ಇತ್ತೀಚಿನ ಸುದ್ದಿ
ಎನ್‌ಸಿಸಿ ನೌಕದಳದ ಕ್ಯಾಡೆಟ್ ಆಗಿ ಮಂಗಳೂರು ವಿವಿ ಕಾಲೇಜಿನ ಕ್ಯಾಪ್ಟನ್ ಶ್ರೀನಿವಾಸ್ ಪಿ. ನೇಮಕ
30/12/2025, 20:06
ಮಂಗಳೂರು(reporterkarnataka.com): ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಸೀನಿಯರ್ ಕ್ಯಾಡೆಟ್ ಕ್ಯಾಪ್ಟನ್ ಶ್ರೀನಿವಾಸ್ ಪಿ., 5 KAR ಎನ್‌ಸಿಸಿ ನೌಕದಳದ ಕ್ಯಾಡೆಟ್ ಆಗಿ ನೇಮಕಗೊಂಡಿದ್ದಾರೆ.
ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಡೈರೆಕ್ಟೋರೇಟ್ ಜನರಲ್ ಎನ್‌ಸಿಸಿ ವತಿಯಿಂದ ಆಯೋಜಿಸಲಾಗುವ ಓವರ್‌ಸೀಸ್ ಡಿಪ್ಲಾಯ್‌ಮೆಂಟ್ ಕ್ಯಾಂಪ್‌ಗೆ (OSD)ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಈ ಗೌರವಾನ್ವಿತ ಅಂತಾರಾಷ್ಟ್ರೀಯ ನೌಕಾ ತರಬೇತಿ ಕಾರ್ಯಕ್ರಮಕ್ಕೆ ಕರ್ನಾಟಕ ಹಾಗೂ ಗೋವಾ ಡೈರೆಕ್ಟೋರೇಟ್‌ನಿಂದ ಆಯ್ಕೆಯಾದ ಏಕೈಕ ಕ್ಯಾಡೆಟ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
2026ರ ಜನವರಿ 7ರಿಂದ ಫೆಬ್ರುವರಿ 10ರವರೆಗೆ ಸಿಂಗಪುರ, ಇಂಡೋನೇಷ್ಯಾ ಹಾಗೂ ಥೈಲ್ಯಾಂಡ್ ದೇಶಗಳಲ್ಲಿ ನಡೆಯುವ ನೌಕದಳ ಸಂಬಂಧಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ಈ ಮಹತ್ವದ ಸಾಧನೆಯ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗಣಪತಿ ಗೌಡ ಅವರು ಕ್ಯಾಡೆಟ್‌ಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದರು. ಈ ವೇಳೆ ಲೆಫ್ಟಿನೆಂಟ್ ಕಮಾಂಡರ್ ಪ್ರೊ. ಯತೀಶ್ ಕುಮಾರ್ (ನೌಕದಳ) ಅಧಿಕಾರಿ ಉಪಸ್ಥಿತರಿದ್ದರು.












