ಇತ್ತೀಚಿನ ಸುದ್ದಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಳೆ ಉಡುಪಿಗೆ: ಉಚ್ಚಿಲ, ಕಟಪಾಡಿಯಲ್ಲಿ ರೋಡ್ ಶೋ; ಮೀನುಗಾರರ ಜತೆ ಸಂವಾದ
26/04/2023, 14:48
ಉಡುಪಿ(reporterkarnataka.com): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಏಪ್ರಿಲ್ 27(ನಾಳೆ)ರಂದು ಉಡುಪಿಗೆ ಆಗಮಿಸಲಿದ್ದು, ಕಾಪು ಕ್ಷೇತ್ರದ ಉಚ್ಚಿಲದಲ್ಲಿ ಮೀನುಗಾರರ ಜತೆ ಸಂವಾದ ಹಾಗೂ ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಉಚ್ಛಿಲ ಮಹಾಲಕ್ಷ್ಮಿ ದೇವಸ್ಥಾನದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ನಡೆಯಲಿರುವ ಮೀನುಗಾರರ ಜತೆ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಅವರು ಬುಧವಾರ ಕಾಪು ರಾಜೀವ ಭವನದಲ್ಲಿ ನಡೆದ ಸುದ್ಧಿ ಗೋಷ್ಠಿಯಲ್ಲಿ ತಿಳಿಸಿದರು.
ರಾಹುಲ್ ಗಾಂಧಿ ಅವರು ಮಧ್ಯಾಹ್ನ 3.40ಕ್ಕೆ ಕಾಪು ಕ್ಷೇತ್ರಕ್ಕೆ ಆಗಮಿಸುವರು. ರಾಹುಲ್ ಗಾಂಧಿಯವರು ಕಟಪಾಡಿಯಲ್ಲಿ ಮತ್ತು ಉಚ್ಛಿಲದಲ್ಲಿ ರೋಡ್ ಶೋ ನಡೆಸುವರು.
ನಂತರ ಉಚ್ಛಿಲ ಮಹಾಲಕ್ಷ್ಮಿ ದೇವಸ್ಥಾನದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ನಡೆಯುವ ಮೀನುಗಾರರ ಜತೆ ಸಂವಾದದಲ್ಲಿ ಭಾಗವಹಿಸಿ ಮೀನುಗಾರರ ಸಮುದಾಯದ ಕಷ್ಟ ನಷ್ಟಗಳ ಬಗ್ಗೆ ಆಲಿಸಲಿದ್ದಾರೆ ಎಂದು ಸೊರಕೆ ಹೇಳಿದರು.
ಬಿಜೆಪಿ ಸರಕಾರ ಮೀನುಗಾರರ ಸಮುದಾಯದ ವೃತ್ತಿಗೆ ಅನುಗುಣವಾಗಿ ಯಾವುದೇ ರೀತಿಯ ಸ್ಪಂದಿಸೋ ಕೆಲಸ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಮೀನುಗಾರರಿಗೆ ಸೀಮೆಯೆಣ್ಣೆ ಸಬ್ಸಿಡಿ ಕೊಡುವ ಕೆಲಸ ಮಾಡಿತ್ತು. ಕಳೆದ 6 ತಿಂಗಳಿಂದ ಸೀಮಯೆಣ್ಣೆ ಸಬ್ಸಿಡಿ ಸಿಗದೇ ಮೀನುಗಾರರು ಕಂಗಲಾಗಿದ್ದಾರೆ. ಕೇವಲ ವೋಟ್ ಬ್ಯಾಂಕ್ ಆಗಿ ಸುಳ್ಳುಗಳ ಸರಮಾಲೆಯನ್ನು ಸೃಷ್ಟಿಸಿ ಮೀನುಗಾರ ಸಮುದಾಯವನ್ನು ಹತ್ತಿಕೋ ಕೆಲಸವನ್ನು ಬಿಜೆಪಿ ಸರ್ಕಾರ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಅವರು ಆರೋಪಿಸಿದರು.
ಸಂವಾದದಲ್ಲಿ ಬೈಂದೂರು, ಕುಂದಾಪುರ, ಉಡುಪಿ, ಮಂಗಳೂರಿನಿಂದ ಸುಮಾರು 2 ಸಾವಿರ ಮೀನುಗಾರರು ಭಾಗವಹಿಸಲಿದ್ದಾರೆ. ರಾಜ್ಯದ ಮೀನುಗಾರರ ಜತೆ ಸಂವಾದ ನಡೆಸೋ ಕಾರ್ಯಕ್ರಮ ಕಾಪು ಕ್ಷೇತ್ರದಲ್ಲಿ ನಡೀತಿದೆ ಎಂದು ಸೊರಕೆ ಹೇಳಿದರು.
ಜಿ. ಶಂಕರ್ ಮೊಗವೀರ ಅವರು ಪ್ರಶ್ನಾತೀತ ನಾಯಕ. ಎಲ್ಲ ಸಮುದಾಯದ ನಾಯಕರನ್ನು ಕರಾವಳಿ ಉದ್ದಗಲದಲ್ಲಿ ಸಂಘಟಿಸಿ ಎಲ್ಲ ಸಮುದಾಯದ ಸಮಾಜ ಕಷ್ಟಕ್ಕೆ ಸ್ಪಂದಿಸಿದವರು. ಜಿ. ಶಂಕರ್ ಮೇಲೆ ಚುನಾವಣಾ ಸಮಯದಲ್ಲಿ ಬಿಜೆಪಿ ಪ್ರೇರಿತ ಐಟಿ ದಾಳಿ ಖಂಡನೀಯ.
ಜಿ. ಶಂಕರ್ ಉದ್ದೇಶ ಪೂರ್ವಕವಾಗಿ ಈ ಐಟಿ ದಾಳಿ ನಡೆಸಲಾಗಿದ್ದು ಇಡೀ ಸಮಾಜಕ್ಕೆ ಮಾಡಿದ ಅನ್ಯಾಯ ಎಂದು ಸೊರಕೆ ನುಡಿದರು.
ಕಾಂಗ್ರೆಸ್ ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಜೆ ಶೆಟ್ಟಿ, ಟಿ. ಪ್ರತಾಪನ್, ದೇವಿಪ್ರಸಾದ್ ಶೆಟ್ಟಿ, ರಾಜಶೇಖರ ಕೋಟ್ಯಾನ್, ವಿಲ್ಸನ್ ರೋಡ್ರಿಗಸ್, ಮಂಜುನಾಥ ಬಿ ಸೊಣೆಗಾರ್, ಹರಿಶ್ ಕಿಣಿ, ರಮೀಜ್ ಹುಸೇನ್, ಅಬ್ದುಲ್ ಗಫೂರ್, ಜೀತೇಂದ್ರ ಫುಟಾರ್ಡೋ, ಶಾಂತಲಾ, ಶರ್ಪುದ್ದೀನ್ ಶೇಖ್, ವಿಶ್ವಾಸ್ ಅಮೀನ್, ದಿನೇಶ್ ಕೋಟ್ಯಾನ್, ಅಮೀರ್ ಉಪಸ್ಥಿತರಿದ್ದರು.