ಇತ್ತೀಚಿನ ಸುದ್ದಿ
ಪ್ರೀತಿಯ ಸಂಸ್ಕೃತಿ ಬೆಳೆಸಿ: ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬಿಷಪ್ ಡಾ. ಸಲ್ಡಾನರಿಂದ ಕ್ರಿಸ್ಮಸ್ ಸಂದೇಶ
24/12/2025, 22:57
ಮಂಗಳೂರು(reporterkarnataka.com):ಸಮಾಜದಲ್ಲಿರುವುದು ಒಂದು ಪ್ರೀತಿಯ ಸಂಸ್ಕೃತಿ ಮತ್ತು ಜೀವದ ಸಂಸ್ಕೃತಿ, ಮನುಷ್ಯ ಜೀವಕ್ಕೆ ಗೌರವ ಕೊಡುವ ಸಂಸ್ಕೃತಿಯನ್ನು ಕ್ರೈಸ್ತರು ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ಹೇಳಿದರು.
ಅವರು ಬುಧವಾರ ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಕ್ರಿಸ್ಮಸ್ ಹಬ್ಬದ ವಿಶೇಷ ಬಲಿಪೂಜೆಯ ನೇತೃತ್ವ ವಹಿಸಿ ಸಂದೇಶ ನೀಡುತ್ತಾ, ಯೇಸು ಸ್ವಾಮಿಯ ವಿಶ್ವಾಸಿಗಳು ಪ್ರತ್ಯೇಕವಾಗಿ ಜಗತ್ತಿನಲ್ಲಿ ಶಾಂತಿ ಮತ್ತು ಪ್ರೀತಿಯ ದ್ಯೋತಕವಾಗಿದ್ದಾರೆ. ಎಲ್ಲೆಲ್ಲಿ ಯೇಸು ಸ್ವಾಮಿಯ ಶಿಷ್ಯರಿದ್ದಾರೋ ಅಲ್ಲಿ ಶಾಂತಿಯ ವಾತಾವರಣವನ್ನು ಸೃಷ್ಟಿಸಲು, ಪ್ರೀತಿಯ ಸಂಸ್ಕೃತಿಯನ್ನು ಬೆಳೆಸಲು ಶ್ರಮಿಸುತ್ತಾರೆ. ನಾನು ನಿಮ್ಮನ್ನು ಪ್ರೀತಿಸಿದಂತೆ, ನೀವು ಎಲ್ಲರನ್ನೂ ಪ್ರೀತಿಸಿರಿ ಎಂಬ ಯೇಸುವಿನ ಮಾತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿದ್ದಾರೆ ಎಂದರು.
ಪ್ರೀತಿ, ಸೇವೆಯ ಪ್ರತೀಕ: ನಮ್ಮ ಈ ದೇಶದಲ್ಲಿ ಕ್ರೈಸ್ತರ ಕೊಡುಗೆ ಅಪಾರ. ಪ್ರತ್ಯೇಕವಾಗಿ ಪ್ರೀತಿ ಹಾಗೂ ಸೇವೆಯ ಪ್ರತೀಕವಾದ ಈ ಕ್ರೈಸ್ತರು ಯೇಸುಕ್ರಿಸ್ತರ ಜೀವನದ ಒಂದು ಪ್ರತಿಫಲನ. ಕ್ರಿಸ್ಮಸ್ ಹಬ್ಬವು ನಮಗೆ ವಿಶೇಷವಾಗಿ ಕ್ರೈಸ್ತನಂತೆ ಆಗಲು ಪ್ರೇರೇಪಿಸುತ್ತದೆ. ನಾವು ಸಹ ಶಾಂತಿಯ ದೂತರಾಗಿ ಮನುಷ್ಯ ಮನುಷ್ಯರ ನಡುವೆ ಒಂದು ಸೇತುವೆಯಾಗಿ ಸತ್ಯದ ಪ್ರವಾದಿಯಾಗಿ ಹಾಗೂ ಎಲ್ಲರನ್ನೂ ಪ್ರೀತಿಸುವವರಾಗಿ ಬೆಳೆಯಲು ಯೇಸು ಸ್ವಾಮಿಯ ಕೃಪಾವರಗಳು ನಮಗೆ ಸಹಾಯ ಮಾಡುತ್ತಿವೆ ಎಂದರು.
ಶಾಂತಿಯ ಮಂತ್ರವೇ ಪ್ರದಾನ: ದೇವರು ಪ್ರೀತಿಯ ಭಾಷೆಯಲ್ಲಿ ಮಾತನಾಡುತ್ತಾರೆ. ಪ್ರೀತಿಗೆ ಹೆಚ್ಚು ಮಹತ್ವ ಕೊಡುವ ಮೂಲಕ ನಾವು ಸಮಾಜದಲ್ಲಿರುವ ನೆರೆಹೊರೆಯವರ ಜತೆಗೆ ಪ್ರೀತಿಯನ್ನು ಹಂಚುವ ಕೆಲಸ ಮಾಡಬೇಕು ಎಂದು ಹಬ್ಬದ ಮೂಲಕ ಯೇಸು ಸಾರುತ್ತಾರೆ. ಕ್ರೈಸ್ತ ಪವಿತ್ರಗ್ರಂಥಗಳಲ್ಲಿ ದೇವರು ಕೋಪ, ದ್ವೇಷದ ಮಾತುಗಳನ್ನು ಎಲ್ಲಿಯೂ ಆಡಿಲ್ಲ. ಅವರು ಪ್ರೀತಿಯ ಮಾತುಗಳನ್ನೇ ಹೇಳುತ್ತಾ ಸಾಗಿದರು. ಗೋದಲಿಯಲ್ಲಿ ಶ್ರೀಸಾಮಾನ್ಯರಂತೆ ಹುಟ್ಟಿದ ಯೇಸು ಜಗತ್ತಿನಲ್ಲಿ ತನ್ನ ಸರಳತೆಯ ಮೂಲಕ ಪ್ರೀತಿ, ಶಾಂತಿ, ನೆಮ್ಮದಿ ಜತೆಗೆ ಕ್ಷಮಿಸುವ ಗುಣವನ್ನು ಮೈಗೂಡಿಸಿಕೊಳ್ಳಲು ಸೂಚಿಸಿದರು ಎಂದರು.
ಈ ಸಂದರ್ಭ ರೊಸಾರಿಯೋ ಕೆಥೆಡ್ರಲ್‌ನ ಪ್ರಧಾನ ಧರ್ಮಗುರು ಫಾ. ವಲೇರಿಯನ್ ಡಿಸೋಜ, ಸಹಾಯಕ ಧರ್ಮಗುರುಗಳಾದ ಫಾ. ವಲೇರಿಯನ್ ಫರ್ನಾಂಡೀಸ್, ಫಾ.ಜೈಸನ್ ಲೋಬೋ ಭಾಗವಹಿಸಿದ್ದರು. ಇದೇ ರೀತಿಯಲ್ಲಿ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ನಲ್ಲಿ ಫಾ. ಬೊನವೆಂಚರ್ ನಜರೇತ್, ಉರ್ವ ಲೇಡಿಹಿಲ್ ಚರ್ಚ್ನಲ್ಲಿ ಫಾ. ಬೆಂಜಮಿನ್ ಪಿಂಟೋ, ಅಶೋಕನಗರದ ಸಂತ ಡೊಮಿನಿಕ್ ಚರ್ಚ್ ನಲ್ಲಿ ಫಾ. ಡೇನಿಯಲ್ ಸಂಪತ್ ವೇಗಸ್, ಕೂಳೂರು ಚರ್ಚ್ ನಲ್ಲಿ ಫಾ. ವಿಜಯ ವಿಕ್ಟರ್ ಲೋಬೋ ಅವರು ಕ್ರಿಸ್ಮಸ್ ಸಂಭ್ರಮದ ಬಲಿಪೂಜೆಯ ನೇತೃತ್ವ ವಹಿಸಿ ಸಂದೇಶವನ್ನು ನೀಡಿದರು. ಇದೇ ರೀತಿಯಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಚರ್ಚ್ ಗಳಲ್ಲಿ ಸಂಜೆ ಹೊತ್ತು ಕ್ರಿಸ್ಮಸ್ ಕ್ಯಾರೆಲ್ಸ್, ಕ್ರಿಸ್ಮಸ್ ಬಲಿಪೂಜೆ ಹಾಗೂ ಕ್ರಿಸ್ಮಸ್ ಕಾರ‍್ಯಕ್ರಮಗಳು ಸಾಗಿತು. ಕ್ರೈಸ್ತರು ಹಬ್ಬದ ಸಂಭ್ರಮದಲ್ಲಿ ಪರಸ್ಪರ ಶುಭಾಶಯ ಕೋರುವ ಸಿಹಿತಿನಸುಗಳು( ಕುಸ್ವಾರ್) ಕೇಕ್‌ಗಳನ್ನು ನೀಡುವ ದೃಶ್ಯಗಳು ಎಲ್ಲೆಡೆ ಕಾಣಿಸಿಕೊಂಡಿತು.












