ಇತ್ತೀಚಿನ ಸುದ್ದಿ
ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರಕಾರ ರಚನೆ: ಡಿಸಿಎಂ ಶಿವಕುಮಾರ್ ಅಖಾಡಕ್ಕೆ; ಚಂದ್ರಬಾಬು ನಾಯ್ಡು ಜತೆ ಮಾತುಕತೆ?
05/06/2024, 19:26

ಬೆಂಗಳೂರು(reporterkarnataka.com): ಕೇಂದ್ರದಲ್ಲಿ ಸರಕಾರ ರಚನೆ ಕುರಿತು ಒಂದು ಕಡೆ ಎನ್ ಡಿಎ ಮೈತ್ರಿಕೂಟದಿಂದ ಭಾರೀ ಪ್ರಯತ್ನ ನಡೆಯುತ್ತಿದ್ದರೆ, ಇನ್ನೊಂದು ಕಡೆ ಇಂಡಿಯಾ ಒಕ್ಕೂಟ ಕೂಡ ಕಸರತ್ತು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಖಾಡಕ್ಕಿಳಿದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಎಂದೇ ಪರಿಗಣಿಸಲಾದ ಶಿವಕುಮಾರ್ ಅವರನ್ನು ಸಂಧಾನಕಾರನಾಗಿ ಕಾಂಗ್ರೆಸ್ ಅಖಾಡಕ್ಕಿಳಿಸಿದೆ ಎಂಬ ಮಾಹಿತಿ ಇದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಜತೆ ಆಪ್ತ ಒಡನಾಟ ಹೊಂದಿರುವ ಶಿವಕುಮಾರ್ ಅವರನ್ನು ಇಂಡಿಯಾ ಒಕ್ಕೂಟದ ಮಧ್ಯವರ್ತಿಯಾಗಿ ನಾಯ್ಡು ಜತೆ ಮಾತುಕತೆ ನಡೆಸಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ರಾತ್ರಿ ಸುಮಾರು ಅರ್ಧ ತಾಸು ಕಾಲ ಚಂದ್ರಬಾಬು ನಾಯ್ಡು ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ರಿಪೋರ್ಟರ್ ಕರ್ನಾಟಕಕ್ಕೆ ತಿಳಿಸಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಪ್ರತಿಪಕ್ಷಗಳ ಒಕ್ಕೂಟವಾದ ಇಂಡಿಯಾಕ್ಕೆ ಒಳ್ಳೆಯ ಅವಕಾಶ ಲಭಿಸಿದೆ. ಇದನ್ನು ಸದುಪಯೋಗಪಡಿಸಿಕೊಳ್ಳೋಣ ಎಂದು ಶಿವಕುಮಾರ್ ಅವರು ನಾಯ್ಡು ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನಾಯ್ಡು ಅವರ ಬೇಡಿಕೆಗಳಿಗೆ ಇಂಡಿಯಾ ಒಕ್ಕೂಟ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆಯನ್ನು ನೀಡುವ ಭರವಸೆಯನ್ನೂ ಶಿವಕುಮಾರ್ ನೀಡಿದ್ದಾರೆ. ಇದರ ಜತೆ ಎರಡು ಅವಧಿಯಲ್ಲಿ ಮೋದಿ ಸರಕಾರ ಪ್ರತಿಪಕ್ಷಗಳನ್ನು ನಡೆಸಿಕೊಂಡ ರೀತಿ, ಸಿಬಿಐ, ಇಡಿ ದುರ್ಬಳಕ್ಕೆ ಮಾಡಿದ ಬಗ್ಗೆಯೂ ನಾಯ್ಡು ಅವರ ಮನವರಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.