ಇತ್ತೀಚಿನ ಸುದ್ದಿ
ಚಿತ್ರದುರ್ಗ: ಸಾಯಿಬಾಬಾ ದರ್ಶನಕ್ಕೆ ಹೊರಟ ಬೆಂಗಳೂರಿನ 3 ಮಂದಿ ಸಾವು; ಇಬ್ಬರು ಗಂಭೀರ
27/08/2022, 18:58
ಚಿತ್ರದುರ್ಗ(reporterkarnataka.com): ಚಿತ್ರದುರ್ಗ ಸಮೀಪದ ಸೀಬಾರ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶುಕ್ರವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ದಂಪತಿ ಸೇರಿ 3 ಮಂದಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಮೃತರನ್ನು ಬೆಂಗಳೂರಿನ ಭೂಮಿಕಾ (22), ಸಿಂಚನ(24) ಹಾಗೂ ಅವರ ಪತಿ ಮನೀಷ್(27) ಎಂದು ಗುರುತಿಸಲಾಗಿದೆ.
ಮನೀಷ್ ಹಾಗೂ ಭೂಮಿಕಾ ಸಹೋದರರು. ಗಾಯಗೊಂಡಿರುವ ಗಿರಿಧರ್, ಆಶಾ ಹಾಗೂ ಲಾರಿ ಚಾಲಕನನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಿಸಲಾಗಿದ್ದು ಅವರಲ್ಲಿ ಇಬ್ಬರು ಸ್ಥಿತಿ ಗಂಭೀರವಾಗಿದೆ.
ಬೆಂಗಳೂರಿಂದ ಶಿರಡಿ ಸಾಯಿಬಾಬ ದರ್ಶನಕ್ಕೆ ಮನೀಷ್ ದಂಪತಿ, ಮನೀಷ್ ಸಹೋದರಿ ಮೃತ ಭೂಮಿಕಾ ಸೇರಿ ಐವರು ಕಾರಿನಲ್ಲಿ ರಾತ್ರಿ ತೆರಳುತ್ತಿದ್ದರು.
ಮಾರ್ಗ ಮಧ್ಯದಲ್ಲಿ ನಗರದ ಸೀಬಾರ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಕಾರು ಚಾಲಕನ ನಿರ್ಲಕ್ಷ್ಯ ಹಾಗೂ ಅತೀ ವೇಗದಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.














