ಇತ್ತೀಚಿನ ಸುದ್ದಿ
ಚೈತ್ರಾ ಕುಂದಾಪುರ ವಂಚನೆ ಪ್ರಕರಣ: 3ನೇ ಆರೋಪಿ ಹಾಲಶ್ರೀ ಸ್ವಾಮೀಜಿ ಬಂಧನ: ಒಡಿಸ್ಸಾದಲ್ಲಿ ಪೊಲೀಸ್ ವಶಕ್ಕೆ
19/09/2023, 13:47

ಬೆಂಗಳೂರು(reporterkarnataka.com): ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ವಂಚನೆ ಮಾಡಿದ ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯಾದ ಅಭಿನವ ಹಾಲಶ್ರೀ ಸ್ವಾಮೀಜಿ ಅವರನ್ನು ಒಡಿಸ್ಸಾದಲ್ಲಿ ಮಂಗಳವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವವರಿಗೆ ಬೈಂದೂರು ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವ ಭರವಸೆ ನೀಡಿ ಸುಮಾರು 7 ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣ ದಾಖಲಾಗಿತ್ತು. ಪ್ರಕರಣ ಪ್ರಮುಖ ಆರೋಪಿಯಾದ ಹಿಂದುತ್ವದ ಭಾಷಣಗಾರ್ತಿ ಚೈತ್ರಾ ಕುಂದಾಪುರ ಅವರನ್ನು ಪೊಲೀಸರು ಇತ್ತೀಚೆಗೆ ಉಡುಪಿಯಲ್ಲಿ ಬಂಧಿಸಿದ್ದರು.
ಒಟ್ಟು 5 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ 3ನೇ
ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಮಂಗಳವಾರ ಒಡಿಶಾದ ಕಟಕ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ನಂಬರ್ 1 ಆರೋಪಿಯಾದ ಚೈತ್ರಾ ಕುಂದಾಪುರ ಬಂಧನದ ಬಳಿಕ ಅನೇಕ ರೋಚಕ ಮಾಹಿತಿಗಳು ಹೊರ ಬೀಳುತ್ತಿದೆ. ಈ ಮೊದಲು ಸ್ವಾಮೀಜಿಯ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಸಿಸಿಬಿ ಪೊಲೀಸರು ಇಂದು ಸ್ವಾಮೀಜಿಯ ಆತ್ಮೀಯ ಸಂಪರ್ಕದಲ್ಲಿದ್ದವರ ವಿಚಾರಣೆ ನಡೆಯುತ್ತಿದ್ದಾರೆ. ಮಠದ ಕೆಲ ಆತ್ಮೀಯರು ಮತ್ತು ಚಾಲಕ ಸೇರಿ ಕೊನೆ ಕ್ಷಣದ ಕರೆಗಳ ಆಧಾರದ ಮೇರೆಗೆ ಸಿಸಿಬಿ ಅಧಿಕಾರ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸಿಸಿಬಿ ಪೊಲೀಸರು ಸ್ವಾಮೀಜಿಯನ್ನು ವಶಕ್ಕೆ ಪಡೆದುಕೊಂಡು ಸದ್ಯ ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ. ಇವರ ತನಿಖೆಯ ಬಳಿಕವಷ್ಟೇ ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬ ಸತ್ಯ ಹೊರಬೀಳಲಿದೆ.