ಇತ್ತೀಚಿನ ಸುದ್ದಿ
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ವತಿಯಿಂದ ನಿವೃತ್ತ ಶಿಕ್ಷಕ ಹಾಗೂ ಶಿಕ್ಷಕೇತರರಿಗೆ ಗುರುನಮನ
26/06/2022, 23:18

ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಕೆನರಾ ಹೈಸ್ಕೂಲ್ ಅಸೋಸಿಯೇಶನ್ ವತಿಯಿಂದ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಹಾಗೂ ಶಿಕ್ಷಕೇತರರಿಗೆ ಗುರುನಮನ ಕಾರ್ಯಕ್ರಮ ಭಾನುವಾರ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಜರುಗಿತು.
ಕಾರ್ಯ ಕ್ರಮವನ್ನು ಶಾಸಕ ವೇದವ್ಯಾಸ್ ಕಾಮತ್ ಉದ್ಘಾಟಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಸ್ಮರಣೀಯ. ಅಂತಹ ಶಿಕ್ಷಕರನ್ನು ಗುರುತಿಸಿ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿ ಎಂದು ಹೇಳಿದರು.
ಸಮಾಜದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದಿಂದ ಅಮ್ಮೆಂಬಳ ಸುಬ್ಬರಾಯ ಪೈ ಅವರು ಆರಂಭಿಸಿದ ಸಂಸ್ಥೆ ಇಂದು ಬೃಹತ್ ಮಟ್ಟಕ್ಕೆ ಬೆಳೆದಿದೆ. ಲಕ್ಷಾಂತರ ವಿದ್ಯಾರ್ಥಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಇದರಲ್ಲಿ ಶಿಕ್ಷಕರ ಪಾತ್ರವೂ ಮಹತ್ತರವಾದುದು. ತಾನು ಕೂಡಾ ಕೆನರಾ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು, ಇಂದು ಶಾಸಕನಾಗಿ ಸೇವೆ ಮಾಡಲು ಸಂಸ್ಥೆಯಲ್ಲಿ ಕಲಿಸಿದ ಗುರುಗಳ ಮಾರ್ಗದರ್ಶನವೇ ಕಾರಣ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಸಾಧಕರಾಗಿದ್ದಾರೆ ಎಂದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಎಂ. ರಂಗನಾಥ ಭಟ್ ಮಾತನಾಡಿ, ಕೆನರಾ ಶಿಕ್ಷಣ ಸಂಸ್ಥೆಗಳನ್ನು ಇಷ್ಟು ಎತ್ತರಕ್ಕೆ ಬೆಳೆಸುವಲ್ಲಿ ಪ್ರತಿಯೊಬ್ಬ ಶಿಕ್ಷಕರ ಕೊಡುಗೆಯೂ ಅಮೂಲ್ಯ ವಾದದ್ದು . ಅವರ ಪ್ರತಿಫಲಾಪೇಕ್ಷೆ ಇಲ್ಲದ ಸೇವೆಯ ಋಣ ತೀರಿಸುವ ಸಣ್ಣ ಪ್ರಯತ್ನವೇ ಗುರುನಮನ ಕಾರ್ಯಕ್ರಮ ಎಂದು ನುಡಿದರು.
ಸುಮಾರು 130 ಮಂದಿ ಶಿಕ್ಷಕರು ಹಾಗೂ ಶಿಕ್ಷಕೇತರರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ಮಾತನಾಡಿದ ಹಿರಿಯರಾದ ಮಾಲತಿ ಟೀಚರ್, ಕೇವಲ ಕಲ್ಲಿನ ಗೋಡೆಗಳಿಂದ ಶಾಲೆ ಆಗುವುದಿಲ್ಲ, ಉತ್ತಮ ಶಿಕ್ಷಕರಿಂದ ಶಾಲೆ ರೂಪುಗೊಳ್ಳುತ್ತದೆ. ಶಿಕ್ಷಕರಲ್ಲಿರುವ ಬುದ್ಧಿವಂತಿಕೆ, ಪ್ರೀತಿ, ಮತ್ತು ಸ್ಪೂರ್ತಿದಾಯಕ ಮಾತುಗಳು ಉತ್ತಮ ವಿದ್ಯಾರ್ಥಿಯನ್ನು ಸಿದ್ಧಪಡಿಸುತ್ತದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಭವಿಷ್ಯದ ಭಾರತವನ್ನು ನಿರ್ಮಿಸುವವರಾಗಿದ್ದು, ಅದಕ್ಕೆ ತಕ್ಕ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡಬೇಕು. ನಿಮ್ಮ ತರಗತಿಯಲ್ಲೇ ಒಬ್ಬ ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂರಂತಹ ವಿದ್ಯಾರ್ಥಿಗಳು ಇರಬಹುದು. ಅಂತಹವನ್ನು ಗುರುತಿಸಿ ಅವರಿಗೆ ಪ್ರೂತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಪದಾಧಿಕಾರಿಗಳಾದ ಸಿಎ ಎಂ. ವಾಮನ ಕಾಮತ್, ಸಿಎ ಎಂ.ಜಗನ್ನಾಥ ಕಾಮತ್, ಕೆ.ಸುರೇಶ್ ಕಾಮತ್, ಟಿ.ಗೋಪಾಲಕೃಷ್ಣ ಶೆಣೈ, ಪಿ.ಗೋಪಾಲಕೃಷ್ಣ ಶೆಣೈ, ಕೆ.ಸುಧಾಕರ ಪೈ, ಬಸ್ತಿ ಪುರುಷೋತ್ತಮ ಶೆಣೈ, ಎಂ.ನರೇಶ್ ಶೆಣೈ, ಡಿ.ವಾಸುದೇವ ಕಾಮತ್, ಕೆ.ಶಿವಾನಂದ ಶೆಣೈ, ಗೋಪಾಲ ಕೃಷ್ಣ ಭಟ್, ಪಿಆರ್‌ಒ ಉಜ್ವಲಾ ಮಲ್ಯ, ರಿಜಿಸ್ಟ್ರಾರ್ ಗುರುದತ್ತ ಭಾಗವತ್ ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.