ಇತ್ತೀಚಿನ ಸುದ್ದಿ
ಕೊರೊನಾ 3ನೇ ಅಲೆಯಲ್ಲಿ ತಾಯಿ – ಮಗು ಆರೈಕೆಗೆ ಕ್ರಮ ವಹಿಸಿ: ಸಚಿವ ಅರವಿಂದ ಲಿಂಬಾವಳಿ
07/07/2021, 10:23
ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಕೋಲಾರ ಜಿಲ್ಲೆಯಲ್ಲಿ ತಾಯಿ – ಮಗು ಆರೈಕೆಗೆ 3ನೇ ಅಲೆ ಎದುರಿಸಲು ಮಾಡಿಕೊಂಡಿರುವ ತಯಾರಿ ಬಗ್ಗೆ ಒಂದು ವಾರದಲ್ಲಿ ಪ್ರಾತ್ಯಕ್ಷಿಕೆ ತೋರಿಸಬೇಕು . ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಲಸಿಕೆ ಕೊರತೆಯಾಗದಂತೆ ಕ್ರಮ ವಹಿಸಿ ಕೊರೊನಾ ಹರಡುವುದನ್ನು ಪ್ರಾಥಮಿಕ ಹಂತದಲ್ಲಿ ನಿಯಂತ್ರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು .
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು , ಎರಡನೇ ಅಲೆಯಲ್ಲಿ ಬೆಡ್‌ಗಳು ಮತ್ತು ಆಕ್ಸಿಜನ್ ಕೊರತೆ ಆಗಿರುವುದರಿಂದ 3 ನೇ ಅಲೆಯನ್ನು ತಡೆಯಲು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಮಕ್ಕಳ ಆರೈಕೆ ಮತ್ತು ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹೆಚ್ಚಿನ ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೂ ಎರಡೂ ಡೋಸ್ ಲಸಿಕೆಯನ್ನು 77961 ಜನರಿಗೆ ನೀಡಲಾಗಿದೆ . ಮುಂದಿನ ದಿನಗಳಲ್ಲಿ ಲಸಿಕೆ ಲಭ್ಯತೆ ನೋಡಿಕೊಂಡು 2 ನೇ ಡೋಸ್ ಲಸಿಕೆ ಪಡೆಯುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ . ಬಾಣಂತಿಯರಿಗೆ ಲಸಿಕೆ ಕೊಟ್ಟರೆ ಎದೆಹಾಲು ಕುಡಿಸುವುದರಿಂದ ಮಕ್ಕಳಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಮಗುವಿಗೂ ಸಹ ಕೊರೊನಾ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಗರ್ಭಿಣಿ ಸ್ತ್ರೀಯರಿಗೂ ಲಸಿಕೆ ಹಾಕುವುದರಿಂದ ಹುಟ್ಟುವ ಮಗುವಿಗೂ ಕೊರೊನಾ ಬರುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದರು.
ಮೂರನೇ ಅಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಏರಿಕೆಯಾದರೆ ಆ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಮಾಡಲಾಗುವುದು. ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಕರ್ಯಗಳ ಕೊರತೆ ಇದೆ. ಅದನ್ನು ನಿವಾರಿಸಲು ವಿಸ್ಟಾನ್ ಕಂಪನಿಯಿಂದ ವೈದ್ಯಕೀಯ ಸಲಕರಣೆಗಳನ್ನು ಪೂರೈಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದೇವೆ . ಕೆಲವೇ ದಿನಗಳಲ್ಲಿ ವೈದ್ಯಕೀಯ ಸಲಕರಣೆಗಳ ಕೊರತೆಯು ಸಹ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಸಚಿವರಿಗೆ ತಿಳಿಸಿದರು.
ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಹೊರ ರಾಜ್ಯಗಳಿಂದ ಬರುವ ಜನರಿಗೆ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯಗೊಳಿಸಬೇಕು , ಲಸಿಕೆ ಪಡೆದಿರುವ ಮಾಹಿತಿ ಹೊಂದಿರುವುದರ ಬಗ್ಗೆ ಪರಿಶೀಲನೆ ನಡೆಸಬೇಕು. ಒಂದು ವೇಳೆ ವರದಿ ಇಲ್ಲದಿದ್ದಲ್ಲಿ ಸ್ಥಳದಲ್ಲೇ ರಾಪಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಗ್ರಾಮಸ್ಥರು ಹೊಸ ಮನೆಗಳ ನಿರ್ಮಾಣ ಮಾಡುವಾಗ ಮಳೆ ನೀರು ಕೊಯ್ತು ಅಳವಡಿಸಿಕೊಳ್ಳಲು ಕಡ್ಡಾಯಗೊಳಿಸಿ. ಇದರಿಂದ ಗ್ರಾಮೀಣ ಪ್ರದೇಶದ ಅಂತರ್ಜಲ ಮರುಪೂರಣ ಕಾರ್ಯವಾಗಲಿದ್ದು ನೀರಿನ ಕೊರತೆ ನೀಗಿಸಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು . ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ಟ್ಯಾಂಕರ್ ಅಥವಾ ಖಾಸಗಿ ಕೊಳವೆಬಾವಿಗಳ ಮುಖಾಂತರ ನೀರು ಪೂರೈಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು .
ಗ್ರಾಮೀಣಾ ಪ್ರದೇಶಗಳಲ್ಲಿ ಜಾಬ್ ಕಾರ್ಡ್ ಹೊಂದಿರುವ ವ್ಯಕ್ತಿಯು ವರ್ಷದಲ್ಲಿ 100 ದಿನ ಕೆಲಸ ಮಾಡಬಹುದು . ಗ್ರಾಮಗಳಲ್ಲಿ ಸ್ಮಶಾನ ಅಭಿವೃದ್ಧಿ , ಸ್ಕೂಲ್ ಕಾಂಪೌಂಡ್ , ರಾಜ ಕಾಲುವೆಗಳು , ಅಂಗನವಾಡಿ ಕಾಂಪೌಂಡ್ , ಕುರಿ ಶೆಡ್ ಮುಂತಾದವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವುದರಿಂದ ಹೆಚ್ಚಿನ ಕ್ರಿಯಾಶೀಲತೆಯಾಗಿ ಅಭಿವೃದ್ಧಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು . ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಸ ವಿಲೇವಾರಿ ಮಾಡುವಾಗ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಜಿಲ್ಲೆಯನ್ನು ಸ್ವಚ್ಛವಾಗಿರಿಸಬೇಕು . ಆಸ್ಪತ್ರೆ ಮತ್ತು ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುತ್ತಿರುವ ಬಗ್ಗೆ ಗ್ರಾಮ ಪಂಚಾಯತ್ ಅಧಿಕಾರಿಗಳು ಪರಿಶೀಲಿಸಬೇಕು . ಇಲ್ಲವಾದಲ್ಲಿ ಜಲಸಂಪನ್ಮೂಲಗಳು ಕಲುಶಿತಗೊಳ್ಳಲಿವೆ . ಕೈಗಾರಿಕಾ ಪ್ರದೇಶದ ಕಸದಲ್ಲಿ ಪ್ಲಾಸ್ಟಿಕ್ , ಕಬ್ಬಿಣ ಬೇರ್ಪಡಿಸಿ ಹರಾಜು ಹಾಕಿದರೆ ಗ್ರಾಮ ಪಂಚಾಯಿತಿಗೆ ಹಣ ಬರುತ್ತದೆ . ಅದನ್ನು ಗ್ರಾಮದ ಅಭಿವೃದ್ಧಿಗೆ ಬಳಸಬೇಕು ಎಂದು ಸಚಿವರು ತಿಳಿಸಿದರು . ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್ . ಎಂ . ನಾಗರಾಜ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರ್ ಬಾಬು , ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್ , ಅಪರ ಜಿಲ್ಲಾಧಿಕಾರಿಗಳಾದ ಡಾ. ಸ್ನೇಹಾ , ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್ , ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವಶಂಕರ್ , ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು .