ಇತ್ತೀಚಿನ ಸುದ್ದಿ
ವಿಬಿಜಿ ರಾಮ್ ಜಿ ಕಾಯ್ದೆ ಬಗ್ಗೆ ಕಾಂಗ್ರೆಸ್ ತಪ್ಪು ಸಂದೇಶ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪ
01/03/2026, 14:56
ಹುಬ್ಬಳ್ಳಿ(reporterkarnataka.com): ‘ವಿಬಿಜಿ ರಾಮ್ ಜಿ ಕಾಯ್ದೆ’ ಬಗ್ಗೆ ದೇಶದ ಜನಕ್ಕೆ ಕಾಂಗ್ರೆಸ್ ತಪ್ಪು ಸಂದೇಶ ಕೊಡುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಹುಬ್ಬಳ್ಳಿಯ ಅರವಿಂದ ನಗರದಲ್ಲಿರವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವಿಬಿಜಿ ರಾಮ್ ಜಿ’ ಕುರಿತು ಮಾತನಾಡಿದರು.

ಈ ಹಿಂದೆ ಮನರೇಗಾದಲ್ಲಿ ಅನುದಾನ ಸೋರಿಕೆ ದೊಡ್ಡ ಪ್ರಮಾಣದಲ್ಲಿತ್ತು. ಭ್ರಷ್ಟಾಚಾರ ವ್ಯಾಪಕವಾಗಿತ್ತು. ಅಲ್ಲದೆ, ನಕಲಿ ಜಾಬ್ ಕಾರ್ಡ್ಗಳನ್ನು ಸಹ ಸೃಷ್ಟಿಸಲಾಗ್ತಿತ್ತು. ಇದೀಗ ಇದೆಲ್ಲದಕ್ಕೂ ಬ್ರೇಕ್ ಬೀಳಲಿದೆ. ಆ ಕಾರಣಕ್ಕೆ ಕಾಂಗ್ರೆಸ್ ತಗಾದೆ ತೆಗೆಯುತ್ತಿದೆ ಎಂದು ಆರೋಪಿಸಿದರು.
ಎನ್ ಡಿ ಎ ಸರ್ಕಾರ ಜಾರಿ ತಂದ ವಿಬಿ-ಜಿ ರಾಮ್ ಜಿ ಯೋಜನೆ ಮೂಲಕ ಗ್ರಾಮೀಣ ಭಾಗದ ಜನರಿಗೆ 125 ದಿನಗಳ ಉದ್ಯೋಗ ಖಾತರಿ ದೊರೆಯಲಿದೆ. AI-ಚಾಲಿತ ಮೇಲ್ವಿಚಾರಣೆ, ಬಯೋಮೆಟ್ರಿಕ್ ಹಾಜರಾತಿ ಮತ್ತು ಡಿಜಿಟಲ್ ಲೆಕ್ಕಪರಿಶೋಧನೆಗಳೊಂದಿಗೆ ಈಗ ಸಂಪೂರ್ಣ ಪ್ರಕ್ರಿಯೆ ಪಾರದರ್ಶಕವಾಗಲಿದೆ ಎಂದು ಹೇಳಿದರು.
ವಿಬಿ-ಜಿ ರಾಮ್ ಜಿ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಲಿದೆ. ಅಲ್ಲದೆ, ಗ್ರಾಮೀಣ ಭಾರತದ ಆರ್ಥಿಕತೆಗೆ ಹೊಸ ಶಕ್ತಿ ನೀಡಲಿದೆ ಮತ್ತು ವಿಕಸಿತ ಭಾರತ ನಿರ್ಮಾಣಕ್ಕೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣ ಬಾಂಡಗೆ, ಪರಿಷತ್ ಸದಸ್ಯ ಎಸ್.ವಿ.ಸಂಕನೂರು, ಕೇಶವ ಪ್ರಸಾದ, ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ, ಧಾರವಾಡ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಬಸವರಾಜ್ ಕುಂದಗೋಳಮಠ, ರವಿ ದಂಡಿನ, ಈರಣ್ಣ ಜಡಿ, ಕಲಘಟಗಿ ಮಂಡಳ ಅಧ್ಯಕ್ಷ ಯಲ್ಲಾರಿ ಶಿಂಧೆ, ಅಳ್ನಾವರ ಮಂಡಳ ಅಧ್ಯಕ್ಷ ಯಲ್ಲಪ್ಪ ಹುಲಿಯಪ್ಪನವರ, ಶಶಿ ನಿಂಬಣ್ಣವರ, ಕಲ್ಮೇಶ ಬೇಲೂರು ಸೇರಿದಂತೆ ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು, ಗಣ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.












