ಇತ್ತೀಚಿನ ಸುದ್ದಿ
Chennarayapatna | ಹಾಸನ ಬಳಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು; ನಾಲ್ವರು ಗಂಭೀರ
20/07/2025, 13:34

ಹಾಸನ(reporterkarnataka.com): ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಚನ್ನರಾಯಪಟ್ಟಣದ ಹೊರವಲಯದ ಶೆಟ್ಟಿಹಳ್ಳಿ ಫ್ಲೈ ಓವರ್ ಬಳಿ ಘಟನೆ ನಡೆದಿದ್ದು, ಬೆಂಗಳೂರಿನ ಸಂಜಯ ನಗರದ ಮೀನಾಕ್ಷಿ (29) ಹಾಗೂ ಚನ್ನರಾಯಪಟ್ಟಣ ಮೂಲದ ಪ್ರತಾಪ್ (32) ಮೃತ ದುರ್ದೈವಿಗಳು. ಬೆಂಗಳೂರಿನಿಂದ ಹಾಸನದ ಕಡೆಗೆ ಬರುತ್ತಿದ್ದ ಮಾರುತಿ ಕಾರು ಮತ್ತು ಹಾಸನದಿಂದ ಹಿರೀಸಾವೆ ಕಡೆಗೆ ಹೊರಟಿದ್ದ ಟಾಟಾ ನ್ಯಾನೋ ಕಾರು ಮುಖಾಮುಖಿ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ 2 ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದರೆ, ಕಾರಿನ ಚಾಲಕ ಮತ್ತು ಬೆಂಗಳೂರಿನ ಮೂಲದ ಮಹಿಳೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನುಳಿದ ನಾಲ್ವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಗಾಯಾಳುಗಳನ್ನು ಚನ್ನರಾಯಪಟ್ಟಣ ಮತ್ತು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತವಾದ ಬಳಿಕ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರೂ, ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಕೆಲವರು ಆಕ್ರೋಶ ವ್ಯಕ್ತಪಡಿಸಿದರು.