ಇತ್ತೀಚಿನ ಸುದ್ದಿ
ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು
18/01/2026, 14:05
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿ ಪಟ್ಟಣದ ಹೊರ ವಲಯದಲ್ಲಿರುವ ಶಿವರಾಜಪುರದಲ್ಲಿ ಸಣ್ಣ ಅಂಗಡಿ ಇಟ್ಟಕೊಂಡು ಮಾರುತಿ ವ್ಯಾನಿನಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ಕಾಯಕವನ್ನೂ ನಡೆಸುತ್ತಿದ್ದ ರಮೇಶ್ ಕಾರಿನ ಚಾಲಕನೊಬ್ಬನ ಅತೀ ವೇಗದ ನಿರ್ಲಕ್ಷ್ಯದ ಚಾಲನೆಯಿಂದಾಗಿ ತನ್ನದಲ್ಲದ ತಪ್ಪಿಗೆ ಪ್ರಾಣ ತೆತ್ತಬೇಕಾದ ದುರಂತ ಘಟನೆ ಬಾನುವಾರ ಶಿವರಾಜಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ರಮೇಶ್ ತನ್ನ ಮಾರುತಿ ವ್ಯಾನಿನಲ್ಲಿ ಊರಿನವರೊಬ್ಬರ ಮದುವೆ ಸಮಾರಂಭದ ಆಹ್ವಾನ ಪತ್ರಿಕೆ ವಿತರಿಸಲು ಇನ್ನೇನು ಕೆಲವೇ ಹೊತ್ತಲ್ಲಿ ಶಿವಮೊಗ್ಗದ ಕಡೆ ತೆರಳಬೇಕಾಗಿತ್ತು. ಈ ನಡುವೆ ಶಿವರಾಜಪುರದ ಆಗುಂಬೆ ರಸ್ತೆಯ ಬದಿಯಲ್ಲಿರುವ ತನ್ನ ಅಂಗಡಿಯ ಎದುರು ಕಾರನ್ನು ನಿಲ್ಲಿಸಿಕೊಂಡು ಕಾರಿನಲ್ಲಿ ಯಾವುದೋ ಅಂಗಡಿಯ ಐಟಮ್ ಗಳನ್ನು ತೆಗೆಯುವುದರಲ್ಲಿ ನಿರತವಾಗಿದ್ದಾಗ ಆಗುಂಬೆ ಕಡೆಯಿಂದ ಬರುತ್ತಿದ್ದ ಕಾರು ಏಕಾಏಕಿ ಎಡದಿಂದ ಸಂಪೂರ್ಣ ರಾಂಗ್ ಸೈಡ್‌ನಲ್ಲಿ ಬಲಕ್ಕೆ ನುಗ್ಗಿ ಬದಿಯಲ್ಲಿ ನಿಂತಿದ್ದ ಮಾರುತಿ ವ್ಯಾನ್ ಮತ್ತು ರಮೇಶನ ಮೇಲೆ ಅಪ್ಪಳಿಸಿ ಒಂದು ಅಮೂಲ್ಯ ಜೀವವನ್ನೇ ಬಲಿ ತೆಗೆದುಕೊಂಡಿತು.
ರಮೇಶ ಶ್ರಮಜೀವಿ. ಅತ್ಯಂತ ಸಾಧು ಸ್ವಭಾವದವರು. ಊರಿನ ಎಲ್ಲರೂ ಅವರನ್ನು ಪ್ರೀತಿಸುತ್ತಿದ್ದರು. ಇವರ ದುರಂತ ಸಾವಿಗೆ ಇವರ ಆತ್ಮೀಯರೆಲ್ಲರೂ ತೀವ್ರ ಕಂಬಿನಿ ಮಿಡಿದಿದ್ದಾರೆ. ಶಿವರಾಜಪುರದಲ್ಲಿ ಸ್ಮಶಾನ ಮೌನ ಆವರಿಸಿದೆ.
ಮಡದಿ , ಇಬ್ಬರು ಹೆಣ್ಣು ಮಕ್ಕಳು ಅಪಾರ ಬಂಧು ಬಳಗವನ್ನು ರಮೇಶ್ ಅಗಲಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













