ಇತ್ತೀಚಿನ ಸುದ್ದಿ
ಸಿಎಂ ತವರು ಕ್ಷೇತ್ರದ ಸರಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಿಂದ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಗ್ರಾಮಸ್ಥರ ಆಕ್ರೋಶ; ಕ್ರಮಕ್ಕೆ ಆಗ್ರಹ
04/01/2024, 17:38
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಭಾರ ಮುಖ್ಯ ಶಿಕ್ಷಕರಿಂದಲೇ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಕೂಡಲೇ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ನಂಜನಗೂಡು ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ದಾಸನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಭಾರ ಮುಖ್ಯ ಶಿಕ್ಷಕ ಪಿ. ಪ್ರಕಾಶ್ ಎಂಬಾತ ಶಾಲಾ ಮಕ್ಕಳಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದು, ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ. ಈ ಬಗ್ಗೆ ಮಕ್ಕಳು ಪೋಷಕರೊಂದಿಗೆ ಹೇಳಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಟಿ. ಶಿವಲಿಂಗಯ್ಯ ಶಾಲೆಗೆ ದಿಢೀರ್ ಭೇಟಿ ನೀಡಿ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ಪೋಷಕರ ಸಭೆಯನ್ನು ನಡೆಸಿ ಮಕ್ಕಳಿಂದ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಈ ಕೂಡಲೇ ಕಾಮುಕ ಶಿಕ್ಷಕನನ್ನು ಬಂಧಿಸಿ, ಪೋಕ್ಸೋ ಕಾಯ್ದೆ ಪ್ರಕರಣ ದಾಖಲು ಮಾಡಬೇಕು ಹಾಗೂ ಆತನನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಪೋಷಕರು ಒತ್ತಾಯ ಮಾಡಿದ್ದಾರೆ. ಶಿಕ್ಷಕನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಕವಲಂದೆ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ಪೋಷಕರು ತಿಳಿಸಿದ್ದಾರೆ.