ಇತ್ತೀಚಿನ ಸುದ್ದಿ
ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿ
10/01/2026, 22:26
*ನಾವು ಹೆದರಿ ಓಡಿ ಹೋಗಲ್ಲ, ಬಹಿರಂಗ ಚರ್ಚೆಗೆ ತಯಾರಿದ್ದೇವೆ ಎಂದು ಕೇಂದ್ರ ಸಚಿವರ ಸವಾಲು*
*ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನರೇಗಾ ತಪ್ಪುಗಳನ್ನು ಸರಿಪಡಿಸಿದ್ದೇವೆ*
*ಇಷ್ಟು ದಿನ ಕಳ್ಳಬಿಲ್ಲು ಮಾಡಿ ಕಾರ್ಮಿಕರ ಹಣ ಲೂಟಿ ಮಾಡಿದರು*
*ಜಿ ರಾಮ್ ಜಿ ಯಿಂದ ರಾಜ್ಯ & ಪಂಚಾಯಿತಿಗಳ ಅಧಿಕಾರಕ್ಕೆ ಧಕ್ಕೆ ಇಲ್ಲ*
*ಬೆಂಗಳೂರಿನಲ್ಲಿ ಬಿಜೆಪಿ ನಾಯಕರ ಜತೆ ಜಂಟಿ ಮಾಧ್ಯಮಗೋಷ್ಠಿ ನಡೆಸಿದ HDK*
ಬೆಂಗಳೂರು(reporterkarnataka.com): ಜಿ ರಾಮ್ ಜಿ (G RAM G) ಯೋಜನೆಯ ಬಗ್ಗೆ ಕಾಂಗ್ರೆಸ್ ಪಕ್ಷ ಸುಳ್ಳಿನ ಸಂಕಥನ ಸೃಷ್ಟಿ ಮಾಡುತ್ತಿದ್ದು, ಆ ಸುಳ್ಳನ್ನು ಎದುರಿಸಲು ನಾವು ದಾಖಲೆ ಸಮೇತ ಬಹಿರಂಗ ಚರ್ಚೆಗೆ ತಯಾರಿದ್ದೇವೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸವಾಲೊಡ್ಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಂತೆ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)’ ಯೋಜನೆ ಬಗ್ಗೆ ಕಾಂಗ್ರೆಸ್ ಹರಡುತ್ತಿರುವ ಸುಳ್ಳುಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಕಾಂಗ್ರೆಸ್ ಸುಳ್ಳುಗಳನ್ನು ಜನರು ನಂಬುವ ಕಾಲ ಹೋಗಿದೆ ಎಂದರು.








ಜಿ ರಾಮ್ ಜಿ ಯೋಜನೆ ಬಗ್ಗೆ ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿದರು ಕೇಂದ್ರ ಸಚಿವರು.
ಕಾಂಗ್ರೆಸ್ ಪಕ್ಷವು ದೇಶದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದೆ. ಯಾವುದಾದರೂ ಪ್ರಮುಖ ಯೋಜನೆಗಳಿಗೆ ಮಹಾತ್ಮ ಗಾಂಧಿ ಅವರ ಹೆಸರನ್ನಿಟ್ಟಿದ್ದಾರೆಯೇ? ಎಲ್ಲಾ ಯೋಜನೆಗಳಿಗೆ ನೆಹರು ಕುಟುಂಬದ ಸದಸ್ಯರ ಹೆಸರುಗಳನ್ನು ಇಟ್ಟು ಗಾಂಧೀಜಿಗೆ ದ್ರೋಹ ಬಗೆದಿದ್ದಾರೆ. ಇವರಿಗೆ ಗಾಂಧೀಜಿ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕೇಂದ್ರ ಸಚಿವರು ಕಿಡಿಕಾರಿದರು.
*ನಕಲಿ ಬಿಲ್ ಸೃಷ್ಟಿಸಿ ಲೂಟಿ ಮಾಡಿದ್ದು ಸಾಲದೇ:?*
ಹೊರಗೆ ಅಪಪ್ರಚಾರ ಮಾಡುತ್ತಿರುವುದು ಸಾಲದು ಎಂಬಂತೆ ವಿಧಾನಸಭೆ ಅಧಿವೇಶನವನ್ನು ಬೇರೆ ಕರೆಯುತ್ತಿದ್ದಾರೆ. ಪಾದಯಾತ್ರೆಯನ್ನು ಕೂಡ ನಡೆಸುತ್ತಾರಂತೆ! ಯಾವ ಪುರುಷಾರ್ಥಕ್ಕೆ ಇದೆಲ್ಲವನ್ನೂ ಮಾಡುತ್ತಾರೆ? ನರೇಗಾ ಹೆಸರಿನಲ್ಲಿ ನಕಲಿ ಬಿಲ್’ಗಳನ್ನು ಸೃಷ್ಟಿಸಿ ಲೂಟಿ ಮಾಡಿದ್ದು ಸಾಲದೇ? ಕಾಂಗ್ರೆಸ್’ನವರಿಂದ ಬಡ ಕೂಲಿ ಕಾರ್ಮಿಕರಿಗೆ ನ್ಯಾಯ ಸಿಕ್ಕುತ್ತದೆಯೇ? ಕಾರ್ಮಿಕರಿಗೆ ನ್ಯಾಯ ಮಾಡದೆ ಇವರು ಏನು ಮಾಡುತ್ತಿದ್ದರು? ನಕಲಿ ಬಿಲ್ಲುಗಳನ್ನು ತಡೆಯಲು, ನಕಲಿ ಕಾರ್ಡುಗಳನ್ನು ಪತ್ತೆ ಹಚ್ಚಲು ಇವರು ವಿಫಲವಾಗಿದ್ದು ಯಾಕೆ? ಎಂದು ಸಚಿವ ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ನರೇಗಾ ಯೋಜನೆ ಸ್ಥಗಿತವಾಗಿಲ್ಲ. ಕಳೆದ ಅನೇಕ ವರ್ಷಗಳಿಂದ ಈ ಯೋಜನೆಯಲ್ಲಿ ನಡೆದಿದ್ದ ಅಕ್ರಮಗಳನ್ನು ನರೇಂದ್ರ ಮೋದಿ ಅವರ ಸರಕಾರ ಸರಿಪಡಿಸಿ ಅದರಲ್ಲಿ ಅನೇಕ ಮಹತ್ವದ ಸುಧಾರಣೆಗಳನ್ನು ತಂದಿದೆ. ಲೋಪಗಳನ್ನು ಸರಿಪಡಿಸಿ ಸುಧಾರಣೆಗಳನ್ನು ಮಾಡುವುದು ತಪ್ಪು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಸರಿಯಲ್ಲ. ಜಿ ರಾಮ್ ಜಿ ಯೋಜನೆಯಿಂದ ಗ್ರಾಮ ಪಂಚಾಯ್ತಿ ಅಧಿಕಾರಕ್ಕೆ ಆಗಲಿ ಅಥವಾ ರಾಜ್ಯ ಸರ್ಕಾರಗಳ ಅಧಿಕಾರಕ್ಕೆ ಯಾವುದೇ ಧಕ್ಕೆ ಆಗಲ್ಲ ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.
ಈ ಯೋಜನೆಗೆ ಪೂರ್ಣ ಅನುದಾನ ನೀಡುತಿರುವುದು ಕೇಂದ್ರ ಸರ್ಕಾರ. ಕೇಂದ್ರ ನೀಡಿರುವ ಅನುದಾನವನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಕೆ ಮಾಡುತ್ತಿಲ್ಲ. ಅದರಲ್ಲಿ ಪಾರದರ್ಶಕತೆ ಇಲ್ಲ. ಈ ಯೋಜನೆ ಹೆಸರಲ್ಲಿ ಕಳ್ಳಬಿಲ್ಲುಗಳನ್ನು ಮಾಡಿಕೊಂಡು ಲೂಟಿ ಮಾಡಲಾಗಿದೆ. ಇದು ಶುರು ಆದಾಗಿನಿಂದ ಆಗಿರುವ ಲೋಪಗಳನ್ನು ಸರಿಪಡಿಸಿ ಹೊಸ ಯೋಜನೆ ರೂಪಿಸಲಾಗಿದೆ. ಮನರೇಗಾದಲ್ಲಿ ಇದ್ದ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ವಿವರಿಸಿದರು.
ಗಾಂಧೀಜಿ ಅವರ ಹೆಸರನ್ನು ಕೇವಲ ಚುನಾವಣೆಗೆ ಮತ್ತು ಮತಕ್ಕಾಗಿ ಕಾಂಗ್ರೆಸ್ ಬಲಕ್ಕೆ ಮಾಡಿಕೊಂಡಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದೇ ಯೋಜನೆಯ ಬಜೆಟ್ ಅನ್ನು ಕಡಿತಗೊಳಿಸಿತ್ತು. ಕಾರ್ಮಿಕರ ವೇತನವನ್ನು ಸ್ಥಗಿತಗೊಳಿಸಿದ ಇತಿಹಾಸವೂ ಆ ಪಕ್ಷಕ್ಕೆ ಇದೆ. ಈಗ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಪ್ರತಿ ಪೈಸೆಯೂ ನೇರವಾಗಿ ಕಾರ್ಮಿಕರ ಖಾತೆಗೆ ಮುಟ್ಟುತ್ತಿದೆ. ಇದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ ಗೆ ಸಾಧ್ಯ ಆಗುತ್ತಿಲ್ಲ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಶಕ್ತಿ, ಅಧಿಕಾರ ನೀಡಲಾಗಿದೆ. ಗ್ರಾಮ ಪಂಚಾಯಿತಿಗಳೇ ತಮಗೆ ಬೇಕಾದ ಯೋಜನೆಗಳನ್ನು ರೂಪಿಸಲಿವೆ ಹಾಗೂ ಗ್ರಾಮ ಸಭೆಗಳು ಕೆಲಸದ ಆದ್ಯತೆ ಗುರುತಿಸಿ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಯನ್ನು ಕಡ್ಡಾಯಗೊಳಿಸುವ ಮೂಲಕ ಪಾರದರ್ಶಕತೆ ತರಲಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿಲ್ಲ ಎಂದು ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.
ಜಿ ರಾಮ್ ಜಿ ಯೋಜನೆಯನ್ನು 60:40% ಅನುಪಾತದಲ್ಲಿ ರೂಪಿಸಲಾಗಿದೆ. ರಾಜ್ಯ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಕ್ರಮವಾಗಿ ಹಣ ಪಡೆಯಲಾಗಿದೆ. ರಾಜ್ಯ ಸರ್ಕಾರಕ್ಕೂ ಜವಾಬ್ದಾರಿ ಇರಲಿ ಅಂತ 40% ರಾಜ್ಯದ ಪಾಲು ನಿಗದಿ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೂ ಜವಾಬ್ದಾರಿ ಕೊಡಲಾಗಿದೆ, ಎಲ್ಲವನ್ನೂ ಕಿತ್ತುಕೊಂಡಿಲ್ಲ. ಇದನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕು.
*ಪ್ರಹ್ಲಾದ್ ಜೋಶಿ ಹೇಳಿದ್ದು ಹಾಗಲ್ಲ, ಹೀಗೆ:*
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ನರೇಗಾ ಯೋಜನೆಯಲ್ಲಿ 11 ಲಕ್ಷ ಕೋಟಿ ಅವ್ಯವಹಾರ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರು ಸುಳ್ಳು ಹೇಳಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತೀರಾ ಎಂದು ಚಾಲೆಂಜ್ ಹಾಕಿದ್ದಾರೆ. ನಿಜಕ್ಕೆ ಜೋಶಿ ಅವರು ಹೇಳಿರುವುದು ನರೇಗಾದಲ್ಲಿನ ಸೋಶಿಯಲ್ ಆಡಿಟ್ ಯೂನಿಟ್‌ನಲ್ಲಿ ಆಗಿರುವ ಅಕ್ರಮದ ಬಗ್ಗೆ. ನರೇಗಾದಲ್ಲಿ ₹11 ಲಕ್ಷ ಕೋಟಿ ಅವ್ಯವಹಾರ ಆಗಿದೆ ಎಂದು ಜೋಷಿ ಹೇಳಿದ್ದಾರೆ ಎಂಬುದಾಗಿ ಆರೋಪ ಮಾಡಿದ್ದರು. ಡಿಕೆಶಿ ಆರೋಪ ತಪ್ಪು. 11 ಲಕ್ಷ ಕೋಟಿ ಹಣವಲ್ಲ, ಅಷ್ಟು ಕೆಲಸ ಆಗಿದೆ ಎಂದು ಜೋಷಿ ಅವರು ಹೇಳಿದ್ದಾರೆ ಅಷ್ಟೇ. ಇದರ ಬಗ್ಗೆ ಡಿಸಿಎಂ ಅವರು ಕನ್ಫ್ಯೂಸ್ ಮಾಡಿಕೊಂಡು ಹೀಗೆ ಹೇಳಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.
ಕೇಂದ್ರದಲ್ಲಿ 2005ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಳ್ಳೆಯ ಉದ್ದೇಶದಿಂದಲೇ ನರೇಗಾ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆ ತಪ್ಪು ಅಂತ ನಾನು ಹೇಳಲ್ಲ. ಬಡ ಕೂಲಿ ಕಾರ್ಮಿಕರಿಗೆ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ತಪ್ಪಿಸಲು ಈ ಯೋಜನೆ ಸಹಕಾರಿಯಾಗಿದೆ. ನಂತರದ ದಿನಗಳಲ್ಲಿ ಕಾಂಗ್ರೆಸ್ ಈ ಯೋಜನೆಯನ್ನು ಹಾಳುಗೆಡವಿತು. ಭಾರೀ ಭ್ರಷ್ಟಾಚಾರ ಕಂಡು ಬಂದಿದೆ. ಈ ತಪ್ಪುಗಳನ್ನು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಸರಿ ಮಾಡಲಿಲ್ಲ. ಈಗ ಮೋದಿ ಅವರು ಎಲ್ಲವನ್ನೂ ಸರಿಪಡಿಸಿ ಸುಧಾರಣೆ ತಂದಿದ್ದಾರೆ. ಇದನ್ನು ಕಾಂಗ್ರೆಸ್ ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.
*ಕೊಪ್ಪಳದ ಘಟನೆ ಉಲ್ಲೇಖಿಸಿದ ಕೇಂದ್ರ ಸಚಿವರು:*
ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕೊಪ್ಪಳದಲ್ಲಿ ನರೇಗಾ ಕೂಲಿ ಕೊಟ್ಟಿಲ್ಲ ಅಂತ ಲಾಠಿ ಚಾರ್ಜ್ ಮಾಡಿದ ಪ್ರಕರಣ ನಡೆದಿತ್ತು. ಕೂಲಿ ನೀಡುವುದಾಗಿ ಕಾರ್ಮಿಕರನ್ನು ಟ್ರಾಕ್ಟರ್ ನಲ್ಲಿ ಕರೆದುಕೊಂಡು ಹೋಗಿದ್ದರು. ದುರದೃಷ್ಟವಶಾತ್ ಆ ಟ್ರಾಕ್ಟರ್ ಅಪಘಾತಕ್ಕೆ ತುತ್ತಾಗಿ ಕೆಲ ಕಾರ್ಮಿಕರು ಸಾವನ್ನಪ್ಪಿದರು. ಅವರಿಗೆ ಪರಿಹಾರ ಕೊಡಬೇಕು ಅಂತ ನೋಡಿದಾಗ ಅವರ ಬಳಿ ಜಾಬ್ ಕಾರ್ಡೇ ಇರಲಿಲ್ಲ. 65-80 ವರ್ಷಗಳ ವಯೋಮಾನದವರಿಗೂ ಜಾಬ್ ಕಾರ್ಡ್ ಇದೆ ಅಂತ ತೋರಿಸಿದ್ದಾರೆ. ಇಷ್ಟು ಅಕ್ರಮಗಳು ಇದ್ದರೂ ಅದನ್ನು ಸರಿಪಡಿಸುವುದು ತಪ್ಪು ಎಂದರೆ ಹೇಗೆ? ಕಾಂಗ್ರೆಸ್ ಏನು ಸಂದೇಶ ಕೊಡಲು ಹೊರಟಿದೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಅದಕ್ಕೆ ನಾನು ಹೇಳಿದ್ದು. ಜಿ ರಾಮ್ ಜಿ ಯೋಜನೆ ಬಗ್ಗೆ ಬಹಿರಂಗ ಚರ್ಚೆ ಮಾಡೋಣ ಎಂದು. ನಾವೇನು ತಪ್ಪಿಸಿಕೊಂಡು ಹೋಗೋದಿಲ್ಲ. ಗ್ರಾಮ ಪಂಚಾಯತಿಗೆ ಅನ್ಯಾಯ ಆಗಿದೆ ಎಂದು ಹೇಳುತ್ತಿದ್ದೀರಿ. ನಿಮ್ಮ ಯೋಗ್ಯತೆಗೆ ಚುನಾವಣೆ ಮುಂದಕ್ಕೆ ತಳ್ಳಿಕೊಂಡು ಹೋಗ್ತಿದ್ದೀರಿ. ನಿಮಗೆ ನಾಚಿಕೆ ಆಗಬೇಕು. ರಾಜ್ಯದಲ್ಲಿರುವ ಉತ್ತಮ ವಾತಾವರಣ ನಾಶ ಮಾಡಲು ಹೊರಟಿದ್ದೀರಿ. ಮಾತೆತ್ತಿದರೆ ಅಷ್ಟು ಕೋಟಿ ತೆರಿಗೆ ಅಂತ ಬಾಯಿ ಬಡ್ಕೋತೀರಿ. ನಾನು ಅಧಿಕಾರದಲ್ಲಿ ಇದ್ದಾಗ ಕೇಂದ್ರದಿಂದ 800 ಕೋಟಿ ನರೇಗಾ ಕೂಲಿ ಹಣ ಬರುವುದು ತಡವಾಯಿತು. ನಾನೇ ಮೊದಲು ರಾಜ್ಯದ ಖಜಾನೆಯಿಂದ ಕೂಲಿಯನ್ನು ಕೊಟ್ಟು ನಂತರ ಕೇಂದ್ರದಿಂದ ಪಡೆದುಕೊಳ್ಳಲಾಯಿತು. ಈಗಿನ ಕಂದಾಯ ಸಚಿವರೇ ನನ್ನ ಸಂಪುಟದಲ್ಲಿ ಗ್ರಾಮೀಣ ಮತ್ತು.ಪಂಚಾಯತ್ ರಾಜ್ ಖಾತ್ರಿ ಮಂತ್ರಿ ಆಗಿದ್ದರು. ಕೇಂದ್ರದ ಜತೆ ಹೇಗೆ ನಡೆದುಕೊಳ್ಳಬೇಕು ಅನ್ನುವ ಸಾಮಾನ್ಯ ಜ್ಞಾನ ಈ ಸರ್ಕಾರಕ್ಕೆ ಇಲ್ಲ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ರಾಮರಾಜ್ಯ ಸ್ಥಾಪನೆ ಮಾಡಲು ನಾವು ರಾಮನ ಹೆಸರು ಬಳಸಿದ್ದೇವೆ. ರಾಜ್ಯ ಸರ್ಕಾರವೂ ಜವಾಬ್ದಾರಿ ವಹಿಸಿಕೊಳ್ಳಬೇಕು. ಈ ಯೋಜನೆಗೆ 40% ಅನುದಾನ ಕೊಡಲೇಬೇಕು. ಸಿದ್ದರಾಮಯ್ಯ ರಾಜ್ಯದಲ್ಲಿ ಇದರ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವರು ಹೇಳಿದರು.
ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಅಶ್ವತ್ಥನಾರಾಯಣ, ಚೌಡರೆಡ್ಡಿ ತೂಪಲ್ಲಿ ಮುಂತಾದವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
*ಸಿದ್ದರಾಮಯ್ಯ ಒಬ್ಬ ಲೀಸ್ ಬೇಸ್ಡ್ ಮುಖ್ಯಮಂತ್ರಿ*
ಸಿದ್ದರಾಮಯ್ಯ ಒಬ್ಬ ಲೀಸ್ ಬೇಸ್ಡ್ ಮುಖ್ಯಮಂತ್ರಿ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರು ಅಧಿಕಾರವಧಿಯಲ್ಲಿ ದೇವರಾಜ ಅರಸು ಅವರ ದಾಖಲೆ ಮುರಿದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
ದೇವರಾಜ ಅರಸು ದಾಖಲೆ ಮುರಿದೆ ಅಂತಾ ಹೇಳ್ತಿದ್ದಾರಲ್ಲಾ. ಹಿಂದೆ ಇಂದಿರಾಗಾಂಧಿ ವಿರುದ್ಧ ಅರಸು ಸೆಡ್ಡು ಹೊಡೆದು ನಿಂತಿದ್ದರು. ನಿರಂತರವಾಗಿ ಅವರು ಅಧಿಕಾರ ನಡೆಸಿದ್ದರು. ಸಿದ್ದರಾಮಯ್ಯ ಅವರು ಈಗ ರಾಹುಲ್ ಗಾಂಧಿ ಯಾವಾಗ ಹೋಗು ಅಂತಾರೆ ಅಂತಾ ಕಾಯುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.












