ಇತ್ತೀಚಿನ ಸುದ್ದಿ
ಕಾರಿಗೆ ಡಿಕ್ಕಿ ಹೊಡೆದು ಮಾಯವಾಗಿದ್ದ ಶುನಕ ಅಲ್ಲಿತ್ತು!: ಬಂಪರ್ ಒಳಗೆ ಬರೋಬ್ಬರಿ 70 ಕಿಮೀ ಶ್ವಾನ ಪ್ರಯಾಣ!!
03/02/2023, 10:36

ಪುತ್ತೂರು(reporter Karnataka.com): ನಾಯಿಯೊಂದು ಕಾರಿನ ಬಂಪರಿನಲ್ಲಿ ಬರೋಬ್ಬರಿ 70 ಕಿಮೀ ಪ್ರಯಾಣಿಸಿದ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪ ನಡೆದಿದೆ. ವಿಚಿತ್ರವೆಂದರೆ ನಾಯಿಗೆ ಯಾವುದೇ ಗಾಯಗಳಾಗದೆ ಸುರಕ್ಷಿತವಾಗಿತ್ತು.
ಪುತ್ತೂರು ಸಮೀಪದ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪುತ್ತೂರಿಗೆ ವಾಪಸಾಗುತ್ತಿದ್ದ ದಾರಿ ಮಧ್ಯೆ ಬಳ್ಪ ಎಂಬಲ್ಲಿ ನಾಯೊಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಸುಬ್ರಹ್ಮಣ್ಯ ಅವರು ತಕ್ಷಣವೇ ಕಾರನ್ನು ನಿಲ್ಲಿಸಿ ಕಾರಿನ ಸುತ್ತಮುತ್ತ ನಾಯಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ನಾಯಿ ಮಂಗಮಾಯ!. ಕಾರಿಗೆ ಡಿಕ್ಕಿ ಹೊಡೆದ ನಾಯಿ ಅಲ್ಲಿಂದ ಎಲ್ಲಿ ಹೋಯಿತು ಎನ್ನುವುದನ್ನು ಊಹಿಸಲೂ ಸುಬ್ರಹ್ಮಣ್ಯ ಅವರಿಗೆ ಕಷ್ಟವಾಗಿತ್ತು. ನಂತರ ಅವರು ಕಾರು ಚಲಾಯಿಸಿಕೊಂಡು ಮನೆಯತ್ತ ಸಾಗಿದರು.
ನೇರವಾಗಿ ಕಬಕದ ತನ್ನ ಮನೆಗೆ ಬಂದ ಸುಬ್ರಹ್ಮಣ್ಯ ದಂಪತಿ ಕಾರನ್ನು ಪರಿಶೀಲಿಸಿದಾಗ ಬಂಪರ್ ನ ಗ್ರಿಲ್ ತುಂಡಾಗಿರುವುದು ಗಮನಿಸಿದರು. ತುಂಡಾದ ಗ್ರಿಲ್ ಸಂದಿನಿಂದ ಬಂಪರೊಳಗೆ ನಾಯಿ ಇರುವುದು ಕಂಡು ಬಂತು. 70 ಕಿಲೋಮೀಟರ್ ಹಿಂದೆ ಕಾರಿಗೆ ಡಿಕ್ಕಿ ಹೊಡೆದ ನಾಯಿ ಅಲ್ಲಿತ್ತು.
ನಾಯಿಯನ್ನು ಬಂಪರ್ ಒಳಗಿಂದ ತೆಗೆಯಲಾಗದ ಸ್ಥಿತಿಯಲ್ಲಿದ್ದ ಕಾರಣ ಪಕ್ಕದ ಗ್ಯಾರೇಜ್ ಗೆ ತೆರಳಿದ ಸುಬ್ರಹ್ಮಣ್ಯ ಅವರು ನಾಯಿಯನ್ನು ಹೊರ ತೆಗೆಯಲು ವಿನಂತಿಸಿದರು. ಗ್ಯಾರೇಜ್ ಮಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಪರ್ ಬಿಚ್ಚಿ ನಾಯಿಯನ್ನು ಸುರಕ್ಷಿತವಾಗಿ ಕಾರಿಂದ ಹೊರಗೆ ಬರುವಂತೆ ಮಾಡಲಾಯಿತು. ಸುಮಾರು 70 ಕಿಲೊಮೀಟರ್ ವರೆಗೆ ಕಾರಿನ ಬಂಪರ್ ಒಳಗೇ ಇದ್ದ ನಾಯಿ ಆರಾಮವಾಗಿ ಹೊರಗೆ ಬಂತು. ನಾಯಿಗೆ ಯಾವುದೇ ಗಾಯಗಳಾಗಿಲ್ಲ ಎನ್ನುವುದು ಸಮಾಧಾನದ ವಿಷಯ.