ಇತ್ತೀಚಿನ ಸುದ್ದಿ
ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್ ಸ್ಥಾಪನೆ
06/03/2026, 15:51
ಬೆಂಗಳೂರು(reporterkarnataka.com): ಕಾಗದರಹಿತ, ಸಮರ್ಥ ಮತ್ತು ನಾಗರಿಕ-ಕೇಂದ್ರಿತ ನ್ಯಾಯಾಂಗವನ್ನು ಜಾರಿಗೆ ತರಲು ಬೆಂಗಳೂರು, ಧಾರವಾಡ, ಕಲಬುರಗಿ ಮತ್ತು ಮೈಸೂರು ನಗರಗಳಲ್ಲಿ ಪ್ರಾಯೋಗಿಕವಾಗಿ ʻಇ-ಕೋರ್ಟ್ʼ ಗಳನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇಂದು ಬಜೆಟ್ ಮಂಡನೆಯ ವೇಳೆ ಈ ಬಗ್ಗೆ ಅವರು ಮಾಹಿತಿ ನೀಡಿದರು.
ಕಳೆದ ಸಾಲಿನಲ್ಲಿ ವಿಶೇಷ ಲೋಕ್ ಅದಾಲತ್‌ಗಳನ್ನು ನಡೆಸಿ 2.82 ಕೋಟಿ ಸಿವಿಲ್ ಪ್ರಕರಣಗಳನ್ನು ಮತ್ತು 1,113 ಭೂಸ್ವಾಧೀನ ಪ್ರಕರಣಗಳನ್ನು ಅನುಕ್ರಮವಾಗಿ 9,978 ಕೋಟಿ ರೂ. ಮತ್ತು 132 ಕೋಟಿ ರೂ.ಗಳ ಪರಿಹಾರದ ಮೊತ್ತದೊಂದಿಗೆ ಇತ್ಯರ್ಥಪಡಿಸಲಾಗಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಣೆಗೊಳಿಸಲು ಮೂಲಭೂತ ಸೌಕರ್ಯಗಳಾದ ಕೋರ್ಟ್ ಕಟ್ಟಡ ಹಾಗೂ ನ್ಯಾಯಾಧೀಶರಿಗೆ ವಸತಿ ಗೃಹ ನಿರ್ಮಾಣಕ್ಕಾಗಿ 175 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ನಿರ್ಮಾಣ ಮಾಡಲಾಗುವುದು. ಅಡ್ವೋಕೇಟ್ ಜನರಲ್‌ರವರ ಕಛೇರಿಗೆ ಗ್ರಂಥಾಲಯ, ವಿ.ಸಿ. ಸೌಲಭ್ಯ ಒದಗಿಸಲು ಹಾಗೂ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಕಛೇರಿಗಳಲ್ಲಿನ CCMS ಮತ್ತು e-filing ಗೆ ಅಗತ್ಯವಿರುವ ಮೂಲ ಸೌಕರ್ಯವನ್ನು ಉನ್ನತೀಕರಿಸಲು ಐದು ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಗೊಳಿಸಿ ಕಡಿಮೆ ಮಾಡಬಹುದಾಗಿದ್ದು, ಮಧ್ಯಸ್ಥಿಕೆಯಲ್ಲಿ ಆಸಕ್ತಿ ಇರುವ ನ್ಯಾಯಾಧೀಶರು ಮತ್ತು ವಕೀಲರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಸರ್ಕಾರದಿಂದ ರಚಿಸಲ್ಪಡುವ ಎಲ್ಲಾ ಕಾನೂನುಗಳನ್ನು ಕನ್ನಡದಲ್ಲಿ ಸಿದ್ಧಪಡಿಸಲಾಗುವುದು. ಅಲ್ಲದೇ, ಕೇಂದ್ರ ಸರ್ಕಾರವು ಇಲ್ಲಿಯವರೆಗೂ ಅಧಿನಿಯಮಿಸಿದ ಎಲ್ಲಾ ಕಾನೂನುಗಳನ್ನು ಕನ್ನಡಕ್ಕೆ ಭಾಷಾಂತರಿಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದರು.













