ಇತ್ತೀಚಿನ ಸುದ್ದಿ
ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳನ್ನೆಲ್ಲ ಈಡೇರಿಸಿದೆ: ಮಾಜಿ ಸಚಿವ ರಮಾನಾಥ ರೈ
22/01/2023, 00:10

ಮಂಗಳೂರು(reporterkarnataka.com): ಕಾಂಗ್ರೆಸ್ ಯಾವೆಲ್ಲ ಭರವಸೆಗಳನ್ನು ನೀಡಿದೆಯೋ ಅದನ್ನೆಲ್ಲ ಅನುಷ್ಠಾನ ಮಾಡುವ ಮೂಲಕ ಬಡ ಜನರ ಪರವಾದ ಪಕ್ಷ ಎಂಬುವುದನ್ನು ಮಾಡಿ ತೋರಿಸಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವರಾಜು ಅರಸು ಅವರಿಂದ ಹಿಡಿದು ಸಿದ್ದರಾಮಯ್ಯ ಅವರ ಅವಧಿಯ ತನಕ ಪಕ್ಷ ಯಾವೆಲ್ಲ ಭರವಸೆಗಳನ್ನು ನೀಡಿದೆಯೋ ಅದನ್ನೆಲ್ಲ ಅನುಷ್ಠಾನಗೊಳಿಸುತ್ತಾ ಬಂದಿದೆ. ಕಳದ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ೧೬೫ ಭರವಸೆಗಳನ್ನು ನೀಡಿದ್ದು, ಅದರಲ್ಲಿ ೧೫೮ ಭರವಸೆಗಳನ್ನು ಈಡೇರಿಸಿದ್ದಾರೆ. ಆದರೆ ಬಿಜೆಪಿಯವರು ವರ್ಷಕ್ಕೆ ೨ ಕೋಟಿ ಉದ್ಯೋಗ, ಜನ್‌ಧನ್ ಭಾಗ್ಯ, ಸ್ವಿಝ್‌ಬ್ಯಾಂಕ್‌ನಿಂದ ಕಪ್ಪು ಹಣ ತರಿಸುವುದಾಗಿ ತಿಳಿಸಿದ್ದು, ಇಲ್ಲಿಯ ತನಕ ಭರವಸೆಯಾಗಿಯೇ ಉಳಿದಿವೆ. ಕಪ್ಪು ಹಣ ತರಿಸುವ ಬದಲು, ಅದಕ್ಕಿಂತ ಹೆಚ್ಚು ಕಪ್ಪು ಹಣ ಈಗ ಬಿಜೆಪಿಯವರಲ್ಲಿದೆ ಎಂದರು.
ಸಿದ್ದರಾಮಯ್ಯ ಅವರು ತಿಂಗಳಿಗೆ ೭ ಕೆ.ಜಿ. ಅಕ್ಕಿಯನ್ನು ನೀಡುತ್ತಿದ್ದರು ಆದರೆ ಬಿಜೆಪಿಯವರು ಅದನ್ನು ೫ ಕೆ.ಜಿ.ಗೆ ಇಳಿಸಿದ್ದಾರೆ. ಬಡವರಿಗಾಗಿ ಇಂದಿರಾ ಕ್ಯಾಂಟಿನ್ ತೆರೆಯಲಾಯಿತು. ಈಗ ಬಿಜೆಪಿ ಸರ್ಕಾರ ಬಂದ ನಂತರ ಮುಚ್ಚುವ ಸ್ಥಿತಿಗೆ ಬಂದುಮುಟ್ಟಿದೆ ಎಂದು ಆರೋಪಿಸಿದರು.
೨೦೦ ಯುನಿಟ್ ವಿದ್ಯುತ್ ನೀಡುವುದಾಗಿ ಈಗಾಗಲೇ ಕಾಂಗ್ರೆಸ್ ಸರ್ಕಾರ ಭರವಸೆಯನ್ನು ನೀಡಿದ್ದು, ಅದನ್ನು ಸಹಿಸಲಾಗದೇ ಭಯದಿಂದ ಬಿಜೆಪಿಯವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ರೈತರಿಗೆ ಅಗತ್ಯವಾಗುವ ನಿಟ್ಟಿನಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದವರು ಯಾರು?, ಮಕ್ಕಳಿಗೆ ಬಿಸಿ ಊಟ ನೀಡಿದವರು ಯಾರು?, ಹೈನುಗಾರಿಕೆ ಪ್ರೋತ್ಸಾಹಕ್ಕಾಗಿ ಲೀಟರ್‌ಗೆ ೫ ರೂ. ಹೆಚ್ಚು ಬೆಂಬಲ ಬೆಲೆ ನೀಡಿದವರು ಯಾರು?, ಬಡವರಿಗೆ ನಿವೇಶನದೊಂದಿಗೆ ಮನೆ ನಿರ್ಮಾಣ ಮಾಡಿಕೊಟ್ಟವರಾರು?, ಮಾಶಾಸನ ನೀಡಿದವರಾರು? ವಿಚ್ಛೇಧನ ಪಡೆದವರಿಗೆ ತಿಂಗಳಿಗೆ ೫೦೦ ರೂ.ನಂತೆ ಮಾನಶ್ವಿನಿ ಕಾರ್ಯಕ್ರಮ ತಂದವರಾರು?, ಲೈಂಗಿಕ ಅಲ್ಪಸಂಖ್ಯಾತರಿಗೆ ಮೈತ್ರಿ ಯೋಜನೆಯಡಿ ಪ್ರತಿ ತಿಂಗಳು ೫೦೦ ರೂ, ನೀಡಿದವರಾರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ರೈತರ ೭೧ ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಿದೆ. ಈಗ ಬಿಜೆಪಿ ಸರ್ಕಾರಕ್ಕೆ ಅದು ಕಷ್ಟವಾಗಿದೆ. ಆದರೆ ಶ್ರೀಮಂತರ ಸಾಲವನ್ನು ಮನ್ನಾ ಮಾಡುವಾಗ ಬಿಜೆಪಿ ಸರ್ಕಾರಕ್ಕೆ ಕಷ್ಟವಾಗುವುದಿಲ್ಲ. ನೀರಾವ್ ಮೋದಿ, ವಿಜಯ್ ಮಲ್ಯ, ಚಾಕ್ಸಿ, ದಾವುದ್ ಇಬ್ರಾಹಿಂ ಅವರನ್ನು ಭಾರತಕ್ಕೆ ಕರೆತರುವುದಾಗಿ ೮ ವರ್ಷ ಕಳೆದರೂ ಇಲ್ಲಿಯ ತನಕ ಕರೆತರಲು ಆಗಿಲ್ಲ ಎಂದು ರೈ ಟೀಕಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅವರ ಕಾರ್ಯಕರ್ತರಿಗೆ ಚರಂಡಿ, ಮೋರಿ ಕೆಲಸ ಮಾಡಲು ಹೋಗಬೇಡಿ, ಲವ್ ಜಿಹಾದ್ ವಿರುದ್ಧ ಕಾರ್ಯಚರಿಸಿ ಎಂಬ ಹೇಳಿಕೆಗೆ ತಿರುಗೇಟು ನೀಡಿ, ನಳಿನ್ ಕುಮಾರ್ ಕಟೀಲ್‌ರ ರಾಜಕೀಯ ದಿವಾಳಿತನ ಕಾಣುತ್ತಿದೆ. ಅವರಿಗೆ ಜನರ ಅಭಿವೃದ್ಧಿಯ ಬಗ್ಗೆ ಯಾವುದೇ ಚಿಂತೆಯಿಲ್ಲ. ನಳಿನ್ ಕುಮಾರ್ ಕಟೀಲ್ ಅವರನ್ನು ನಳಿನ್ ಕುಮಾರ್ ಎಂದು ಕರೆಯಿರಿ ಅವರು ಕಟೀಲಿನವರಲ್ಲ. ಅವರು ಎಲ್ಲಾ ಕಡೆಗಳಲ್ಲಿ ಕಟೀಲ್ ಎಂದು ಬಳಸಿಕೊಂಡು ಆ ಪವಿತ್ರ ಕ್ಷೇತ್ರದ ಹೆಸರನ್ನು ಕೆಡಿಸುತ್ತಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದು, ಅವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿ ಧರ್ಪ ಮೆರೆದಿದ್ದಾರೆ. ಇದರೊಂದಿಗೆ ಕತ್ತಲಲ್ಲಿ ರಸ್ತೆ ಇಲ್ಲದಲ್ಲಿಗೆ ಕರೆದುಕೊಂಡುಹೋಗಿ ಬಿಟ್ಟಿದ್ದು, ಹೊಟ್ಟೆಗೆ ಊಟವೂ ಇಲ್ಲದಂತೆ ಮಾಡಿದ್ದಾರೆ ಇದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತಾದೆ ಎಂದು ರಮಾನಾಥ ರೈ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಪ್ರಮುಖರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ್ ಹೆಗ್ಡೆ, ನವಿನ್ ಡಿ’ಸೋಜಾ, ಶಾಲೆಟ್ ಪಿಂಟೋ, ಲುಕ್ಮನ್ ಬಂಟ್ವಾಳ್, ಶಾಹುಲ್ ಹಮೀದ್, ಅಪ್ಪಿ, ಗಣೇಶ್ ಪುಜಾರಿ, ಹರಿನಾಥ್, ಉಮೇಶ್ ದಂಡಕೇರಿ, ಪುಷ್ಪರಾಜ್ ಮತ್ತಿತರರು ಇದ್ದರು.