ಇತ್ತೀಚಿನ ಸುದ್ದಿ
CM PROMISE | ಪತ್ರಿಕೋದ್ಯಮ -ಪತ್ರಕರ್ತರ ಹಿತರಕ್ಷಣೆಗೆ ಬದ್ಧ: ಮುಖ್ಯಮಂತ್ರಿ ಸಿದ್ಧರಾಮಯ್ಯ
19/02/2025, 21:49

ಕೋಲಾರ(reporterkarnataka.com): ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪತ್ರಿಕೋದ್ಯಮ ಮತ್ತು ಪತ್ರಕರ್ತರ ಹಿತಾಸಕ್ತಿಯನ್ನು ಕಾಪಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಕಲ್ಯಾಣನಿಧಿಗೆ 25 ಲಕ್ಷರೂ ಅನುದಾನ ಬಿಡುಗಡೆ ಮಾಡಿರುವ ಮುಖ್ಯಮಂತ್ರಿಗಳನ್ನು ಬುಧವಾರ ಬೆಂಗಳೂರಿನ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಸಂಘದಿಂದ ಸನ್ಮಾನಿಸಿ ಧನ್ಯವಾದ ಸಲ್ಲಿಸಿದ ವೇಳೆ ಅವರು ಮಾತನಾಡಿದರು.
ತಮ್ಮ ಸಾರ್ವಜನಿಕ ಜೀವನದುದ್ದಕ್ಕೂ ಪತ್ರಿಕೋದ್ಯಮ ಮತ್ತು ಪತ್ರಕರ್ತರ ಸ್ವಾತಂತ್ರ್ಯ ರಕ್ಷಣೆಗೆ ಆದ್ಯತೆ ನೀಡಿರುವುದಾಗಿ ತಿಳಿಸಿದ ಸಿದ್ಧರಾಮಯ್ಯ ಅವರು, ಸರ್ಕಾರ ಬಿಡುಗಡೆ ಮಾಡಿರುವ 25 ಲಕ್ಷ ರೂ. ಅನುದಾನವನ್ನು ಪತ್ರಕರ್ತರ ಹಿತಾಸಕ್ತಿಗೆ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ಮಾಡಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 256 ಮಂದಿ ಸದಸ್ಯರ ಹಿತರಕ್ಷಣೆ ಮತ್ತು ಆಪತ್ಕಾಲೀನ ಸಂದರ್ಭದಲ್ಲಿ ಆಪದ್ಧನವಾಗಿ ಬಳಕೆ ಮಾಡಲು ಒಂದುಕೋಟಿ ರೂಗಳ ಕಲ್ಯಾಣನಿಧಿಯನ್ನು ಸ್ಥಾಪಿಸಲು ಸಂಘವು ಉದ್ದೇಶಿಸಿದೆ. ಇದುವರೆಗೂ ಸಂಘದಲ್ಲಿ ಸಂಗ್ರಹವಾಗಿರುವ 5ಲಕ್ಷರೂ ಜೊತೆಗೆ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಸೇರಿಸಿ ಒಟ್ಟು 30ಲಕ್ಷರೂಗಳ ಠೇವಣೆಯನ್ನು ಬ್ಯಾಂಕಿನಲ್ಲಿ ಇರಿಸಲಾಗಿದೆ. ಅದರಿಂದ ಬರುವ ಬಡ್ಡಿಯಲ್ಲಿ ಆಪದ್ಧನವಾಗಿ ಬಳಸಿಕೊಳ್ಳಲಾಗುವುದು ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಕೋಲಾರ ಜಿಲ್ಲೆಯವರೇ ಆದ ಕೆ.ವಿ.ಪ್ರಭಾಕರ್ ಅವರು, ತವರೂರಿನ ಮೇಲಿನ ಪತ್ರಕರ್ತರ ಬಗ್ಗೆ ಕಾಳಜಿ ವಹಿಸಿ ಸರ್ಕಾರದ ಅನುದಾನ ಬಿಡುಗಡೆಯೂ ಸೇರಿದಂತೆ ಸಂಘದ ಎಲ್ಲಾ ಬೇಡಿಕೆಗಳಿಗೆ ಒತ್ತಾಸೆಯಾಗಿ ನಿಂತಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್ ಮತ್ತು ವಿ.ಮುನಿರಾಜು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್, ಆರ್ಥಿಕ ಸಲಹೆಗಾರ ಬಸವರಾಜರಾಯ ರೆಡ್ಡಿ, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಎಂ.ವಾಸುದೇವ ಹೊಳ್ಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್ ಕುಮಾರ್, ಪತ್ರಕರ್ತರ ಕಲ್ಯಾಣನಿಧಿಯ ಸದಸ್ಯ ಪಾ.ಶ್ರೀ.ಅನಂತರಾಮ್ ಉಪಸ್ಥಿತರಿದ್ದರು.