6:53 AM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಲ್ಲಿ ಕಚೇರಿ, ಕುರ್ಚಿ ಬಿಟ್ಟರೆ ಮತ್ತೇನಿಲ್ಲ: ರೇಣುಕಾಚಾರ್ಯ ಲೇವಡಿ

15/01/2022, 13:17

ಬೆಂಗಳೂರು(reporterkarnataka.com): ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆ ಕೇವಲ ಹೋದ ಪುಟ್ಟ, ಬಂದ ಪುಟ್ಟ ಎಂಬಂತಿದ್ದು, ಒಂದು ಕಚೇರಿ, ಕುರ್ಚಿ ಬಿಟ್ಟರೆ ಈ ಹುದ್ದೆಯಲ್ಲಿ ಮತ್ತೇನೂ ಇಲ್ಲ’ ಎಂದು ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅತೃಪ್ತಿಯನ್ನು ಹೊರಹಾಕಿದ್ದಾರೆ.

ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜಕೀಯ ಕಾರ್ಯದರ್ಶಿ ಸ್ಥಾನ ಏನೂ ನನಗೆ ದೊಡ್ಡದಲ್ಲ. ಸುಮ್ಮನೆ ಮನೆ, ಒಂದು ಚೇಂಬರ್ ಕೊಟ್ಟಿದ್ದಾರೆ ಅಷ್ಟೇ. ಅದರಲ್ಲಿ ಬಹಳ ಕೆಲಸವೇನೂ ಇಲ್ಲ, ನಾನೂ ಏನೂ ಅದಕ್ಕೆ ಅಂಟಿಕೊಂಡಿಲ್ಲ. ನಾನೂ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕಿಂತಲೂ ಕ್ಷೇತ್ರದ ಶಾಸಕನಾಗಿಯೇ ಇರಲು ಬಯಸುತ್ತೇನೆ’ ಎಂದು ಅಸಮಾಧಾನ ಹೊರಹಾಕಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೊರತುಪಡಿಸಿದರೆ ಸಚಿವ ಸಂಪುಟದಲ್ಲಿನ ಬಹುತೇಕ ಸಚಿವರು ಬದಲಾಗಬೇಕು. ಅದೇ ಮುಖಗಳನ್ನು ನೋಡಿ ನೋಡಿ ಜನರಿಗೆ ಸಾಕಾಗಿದೆ. ಅಭಿವೃದ್ಧಿ ಕೆಲಸಗಳು ಆಗಬೇಕು. ಆ ದೃಷ್ಟಿಯಿಂದ ಸಚಿವ ಸಂಪುಟ ಪುನರ್ ರಚನೆ ಆಗಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದ್ದು, ಸಂಪುಟದಲ್ಲಿ ತಮಗೂ ಒಂದು ಸ್ಥಾನ ನೀಡಬೇಕು ಎಂದು ಪರೋಕ್ಷವಾಗಿ ಬೇಡಿಕೆಯನ್ನಿಟ್ಟರು.

ಸರಕಾರ ಅಸ್ಥಿರಕ್ಕೆ ಯತ್ನ: `ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಹಾಗೂ ಆಡಳಿತಾರೂಢ ಬಿಜೆಪಿಗೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ನಾಟಕೀಯವಾಗಿ ಪಾದಯಾತ್ರೆ ಮಾಡಿದ್ದರು. ಖುದ್ದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪಾದಯಾತ್ರೆ ಇಷ್ಟವಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಲ್ಲಿ ನಾಯಕರಾಗಿ ಹೊರ ಹೊಮ್ಮುತ್ತಾರೋ, ಸಿಎಂ ಅಭ್ಯರ್ಥಿಯನ್ನಾಗಿ ಅವರನ್ನು ಎಲ್ಲಿ ಘೋಷಣೆ ಮಾಡಿಬಿಡುತ್ತಾರೋ ಎಂಬ ಆತಂಕವಿತ್ತು’ ಎಂದು ರೇಣುಕಾಚಾರ್ಯ ದೂರಿದರು.

ಒಂದು ಕಡೆ ಸಿದ್ದರಾಮಯ್ಯರ ಬೆಂಬಲಿಗರು `ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ’ ಎಂದು ಘೋಷಣೆ ಕೂಗಿದರೆ, ಮತ್ತೊಂದು ಕಡೆ ಡಿಕೆಶಿ ಪಟಾಲಂ ಶಿವಕುಮಾರ್ ಅವರೇ ಮುಂದಿನ ಸಿಎಂ ಎಂದು ಘೋಷಣೆ ಕೂಗಿದರು. ಕಾಂಗ್ರೆಸ್‍ನವರಿಗೆ ಪಾದಯಾತ್ರೆ ಅಭ್ಯಾಸ ಇರಲಿಲ್ಲ. ಹೇಗಿದ್ದರೂ, ಬಂಧನ ಮಾಡುತ್ತಾರೆಂಬ ನಂಬಿಕೆಯಿಂದ ಪಾದಯಾತ್ರೆ ಆರಂಭಿಸಿದ್ದರು’ ಎಂದು ಅವರು ವಾಗ್ದಾಳಿ ನಡೆಸಿದರು.

`ಈ ಹಿಂದೆ ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪನವರು ಹೋರಾಟ ಮಾಡಿ, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಡಿ.ಕೆ.ಶಿವಕುಮಾರ್ ಹೊಸ ಟ್ರಾಕ್ ಪ್ಯಾಂಟ್, ಶೂ ಎಲ್ಲ ಖರೀದಿಸಿದ್ದರು. ರ್ಯಾಂಪ್ ವಾಕ್ ಮಾಡಿ ರಿಹರ್ಸಲ್ ಮಾಡುತ್ತಿದ್ದರು. ನಮ್ಮ ಹಳ್ಳಿ ಕಡೆ ತಾಲೀಮು ಮಾಡಿಸಿದ ಬಳಿಕ, ನಾಟಕವನ್ನು ಪರದೆ ಮೇಲೆ ತರುತ್ತಿದ್ದರು. ಹಾಗೆ ಡಿ.ಕೆ. ಶಿವಕುಮಾರ್ ಪಾದಯಾತ್ರೆ ರಿಹರ್ಸಲ್ ಮಾಡಿದ್ದರು’ ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದರು.

`ಪಾದಯಾತ್ರೆ ವೇಳೆ ಹೋದ ಕಡೆಯಲ್ಲೆಲ್ಲ ಗಂಡಸ್ತನ ಬಗ್ಗೆ ಮಾತನಾಡುತ್ತಿದ್ದರು. ಆದರೆ, ತಾವು ಅಧಿಕಾರದಲ್ಲಿದ್ದಾಗ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಗಂಡಸ್ತನ ತೋರಿಸಲಿಲ್ಲ. ಹೀಗಾಗಿರುವಾಗ ಆ ಮಾತು ನಿಮಗೆ ಶೋಭೆ ತರುತ್ತದೆಯೇ? ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದೇನೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನನ್ನ ಹೆಸರನ್ನು ಜಪಿಸಿದರು. ಆದರೆ, ನಾನು ಅಂದೇ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದೇನೆ. ಇದೀಗ ನನ್ನ ವಿರುದ್ಧ ಮೊಕದ್ದಮೆ ದಾಖಲಿಸಲು ಒತ್ತಾಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಈಗಾಗಲೇ ನಾನು ಕ್ಷಮೆ ಕೋರಿದ್ದೇನೆ. ಅದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ನಾಡಿನ ಜನತೆ ಮುಂದೆ ಬೇಷರತ್ ಕ್ಷಮೆ ಯಾಚಿಸಬೇಕು. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಶಕ್ತಿ ತೋರಿದ್ದರೆ, ಇಂದು ನಾಟಕೀಯ ಪ್ರದರ್ಶನ ಬೇಕಿರಲಿಲ್ಲ. ಕಾಂಗ್ರೆಸ್ ಏನೇ ಯಾತ್ರೆ ಮಾಡಿದರೂ, ಮುಂಬರಲಿರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್‍ಗೆ ಪ್ರತಿಪಕ್ಷ ಸ್ಥಾನವೇ ಗಟ್ಟಿ ಎಂದು ರೇಣುಕಾಚಾರ್ಯ ತಿರುಗೇಟು ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು