿಟಿಯಲ್ಲಿ ಶಾಕಿಂಗ್ ನ್ಯೂಸ್: 11ರ ಬಾಲಕಿಗೆ ಚೂರಿ ಇರಿದು ಕೊಂದ ಪಾತಕಿ ತಾನೂ ಸಾವಿಗೆ ಶರಣು
22/08/2022, 15:42
ಬೆಂಗಳೂರು(reporterkarnataka.com): ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಶಾಕಿಂಗ್ ನ್ಯೂಸ್ ವೊಂದು ಹೊರಬಿದ್ದಿದೆ. ಬೆಂಗಳೂರಿನ ಮಾದನಾಯಕನಹಳ್ಳಿ 11ರ ಹರೆಯದ ಬಾಲಕಿಗೆ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ತಾನೂ ಇರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮಾದನಾಯಕನಹಳ್ಳಿಯ ಕ್ವಾರ್ಟರ್ಸ್ ಆವರಣದಲ್ಲಿ ಇಂದು ಈ ಭಯಾನಕ ಘಟನೆ ನಡೆದಿದೆ. ಉಕ್ಕು ತಯಾರಿಕಾ ಕಾರ್ಖಾನೆಯ ಉದ್ಯೋಗಿ ನಂದಕಿಶೋರ್ ಎಂಬಾತ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಬಾಲಕಿ ಆರೋಪಿಸಿದ್ದು, ಇದರಿಂದ ಕೋಪಗೊಂಡ ನಂದ ಕಿಶೋರ್ ತನ್ನ ಸಹೋದ್ಯೋಗಿ ಲಕ್ಷ್ಮಣ್ ಸಿಂಗ್ ಎಂಬುವರ ಪುತ್ರಿ ಖುಷಿಯನ್ನು ಚೂಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಬ್ಬರೂ ಉತ್ತರಾಖಂಡ್ ಮೂಲದವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಒಂದೇ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು.
ಖುಷಿ ತನ್ನ ಹೆತ್ತವರೊಂದಿಗೆ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದರೆ, ಕಿಶೋರ್ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಖುಷಿ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಳು. ತುಂಬಾ ಚುರುಕಿನ ಹುಡುಗಿಯಾಗಿದ್ದ ಬಾಲಕಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದುದನ್ನು ಕಿಶೋರ್ ಗಮನಿಸಿದ್ದ. ಅವನು ಅವಳೊಂದಿಗೆ ಒಂದೆರಡು ಬಾರಿ ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದನು.
ಈ ವಿಚಾರವನ್ನು ಬಾಲಕಿ ಹೆತ್ತವರಿಗೆ ದೂರು ನೀಡಿದ್ದಳು. ನಂತರ ಕ್ವಾರ್ಟರ್ಸ್ ನಿವಾಸಿಗಳ ಸಂಘಕ್ಕೆ ತಿಳಿಸಿದಳು. ಅಸೋಸಿಯೇಷನ್ ಎಚ್ಚರಿಕೆಯ ನಂತರ ಕ್ವಾರ್ಟರ್ಸ್ ಖಾಲಿ ಮಾಡುವಂತೆ ನಂದ ಕಿಶೋರ್ ಗೆ ತಿಳಿಸಿದ್ದರು. ಇದರಿಂದ ಅಸಮಾಧಾನಗೊಂಡ ಆತ ಬಾಲಕಿಯ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದನು.
ಭಾನುವಾರ ದಿನ ಮಧ್ಯಾಹ್ನ 2.30ರ ಸುಮಾರಿಗೆ ಬಾಲಕಿಯ ಮನೆಯ ಸಮೀಪದಲ್ಲಿದ್ದು ಕಂಡು ಆಕೆಯ ಕುತ್ತಿಗೆ ಮತ್ತು ಹೊಟ್ಟೆಯ ಮೇಲೆ ಪದೇ ಪದೇ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ನಿವಾಸಿಗಳು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ, ತಾನು ಸಹ ಇರಿದುಕೊಂಡು ಮೃತಪಟ್ಟಿದ್ದಾನೆ. ಮಾದನಾಯಕನಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.