ಇತ್ತೀಚಿನ ಸುದ್ದಿ
CPM | ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಏ. 29ರಂದು ಬ್ರಹತ್ ಮೆರವಣಿಗೆ, ಹಕ್ಕೊತ್ತಾಯ ಸಮಾವೇಶ
07/04/2025, 21:02

ಉಳ್ಳಾಲ(reporterkarnataka.com): ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಜನಸಾಮಾನ್ಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏ. 29ರಂದು ದೇರಳಕಟ್ಟೆ ಜಂಕ್ಷನ್ ನಲ್ಲಿ ಬ್ರಹತ್ ಮೆರವಣಿಗೆ ಹಾಗೂ ಹಕ್ಕೊತ್ತಾಯ ಸಮಾವೇಶ ಜರುಗಲಿದೆ.
ಇದರ ಪೂರ್ವಭಾವಿ ತಯಾರಿಗಾಗಿ ಮುನ್ನೂರು ಯುವಕ ಮಂಡಲದಲ್ಲಿ ಆಯೋಜಿಸಿದ CPIM ಪಕ್ಷದ ಕಾರ್ಯಕರ್ತರ ಹಾಗೂ ಹಿತೈಷಿಗಳ ಸಮಾವೇಶವು ನಿರೀಕ್ಷೆಗೂ ಮೀರಿ ಯಶಸ್ವಿ ಕಂಡಿತು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ CPIM ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ ಯಾದವ ಶೆಟ್ಟಿಯವರು, ಉಳ್ಳಾಲ ತಾಲೂಕು ರಚನೆಯಾಗಿ 5 ವರ್ಷಗಳು ಕಳೆದರೂ ಇನ್ನೂ ಕೂಡ ಇಲ್ಲಿನ ಜನತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಖಾಸಗಿ ಮೆಡಿಕಲ್ ಕಾಲೇಜ್, ಕಾರ್ಪೊರೇಟ್ ಆಸ್ಪತ್ರೆ, ವ್ರತ್ತಿಪರ ಕಾಲೇಜ್ ಗಳಿಂದ ತುಂಬಿ ತುಳುಕುತ್ತಿರುವ ಉಳ್ಳಾಲ ತಾಲೂಕು ಭಾರೀ ಅಭಿವೃದ್ಧಿಯ ನಾಗಾಲೋಟದಲ್ಲಿ ಇದ್ದಂತೆ ಭಾಸವಾದರೂ,ಇದರ ಹಿಂದೆ ಅಗಾಧವಾದ ಸಮಸ್ಯೆಗಳಿವೆ, ಜನಸಾಮಾನ್ಯರ ಬವಣೆಗಳನ್ನು ಕೇಳುವ ಗತಿ ಇಲ್ಲದಂತಾಗಿದೆ. ಇದರ ವಿರುದ್ಧ ಪ್ರಬಲ ಜನಚಳುವಳಿ ಹೋರಾಟ ಬೆಳೆದು ಬಂದರೆ ಮಾತ್ರವೇ ಉಳ್ಳಾಲ ತಾಲೂಕು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CPIM ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ತಾಲೂಕು ರಚನೆಯಾಗಿ 5 ವರ್ಷ ಕಳೆದರೂ ,ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ಇರುವ ಸುಸಜ್ಜಿತವಾದ ತಾಲೂಕು ಕಚೇರಿ ಹೊಂದುವ ಭಾಗ್ಯ ಇನ್ನೂ ಒದಗಿ ಬಂದಿಲ್ಲ. ಶಿಕ್ಷಣ ಉದ್ಯೋಗ ಅರೋಗ್ಯ ಕ್ಷೇತ್ರಗಳು ಸಂಪೂರ್ಣ ವಾಣಿಜ್ಯೀಕರಣಗೊಂಡು ಬಡವರ ಸಂಕಷ್ಟವನ್ನು ಹೇಳತೀರದಾಗಿದೆ.ನಿವೇಶನ ರಹಿತರ ಪಟ್ಟಿ ಹಾಗೂ ನಿವೇಶನವನ್ನು ಇನ್ನೂ ಕಾದಿರಿಸಿಲ್ಲ.ಕ್ರಷಿಯೋಗ್ಯವಾದ ಭೂಮಿ ನವ ಭೂಮಾಲಕರ ಕೈಸೇರುವ ಮೂಲಕ ಭೂಮಾಫಿಯಾ ಬೆಳೆಯುತ್ತಿದೆ. ಇಂತಹ ಹಲವು ರೀತಿಯ ಸಮಸ್ಯೆಗಳನ್ನು ಮುಂದಿಟ್ಟು ಎಲ್ಲಾ ಜನವಿಭಾಗದವರನ್ನು ಸೇರಿಸಿ ಎಪ್ರಿಲ್ 29ರಂದು ನಡೆಯಲಿರುವ ಸಮಾವೇಶದಲ್ಲಿ ಉಳ್ಳಾಲ ತಾಲೂಕಿನ ಜನತೆ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕೆಂದು ಕರೆ ನೀಡಿದರು.
CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುಕುಮಾರ್ ರವರು ಮಾತನಾಡಿ ಹೋರಾಟದ ಮಹತ್ವವನ್ನು ವಿವರಿಸುತ್ತಾ, ಜನತೆಯ ಬೇಡಿಕೆಗಳ ಬಗ್ಗೆ ಗಮನ ಸೆಳೆದರು.
ಸಭೆಯ ಅಧ್ಯಕ್ಷತೆಯನ್ನು CPIM ಹಿರಿಯ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್ ರವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಕ್ಕೊತ್ತಾಯ ಸಮಾವೇಶದ ಪೋಸ್ಟರ್ ನ್ನು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ CPIM ಜಿಲ್ಲಾ ಸಮಿತಿ ಸದಸ್ಯರಾದ ರಫೀಕ್ ಹರೇಕಳ, ಶೇಖರ್ ಕುಂದರ್, CITU ಮುಖಂಡರಾದ ಸುಂದರ ಕುಂಪಲ, ರೋಹಿದಾಸ್, ಕಟ್ಟಡ ಕಾರ್ಮಿಕರ ಸಂಘಟನೆಯ ಅಧ್ಯಕ್ಷರಾದ ಜನಾರ್ದನ ಕುತ್ತಾರ್, DYFI ಉಳ್ಳಾಲ ತಾಲೂಕು ಅಧ್ಯಕ್ಷರಾದ ನಿತಿನ್ ಕುತ್ತಾರ್,ದಲಿತ ಹಕ್ಕುಗಳ ಸಮಿತಿಯ ವಿಶ್ವನಾಥ ಮಂಜನಾಡಿ, ದ್ವೀಪವಾಸಿಗಳ ಹೋರಾಟ ಸಮಿತಿಯ ಮುಖಂಡರಾದ ಸುನೀತಾ ಡಿಸೋಜ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ವಿನಾಯಕ ಶೆಣೈ,ಕೋಟೆಕಾರ್ ಬ್ಯಾಂಕ್ ನ ನಿರ್ದೇಶಕರಾದ ಕೃಷ್ಣಪ್ಪ ದೇರಳಕಟ್ಟೆ, ಪ್ರಗತಿಪರ ಚಿಂತಕರಾದ ರಮೇಶ್ ಉಳ್ಳಾಲ,ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಅಡ್ಯಂತಾಯ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು,ರೈತ, ಕಾರ್ಮಿಕರು, ದಲಿತ ಆದಿವಾಸಿ ಬಂಧುಗಳು, ವಕೀಲರು, ಪ್ರಗತಿಪರ ಚಿಂತಕರು, ಸಾಮಾಜಿಕ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಎಪ್ರಿಲ್ 29ರ ಬ್ರಹತ್ ಮೆರವಣಿಗೆ ಹಾಗೂ ಹಕ್ಕೊತ್ತಾಯ ಸಮಾವೇಶದ ಸಂದೇಶಗಳನ್ನು ಪ್ರತೀ ಮನೆಮನೆಗೆ ತಲುಪಿಸಲು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಜನತೆಯನ್ನು ಅಣಿನೆರೆಸಲು ನೂರಾರು ಸಂಖ್ಯೆಯಲ್ಲಿ ತಂಡಗಳನ್ನು ರಚಿಸಿ ಪ್ರಚಾರ ಕಾರ್ಯವನ್ನು ಕೈಗೊಳ್ಳಲು ಒಕ್ಕೊರಲಿನಿಂದ ತೀರ್ಮಾನ ಕೈಗೊಳ್ಳಲಾಯಿತು.