ಇತ್ತೀಚಿನ ಸುದ್ದಿ
ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಘ ಉದ್ಘಾಟನೆ: ಓಣಂ ಆಚರಣೆ
06/09/2025, 19:57

ಬಂಟ್ವಾಳ(reporterkarnataka.com): ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಘದ ಉದ್ಘಾಟನೆ ಹಾಗೂ ಓಣಂ ಆಚರಣೆ ಕಾರ್ಯಕ್ರಮ ಆಜಾದ್ ಭವನದಲ್ಲಿ ನಡೆಯಿತು.
ವಿದ್ಯಾರ್ಥಿಗಳು ಕೇರಳ ಶೈಲಿಯ ತಿರುವಾದಿರ ನೃತ್ಯ ಪ್ರದರ್ಶಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಗೆ ಶುಭ ಹಾರೈಸಿ ಆಶೀರ್ವದಿಸಿದರು. ಭವಿಷ್ ಘಟಕದ ಪ್ರಾಂತ ಸಂಯೋಜಕ ಗಣಪತಿ ಹೆಗ್ಡೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದರು. ಪುತ್ತೂರು ನರೇಂದ್ರ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಹಾಗೂ ಯಕ್ಷಗಾನ ಕಲಾವಿದೆ ಮಧುರಾ ಗಣರಾಜ್ ಭಟ್ ಸಾಂಸ್ಕೃತಿಕ ಸಂಘದ ಉದ್ಘಾಟನೆಯನ್ನು ನೆರವೇರಿಸಿದರು. ಭವಿಷ್ಯದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಂಸ್ಕೃತಿಕ ಚಟುವಟಿಕೆ, ನಾಯಕತ್ವ, ವಾಕ್ಚಾತುರ್ಯದ ಮೂಲಕ ತಯಾರಿ ನಡೆಸಬೇಕು ಎಂದರು.
ಓಣಂ ಹಬ್ಬದ ಪ್ರಯುಕ್ತ ಪೂಕಳಂ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರಕಟ್ಟೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭವಿಷ್ ಘಟಕದ ನಿರ್ದೇಶಕಿ ಜಯಲಕ್ಷ್ಮಿ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳಾದ ದಿವ್ಯಲಕ್ಷ್ಮೀ ಸ್ವಾಗತಿಸಿದರು. ಅನ್ವಯ ನರಸಿಂಹ ವಂದಿಸಿದರು. ಧನುಶ್ರೀ ಕಾರ್ಯಕ್ರಮ ನಿರ್ವಹಿಸಿದರು.