ಇತ್ತೀಚಿನ ಸುದ್ದಿ
Chikkamagaluru | ತೇಜಸ್ವಿ ಪ್ರತಿಷ್ಠಾನ: ಚಿಟ್ಟೆ ಉದ್ಯಾನವನ, ಆರ್ಕಿಡೇರಿಯಂ ಶೀಘ್ರದಲ್ಲಿ ವೀಕ್ಷಣೆಗೆ ಮುಕ್ತ
10/09/2025, 15:46

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಿರ್ಮಾಣ ಹಂತದಲ್ಲಿರುವ ಚಿಟ್ಟೆ ಉದ್ಯಾನವನ ಮತ್ತು ಆರ್ಕಿಡೇರಿಯಂ ಶೀಘ್ರದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳಾದ ಡಾ.ಸಿ.ರಮೇಶ್ ಹೇಳಿದರು.
ತೇಜಸ್ವಿ ಅವರ ಜನ್ಮದಿನದ ಹಿನ್ನಲೆಯಲ್ಲಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ವ್ಯಂಗ್ಯಚಿತ್ರ, ಹಕ್ಕಿ ಕೀಟ ಚಿತ್ರಕಲೆ, ಕನ್ನಡ ಹಸ್ತಾಕ್ಷರ ಕಾರ್ಯಾಗಾರದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿಟ್ಟೆ ಉದ್ಯಾನವನದಲ್ಲಿ ಚಿಟ್ಟೆಗಳನ್ನು ಆಕರ್ಷಿಸುವ ಸಸ್ಯಗಳನ್ನು ನೆಡುವ ಮೂಲಕ ಚಿಟ್ಟೆಗಳ ಚಟುವಟಿಕೆಗಳಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಚಿಟ್ಟೆ ಉದ್ಯಾನವನದಲ್ಲಿ ಚಿಟ್ಟೆ, ಅದಕ್ಕೆ ಸಂಬಂಧಿಸಿದ ಸಸ್ಯಗಳ ಮಾಹಿತಿ ಫಲಕಗಳು ಇರಲಿವೆ. ಅರ್ಕಿಡೇರಿಯಂನಲ್ಲಿ ಪಶ್ಚಿಮಘಟ್ಟಗಳಲ್ಲಿ ಕಾಣ ಸಿಗುವ ಆರ್ಕಿಡ್ ಸಸ್ಯಗಳನ್ನು ಇಡಲಾಗಿದ್ದು ಅವುಗಳ ಮಾಹಿತಿ ಮತ್ತು ಚಿತ್ರಗಳು ಇರಲಿವೆ. ಜೀವ ವ್ಯವಸ್ಥೆಯಲ್ಲಿ ಆರ್ಕಿಡ್‌ಗಳ ಮಹತ್ವ ಮತ್ತು ಸಂರಕ್ಷಣೆಯ ಜಾಗೃತಿಯನ್ನು ವೀಕ್ಷಕರಿಗೆ ಮೂಡಿಸಲಿದೆ. ವಸತಿ ಗೃಹ ಮತ್ತು ನಾಟಕ, ಸಿನಿಮಾ ಪ್ರದರ್ಶನ ಮುಂತಾದ ಕಾರ್ಯಕ್ರಮಗಳಿಗೆ ಪೂರಕವಾದ ಧ್ವನಿ ಬೆಳಕಿನ ತಾಂತ್ರಿಕ ಸವಲತ್ತುಗಳಿರುವ ಕಿರು ರಂಗ ಮಂದಿರ ನಿರ್ಮಾಣವಾಗುತ್ತಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಮಂಜುಳಾ ಹುಲ್ಲಹಳ್ಳಿ ಮಾತನಾಡಿ ತೇಜಸ್ವಿ ಪ್ರತಿಷ್ಠಾನವೂ ತೇಜಸ್ವಿ ಅವರ ಬಹುಮುಖ ಆಸಕ್ತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯ. ತೇಜಸ್ವಿ ಪ್ರತಿಷ್ಠಾನವೂ ಜ್ಞಾನದಾಹಿಗಳಿಗೆ ಸೂಕ್ತ ತಾಣವಾಗಿದೆ ಎಂದರು.
ಖ್ಯಾತ ವ್ಯಂಗ್ಯಚಿತ್ರಕಾರ ಗುಜ್ಜಾರಪ್ಪ ಮಾತನಾಡಿ, ವ್ಯಂಗ್ಯಚಿತ್ರ ರಚನೆಯನ್ನು ಕಲಿಯಲು ನಿರಂತರ ಅಭ್ಯಾಸ ಬೇಕಾಗುತ್ತದೆ. ವ್ಯಂಗ್ಯಚಿತ್ರ ರಚನಾ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳಿದ್ದು ಶಿಬಿರಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಖ್ಯಾತ ವ್ಯಂಗ್ಯಚಿತ್ರ ಕಲಾವಿದರಾದ ಗುಜ್ಜಾರಪ್ಪ ಅವರು ಡಿಜಿಟಲ್ ವ್ಯಂಗ್ಯಚಿತ್ರ, ರಾ.ಸೂರಿ ಅವರು ಹಸ್ತ ವ್ಯಂಗ್ಯಚಿತ್ರ, ನಾಗನಾಥ್ ಜಿ.ಎಸ್ ಅವರು ಕಾರ್ಟೂನ್ ಪಾತ್ರ ನಿರ್ಮಾಣದ ಕುರಿತು ಕಾರ್ಯಾಗಾರದಲ್ಲಿ ವಿವರಿಸಿದರು. ಶಿಬಿರಾರ್ಥಿಗಳು ವ್ಯಂಗ್ಯಚಿತ್ರ ರಚನೆಯ ವಿವಿಧ ಹಂತಗಳನ್ನು ಪ್ರಾಯೋಗಿಕವಾಗಿ ಕಲಿತುಕೊಂಡರು.
ಈ ಸಂದರ್ಭದಲ್ಲಿ ವಿವಿಧ ಪತ್ರಿಕಾ ತುಣುಕುಗಳ ಸಂಗ್ರಹಕಾರರಾದ ಅಜ್ಜಂಪುರ ಕೃಷ್ಣಮೂರ್ತಿ ಅವರ ಸಂಗ್ರಹದ ವಿವಿಧ ಪತ್ರಿಕೆ ನಿಯತಕಾಲಿಕೆಯಲ್ಲಿ ತೇಜಸ್ವಿ ಅವರ ಕುರಿತು ಪ್ರಕಟಗೊಂಡ ವರದಿ ಬರಹಗಳ ಪತ್ರಿಕಾ ತುಣುಕುಗಳ ಪ್ರದರ್ಶನವನ್ನು ವ್ಯಂಗ್ಯಚಿತ್ರ ಕಲಾವಿದರಾದ ಗುಜ್ಜಾರಪ್ಪ ಉದ್ಘಾಟಿಸಲಾಯಿತು. ಲೇಖಕರಾದ ನರಸಿಂಹಮೂರ್ತಿ ಹಳೇಹಟ್ಟಿ ಹಾಗೂ ಕಿಶೋರ್ ಚಿಂತಾಮಣಿ ಸಂಪಾದಕತ್ವದ ಕನ್ನಡದ ತೇಜಸ್ವು ಎಂಬ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಜೀವನಚಿತ್ರ ಮತ್ತು ಸಾಹಿತ್ಯಚಿಂತನೆಯ ಕೃತಿ ಬಿಡುಗಡೆ ಮಾಡಲಾಯಿತು.
ಕಲಾವಿದರಾದ ಗುಜ್ಜಾರಪ್ಪ, ರಾ.ಸೂರಿ, ನಾಗನಾಥ್ ಜಿ.ಎಸ್, ರಕ್ಷಾ ಪೂಜಾರಿ, ದಿನೇಶ್ ಹೊಳ್ಳ, ಪತ್ರಿಕಾ ತುಣುಕುಗಳ ಸಂಗ್ರಹಕಾರರಾದ ಅಜ್ಜಂಪುರ ಕೃಷ್ಣಮೂರ್ತಿ, ಲೇಖಕ ನರಸಿಂಹಮೂರ್ತಿ ಹಳೇಹಟ್ಟಿ, ಸಾಮಾಜಿಕ ಕಾರ್ಯಕರ್ತ ಸಂಜಯಗೌಡ ಕೊಟ್ಟಿಗೆಹಾರ, ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಸಂಯೋಜಕ ಪ್ರಜ್ವಲ್, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್ ತರುವೆ, ಸಂಗೀತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನವದೀಪ್, ಕೀಟ ತಜ್ಞ ಡಾ.ಅವಿನಾಶ್, ಲೇಖಕ ಪೂರ್ಣೆಶ್ ಮತ್ತಾವರ, ಕಸಾಪ ನಿಕಟಪೂರ್ವ ಅಧ್ಯಕ್ಷ ಶಾಂತಕುಮಾರ್, ಕಲಾವಿದರಾದ ವಿಶ್ವಕರ್ಮ ಆಚಾರ್ಯ, ಹರ್ಷಕಾವಾ ಮುಂತಾದವರು ಇದ್ದರು.