ಇತ್ತೀಚಿನ ಸುದ್ದಿ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ 7ರಂದು ಮುಲ್ಕಿಗೆ: ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿ
05/05/2023, 23:41
ಮಂಗಳೂರು(reporterkarnataka.com): ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಪ್ರಚಾರಾರ್ಥವಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಮೇ 7ರಂದು ಮಧ್ಯಾಹ್ನ 1 ಗಂಟೆಗೆ ಮೂಲ್ಕಿ ಪ್ರದೇಶಕ್ಕೆ ಆಗಮಿಸಲಿದ್ದು, 50 ಸಾವಿರಕ್ಕಿಂತ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.
ಈ ಸಂದರ್ಭದಲ್ಲಿ ಮಂಗಳೂರು ಉತ್ತರ, ದಕ್ಷಿಣ, ಮಂಗಳೂರು ಕೇಂದ್ರ ಹಾಗೂ ಕಾಪು ಕ್ಷೇತ್ರದಿಂದ ಜನ ಆಗಮಿಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ಗೆ ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ನಿರ್ಮಿಸುವ ಸಾಮರ್ಥ್ಯವಿದ್ದು, ಈ ರಾಜ್ಯಕ್ಕೆ ಡಬಲ್ ಇಂಜಿನ್ ಸರ್ಕಾರದ ಅವಶ್ಯಕತೆ ಇಲ್ಲ ಎಂದು ಡಾ.ಭಂಡಾರಿ ನುಡಿದರು.

ಡಬಲ್ ಇಂಜಿನ್ ಬಳಸುವುದು ಒಂದು ಕೆಟ್ಟುಹೋದಲ್ಲಿ ಮತ್ತೊಂದನ್ನು ಬಳಸಲು ಇಲ್ಲಿ ಅದರ ಅವಶ್ಯಕತೆ ಇಲ್ಲ. ನಾವು 2013ರಿಂದ 2018ರ ರವರೆಗೆ ಜಾರಿಗೊಳಿಸಿದ ಕಾರ್ಯಕ್ರಮಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ನಂತರ ಬಿಜೆಪಿ ಸರ್ಕಾರ ಬಂದ ನಂತರ ನಮ್ಮ ಅನೇಕ ಕಾರ್ಯಕ್ರಮಗಳನ್ನು ನಿಲ್ಲಿಸಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ನಿಲ್ಲಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ದೇಶಕ್ಕೆ ಕೀರ್ತಿ ತಂದುಕೊಟ್ಟ ಕ್ರೀಡಾಳುಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು, ಅವರಿಗೆ ಗೌರವವಿಲ್ಲದಂತಾಗಿದೆ. ಅವರು ಪದಕ ಪಡೆದುಕೊಂಡು ಬಂದಾಗ ಔತಣಕೂಟಕ್ಕೆ ಹೋಗುವ ಮೋದಿ ಈಗ ಪ್ರತಿಭಟಿಸುವ ಸಂದರ್ಭದಲ್ಲಿ ಯಾಕೆ ಮಾತುಕತೆಗೆ ಹೋಗುತ್ತಿಲ್ಲ ಎಂದು ಮಂಜುನಾಥ್ ಭಂಡಾರಿ ಪ್ರಶ್ನಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಎಐಸಿಸಿ ವಕ್ತಾರ ಅಜಯ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ಪದ್ಮರಾಜ್ ,ಸತ್ರ ಉಪಸ್ಥಿತರಿದ್ದರು.














