ಇತ್ತೀಚಿನ ಸುದ್ದಿ
ಅಂಬೇಡ್ಕರ್ ಗೆ ಜೀವಮಾನವಿಡಿ ಕಾಂಗ್ರೆಸ್ ಅಪಮಾನ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ
25/03/2025, 17:58

* ಸಂವಿಧಾನ ಬದಲಿಸುವ ಹೆಳಿಕೆಗೆ ಡಿಕೆ ಶಿವಕುಮಾರ್ ಮೊದಲು ಕ್ಷಮೆಯಾಚಿಸಲು ಆಗ್ರಹ*
ನವದೆಹಲಿ(reporterkarnataka.com): ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ಜೀವಮಾನವಿಡಿ ಅಪಮಾನಿಸುತ್ತಲೇ ಬಂದಿದೆ. ಈಗಲೂ ಅದನ್ನೇ ಮುಂದುವರಿಸಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೇಶದ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.
ದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಅನೇಕ ಬಾರಿ ಸಂವಿಧಾನಕ್ಕೆ ಅಪಚಾರ ಮಾಡುತ್ತಲೇ ಇದೆ. ಇದು ಅವರ ಹಿಡನ್ ಅಜೆಂಡಾ ಆಗಿದೆ. ಅಂಬೇಡ್ಕರ್ ಜೀವಿತಾವಧಿಯಲ್ಲಿ ಪ್ರತಿ ಹಂತದಲ್ಲೂ ಅವರನ್ನು ಅವಮಾನಿಸಿದೆ. ಚುನಾವಣೆಯಲ್ಲಿ ಷಡ್ಯಂತ್ರ ನಡೆಸಿ ಸೋಲಿಸಿತು. ಆರ್ಟಿಕಲ್ ೩೫೦ ದುರುಪಯೋಗ ಪಡಿಸಿಕೊಂಡಿತು ಎಂದು ಆರೋಪಿಸಿದರು.
ಹಲವು ಬಾರಿ ಸಂವಿಧಾನ ತಿದ್ದುಪಡಿ ಮಾಡಿದ ಕಾಂಗ್ರೆಸ್, ಈಗ ಮತ್ತೆ ಡಿ.ಕೆ. ಶಿವಕುಮಾರ್ ಮೂಲಕ ತನ್ನ ಗುಪ್ತ ಕಾರ್ಯಸೂಚಿಯನ್ನು ಬಹಿರಂಗಪಡಿಸಿದೆ. ಕಾಂಗ್ರೆಸ್ ಯಾವತ್ತೂ ಅಂಬೇಡ್ಕರ್ ಅವರನ್ನು ಗೌರವಿಸಿಲ್ಲ. ಬದಲಾಗಿ ಅಪಮಾನ ಮಾಡುತ್ತಲೇ ಬಂದಿದೆ ಎಂದು ಕಿಡಿ ಕಾರಿದ ಸಚಿವ ಜೋಶಿ, ೧೯೫೧ರ ಚುನಾವಣೆ ಮೊದಲು ಮತ್ತು ತುರ್ತು ಪರಿಸ್ಥಿತಿ ವೇಳೆ ಹೀಗೆ ಎಲ್ಲ ಸಂದರ್ಭದಲ್ಲೂ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಎಂದು ಹೇಳಿದರು.
ಈಗ ಕರ್ನಾಟಕದಲ್ಲಿ ಮುಸ್ಲಿಂರಿಗೆ ಶೇ.೪ರಷ್ಟು ಮೀಸಲಾತಿ ಕಲ್ಪಿಸಿರುವ ಕಾಂಗ್ರೆಸ್, ಮುಂದೊಂದು ದಿನ ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎಂದಿದೆ. ತನ್ನ ಮತ ಬ್ಯಾಂಕ್‌ಗಾಗಿ ಹಿಂದುಳಿದ ಸಮುದಾಯದವರಿಗೆ ತೀವ್ರ ಅನ್ಯಾಯ ಮಾಡುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ಡಿಕೆ ಶಿವಕುಮಾರ್ ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಪ್ರಲ್ಹಾದ ಜೋಶಿ ಆಗ್ರಹಿಸಿದರು.