ಇತ್ತೀಚಿನ ಸುದ್ದಿ
ಬಸ್ ನಿಂದ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು: ಬೈಂದೂರು ಪೊಲೀಸರ ಕಾರ್ಯಾಚರಣೆ; ಮಧ್ಯಪ್ರದೇಶದಲ್ಲಿ ಆರೋಪಿಗಳ ಬಂಧನ
25/06/2022, 00:01
ಕುಂದಾಪುರ(reporterkarnataka.com): ಮುಂಬೈನಿಂದ ಬರುತ್ತಿದ್ದ ಬಸ್ಸಿನಿಂದ 18 ಲಕ್ಷದ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಬೈಂದೂರು ಪೊಲೀಸರು ಭೇದಿಸಿದ್ದು, ಮಧ್ಯಪ್ರದೇಶದಿಂದ ಆರೋಪಿಗಳನ್ನು ಬಂಧಿಸಿದ್ದಾರೆ.
ಜೂನ್ 16ರಂದು ರಾತ್ರಿ ಮಹಾರಾಷ್ಟ್ರದ ಈಶ್ವ ದಾಲಿಚಂದ್ ಎನ್ನುವ ಚಿನ್ನದ ವ್ಯಾಪಾರಿ ಸೂಟ್ ಕೇಸ್ ನಲ್ಲಿ ನಲ್ಲಿ ಚಿನ್ನಾಭರಣ ಇಟ್ಟುಕೊಂಡು ಮುಂಬೈನಿಂದ ಖಾಸಗಿ ಬಸ್ಸಿನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದರು. ಶಿರೂರಿನಲ್ಲಿ ರಾತ್ರಿ ಬಸ್ಸನ್ನು ಊಟಕ್ಕೆಂದು ನಿಲ್ಲಿಸಿದ್ದಾಗ, ಪ್ರಯಾಣಿಕರೆಲ್ಲ ಊಟಕ್ಕೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಯಾರೋ ಆಗಂತುಕರು ಬಸ್ಸಿಗೆ ನುಗ್ಗಿ ಸೂಟ್ ಕೇಸ್ ಒಳಗಿದ್ದ ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದರು. ಕಾರಿನಲ್ಲಿ ಆರೋಪಿಗಳು ಹೋಗಿದ್ದಾರೆ ಅನ್ನುವ ಸುಳಿವು ದೊರಕಿತ್ತು.
ಪ್ರಕರಣದ ಪತ್ತೆಗೆ ಬೈಂದೂರು ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕಾಯ್ಕಿಣಿ, ಡಿವೈಎಸ್ಪಿ ಶ್ರೀಕಾಂತ್ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ಮಾಡಲಾಗಿತ್ತು. ಬೈಂದೂರು ಠಾಣಾಧಿಕಾರಿ ಪವನ್ ನಾಯಕ್ ಮತ್ತು ಗಂಗೊಳ್ಳಿ ಠಾಣೆಯ ವಿನಯ್ ನೇತೃತ್ವದ ಎರಡು ತಂಡಗಳು ಒಂದು ಬೆಂಗಳೂರು, ಮತ್ತೊಂದು ಮುಂಬೈಗೆ ತೆರಳಿತ್ತು. ಇದೇ ವೇಳೆ, ಒಂದಷ್ಟು ಪೊಲೀಸರು ಸಿಸಿಟಿವಿ ಚೆಕ್ ಮಾಡಿದ್ದರು. ಬಿಳಿ ಬಣ್ಣದ ಬೀಜಾ ಕಾರು ಶಿವಮೊಗ್ಗ ಕಡೆಗೆ ತೆರಳಿದ್ದು ಪತ್ತೆಯಾಗಿತ್ತು. ಅದನ್ನು ಬೆನ್ನತ್ತಿದಾಗ ನಡುವೆ ಬೆಂಗಳೂರು ಕಡೆಯ ನಂಬರ್ ಪ್ಲೇಟ್ ಹಾಕಿದ್ದು ಕಂಡುಬಂದಿತ್ತು. ಆನಂತರ, ಸಾಗರದಲ್ಲಿ ತೆಲಂಗಾಣ ನೋಂದಣಿಯ ನಂಬರ್ ಪ್ಲೇಟನ್ನು ವಾಹನಕ್ಕೆ ಅಳವಡಿಸಲಾಗಿತ್ತು. ಶಿವಮೊಗ್ಗದಲ್ಲಿ ಆ ಕಾರಿನ ಅಸಲಿ ನಂಬರ್ ಪ್ಲೇಟನ್ನೇ ಹಾಕಲಾಗಿತ್ತು.
ನಂಬರ್ ಪ್ಲೇಟ್ ಬದಲಿಸಿಕೊಂಡು ಚಲಿಸುತ್ತಿರುವ ಬೀಜಾ ಕಾರಿನ ಬಗ್ಗೆ ಪೊಲೀಸರು ಹೆದ್ದಾರಿಗಳಲ್ಲಿ ಅಡ್ಡಲಾಗಿರುವ ಟೋಲ್ ಗೇಟ್ ಗಳಲ್ಲಿ ಮಾಹಿತಿ ಸಂಗ್ರಹಿಸಿದರು. ಟೋಲ್ ಗೇಟ್ ಮಾಹಿತಿ ಆಧರಿಸಿ ತನಿಖೆ ಕೈಗೊಂಡಾಗ, ಮಹಾರಾಷ್ಟ್ರದ ಮೂಲಕ ಮಧ್ಯಪ್ರದೇಶ ತೆರಳಿದ್ದು ಕಂಡುಬಂದಿತ್ತು. ಕಾರಿನ ವೇಗ ಎಷ್ಟಿತ್ತೆಂದರೆ, ಕೇವಲ ನಾಲ್ಕು ಗಂಟೆಯಲ್ಲಿ 250 ಕಿಮೀ ದೂರವನ್ನು ಕ್ರಮಿಸುತ್ತಿದ್ದರು. ಕೂಡಲೇ ಮಧ್ಯಪ್ರದೇಶ ಪೊಲೀಸರಿಗೆ ಕಾರಿನ ಬಗ್ಗೆ ಮಾಹಿತಿ ನೀಡಿದರು. ಅಲ್ಲಿ ಕರ್ನಾಟಕ ಮೂಲದ ಸಂಜೀವ್ ಪಾಟೀಲ್ ಅನ್ನುವ ಪೊಲೀಸ್ ಅಧಿಕಾರಿಯ ಸಹಾಯದಿಂದ ಮಹಾರಾಷ್ಟ್ರದ ದುಬೇ ಜಿಲ್ಲೆಯ ಸೋನಗಿರ್ ಟೋಲ್ ಗೇಟ್ ನಲ್ಲಿ ಕಾರನ್ನು ಅಡ್ಡ ಹಾಕಿದ್ದಾರೆ. ಪೊಲೀಸರು ಅಡ್ಡ ಹಾಕಿದ್ದನ್ನು ನೋಡುತ್ತಲೇ ಅದರಲ್ಲಿದ್ದ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ.
ಇತ್ತೀಚೆಗೆ ಗಂಗೊಳ್ಳಿ ಠಾಣೆ ವ್ಯಾಪ್ತಿಯಲ್ಲಿ ಚಿನ್ನಾಭರಣ ಕದ್ದು ಮಧ್ಯಪ್ರದೇಶದಲ್ಲಿ ಅಡಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಕರೆತಂದಿದ್ದರು. ಇದೀಗ ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ಅಂತಹುದೇ ಪ್ರಕರಣವನ್ನು ಬೈಂದೂರು ಪೊಲೀಸರು ಪತ್ತೆ ಮಾಡಿದ್ದು, ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಬೈಂದೂರು ಠಾಣಾಧಿಕಾರಿ ಪವನ್ ನಾಯಕ್, ಗಂಗೊಳ್ಳಿ ಠಾಣಾಧಿಕಾರಿ ವಿನಯ್, ಪೊಲೀಸ್ ಸಿಬಂದಿಯಾದ ಮೋಹನ್ ಪೂಜಾರಿ ಶಿರೂರು, ನಾಗೇಂದ್ರ ಬೈಂದೂರು, ಶ್ರೀಧರ, ನಾಗೇಶ್ ಗೌಡ, ಸುಜಿತ್ ಕುಮಾರ್, ಶ್ರೀನಿವಾಸ ಉಪ್ಪುಂದ, ಪ್ರಿನ್ಸ್ ಶಿರೂರು ಮತ್ತು ಚಂದ್ರ ಪಾಲ್ಗೊಂಡಿದ್ದರು.