ಇತ್ತೀಚಿನ ಸುದ್ದಿ
Chikkamagaluru | ಕೊಟ್ಟಿಗೆಹಾರ ತೇಜಸ್ವಿ ಪ್ರತಿಷ್ಠಾನದಲ್ಲಿ ಚಿಟ್ಟೆ ಉದ್ಯಾನವನ ವೀಕ್ಷಣೆಗೆ ಮುಕ್ತ
01/12/2025, 20:44
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಚಿಟ್ಟೆ ಉದ್ಯಾನವನ ವೀಕ್ಷಣೆಗೆ ಮುಕ್ತವಾಗಿದ್ದು ಚಿಟ್ಟೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಪ್ರದೀಪ್ ಕೆಂಜಿಗೆ ಹೇಳಿದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಕೊಟ್ಟಿಗೆಹಾರದಲ್ಲಿ ನಡೆದ ಡಿಜಿಟಲ್ ಕನ್ನಡ ಫಾಂಟ್ ಕಾರ್ಯಾಗಾರ ಮತ್ತು ಕನ್ನಡ ಕೈಬರಹ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚಿಟ್ಟೆ ಉದ್ಯಾನವನದಲ್ಲಿ ಚಿಟ್ಟೆಗಳಿಗೆ ಸಂಬಂಧಿಸಿದ ಅತಿಥೇಯ ಸಸ್ಯಗಳನ್ನು ನೆಡಲಾಗಿದ್ದು ಮಡ್ ಪಡ್ಲಿಂಗ್ ಮತ್ತು ಆಹಾರ ಪೂರಕಗಳನ್ನು ಮಾಡಲಾಗಿದೆ. ಚಿಟ್ಟೆಗಳ ಕುರಿತಾದ ಮಾಹಿತಿ ಫಲಕಗಳನ್ನು ಉದ್ಯಾನವನದಲ್ಲಿ ಹಾಕಲಾಗಿದ್ದು ಚಿಟ್ಟೆಗಳ ಜಗತ್ತಿನ ವಿವರಗಳು ಜ್ಞಾನಾಸಕ್ತರಿಗೆ ಸಿಗಲಿದೆ. ಆರ್ಕಿಡ್‌ಗಳ ಮಹತ್ವ ಮತ್ತು ಸಂರಕ್ಷಣೆಯ ಅರಿವು ಮೂಡಿಸುವ ಆರ್ಕಿಡ್ ಲೋಕ ಪ್ರಮುಖ ಆಕರ್ಷಣೆಯಾಗಿದೆ. ರಂಗಮಂದಿರ ಮತ್ತು ವಸತಿಗೃಹದ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದ್ದು ಕಾರ್ಯಾಗಾರ, ನಾಟಕ ಮುಂತಾದ ಚಟುವಟಿಕೆಗಳು ನಿರಂತರವಾಗಿ ನಡೆಯಲಿದೆ ಎಂದರು.
ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ರವೀಶ್ ಬಸಪ್ಪ ಮಾತನಾಡಿ, ಕುತೂಹಲ, ಜೀವನ ಪ್ರೀತಿ, ಜೀವನೋತ್ಸಾಹವನ್ನು ಮಕ್ಕಳು ಬೆಳಸಿಕೊಳ್ಳಬೇಕು. ಬಹುಮುಖ ವ್ಯಕ್ತಿತ್ವದ ತೇಜಸ್ವಿ ಅವರ ಕೃತಿಗಳನ್ನು ಮಕ್ಕಳು ಓದಬೇಕು ಎಂದು ಅವರು ನುಡಿದರು.
ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ದೀಪಾ ಹಿರೇಗುತ್ತಿ ಮಾತನಾಡಿ, ತೇಜಸ್ವಿ ಅವರ ಮಿಲೇನಿಯಂ ಸರಣಿಯ ಪುಸ್ತಕಗಳು ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸುತ್ತವೆ. ತೇಜಸ್ವಿ ಪ್ರತಿಷ್ಠಾನ ಬಹುಮುಖ ವ್ಯಕ್ತಿತ್ವದ ತೇಜಸ್ವಿ ಅವರ ಆಶಯಗಳನ್ನು ತಮ್ಮ ಕಾರ್ಯ ಚಟುವಟಿಕೆಗಳ ಮೂಲಕ ಸಕ್ರಿಯವಾಗಿಟ್ಟಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ.ರಮೇಶ್ ಮಾತನಾಡಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಬಲಿಷ್ಠವಾಗಿ ಬೆಳೆಸಲು ಸಾಧ್ಯವಾದರೇ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ ಎಂಬುದು ತೇಜಸ್ವಿ ಅವರ ಅಭಿಪ್ರಾಯವಾಗಿತ್ತು. ಕನ್ನಡ ಭಾಷೆಯನ್ನು ತಂತ್ರಜ್ಞಾನಸ್ನೇಹಿ ಭಾಷೆಯಾಗಿಸಲು ಡಿಜಿಟಲ್ ಕನ್ನಡ ಫಾಂಟ್ ಕಾರ್ಯಾಗಾರದಂತಹ ಕಾರ್ಯಕ್ರಮಗಳು ಸಹಾಯಕ ಎಂದು ಹೇಳಿದರು.
ಡಿಜಿಟಲ್ ಕನ್ನಡ ಫಾಂಟ್ ವಿನ್ಯಾಸಕಾರರಾದ ಮಂಜುನಾಥ್ ಆರ್, ಡಿಜಿಟಲ್ ಕನ್ನಡ ಫಾಂಟ್ ಕುರಿತು ಮಾಹಿತಿ ನೀಡಿದರು. ತೇಜಸ್ವಿ ಪ್ರತಿಷ್ಠಾನದ ಸದಸ್ಯ ರವೀಶ್ ಬಸಪ್ಪ ಅವರು, ೨೦೨೬ನೇ ಸಾಲಿನ ಕ್ಯಾಲೆಂಡರ್‌ನ ವಿನ್ಯಾಸ ಬಿಡುಗಡೆ ಮಾಡಿದರು. ಸದಸ್ಯರಾದ ದೀಪಾ ಹಿರೇಗುತ್ತಿ ಅವರು ಆರ್ಕಿಡ್ ಮಾಹಿತಿ ಫಲಕಗಳನ್ನು ಉದ್ಘಾಟನೆ ಮಾಡಿದರು. ತೇಜಸ್ವಿ ಪ್ರತಿಷ್ಠಾನದ ಆವರಣದಲ್ಲಿ ಕಂಡು ಬರುವ ಅಪರೂಪದ ಚಿಟ್ಟೆಗಳ ಪರಿಚಯ ಫಲಕಗಳು ಮತ್ತು ಚಿಟ್ಟೆ ಉದ್ಯಾನ ಸಂಬಂಧಿತ ಮಾಹಿತಿ ಫಲಕವನ್ನು ಕಲಾವಿದರಾದ ಸುರೇಶ್ ಚಂದ್ರ ದತ್ತ ನೆರವೇರಿಸಿದರು. ಕೈ ಬರಹ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಿಜ್ಞಾನಿಗಳಾದ ಡಾ.ಸುಚಿತ್ರ ಕುಮಾರಿ, ಕೀಟ ತಜ್ಞ ಡಾ.ಅವಿನಾಶ್, ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಸಂಯೋಜಕ ಪ್ರಜ್ವಲ್, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಪೂರ್ಣೇಶ್, ಸಂಗೀತಾ, ಸಿದ್ದಿಕ್, ಕಲಾವಿದರಾದ ಬಾಪು ದಿನೇಶ್, ಟಿ.ಡಿ ಸುರೇಶ್, ಸಾಮಾಜಿಕ ಕಾರ್ಯಕರ್ತ ಸಂಜಯಗೌಡ, ರೈತ ಮುಖಂಡ ಗುರುಶಾಂತಪ್ಪ, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಕೈಬರಹ ಸ್ಪರ್ಧೆಯ ವಿಜೇತರು ಹಾಜರಿದ್ದರು.












