ಇತ್ತೀಚಿನ ಸುದ್ದಿ
ಭ್ರಷ್ಟಾಚಾರದಿಂದ ಹಳ್ಳಹಿಡಿದ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ: ಮುನೀರ್ ಕಾಟಿಪಳ್ಳ ಆಪಾದನೆ
23/06/2024, 21:09
ಮಂಗಳೂರು(reporterkarnataka.com): ಬಿಜೆಪಿ ಆಡಳಿತದ ಮಂಗಳೂರು ನಗರದಲ್ಲಿ “ಸ್ಮಾರ್ಟ್ ಸಿಟಿ” ಯೋಜನೆಯ ಕರ್ಮಕಾಂಡ ಒಂದೊಂದಾಗಿ ಹೊರಬರುತ್ತಿದೆ. ಕಳಪೆ ಕಾಮಗಾರಿ, ಹಣಕಾಸು ದುರುಪಯೋಗ, ಭ್ರಷ್ಟಾಚಾರದಿಂದ ಇಡೀ ಯೋಜನೆ ಹಳ್ಳಹಿಡಿದಿದೆ. “ಯಾರದೊ ಕಾಸು ಯಲ್ಲಮ್ಮನ ಜಾತ್ರೆ” ಎಂಬಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಡಿವೈಎಫ್ ಐ ನಾಯಕ ಮುನೀರ್ ಕಾಟಿಪಳ್ಳ ಆಪಾದಿಸಿದ್ದಾರೆ.
ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಿಂದ ವಾಣಿಜ್ಯ ಕೇಂದ್ರ ಹಳೆ ಬಂದರಿಗೆ ಸಾಗುವ ನೆಲ್ಲಿಕಾಯಿ ರಸ್ತೆಗೆ ಯರ್ರಾಬಿರ್ರಿ ದುಡ್ಡು ಸುರಿದು “ಸುಂದರವಾಗಿ ಕಾಣುವಂತೆ” ನವೀಕರಣಗೊಳಿಸಲಾಗಿದೆ. ಈ ರಸ್ತೆಯ ಫುಟ್ ಪಾತ್ ಗೆ ಹಾಕಿರುವ “ಉತ್ಕೃಷ್ಟ ಗುಣಮಟ್ಟದ” ಇಂಟರ್ ಲಾಕ್ ಗಳು ಅಲ್ಲಲ್ಲಿ ಎದ್ದು ಪಾದಚಾರಿಗಳು ಎಡವಿ ಬೀಳತೊಡಗಿದ್ದಾರೆ. ಇಷ್ಟು ಸಾಲದು ಎಂಬಂತೆ ಫುಟ್ ಪಾತ್ ನಲ್ಲಿ ಹಾಕಿರುವ “ಗಟ್ಟಿಮುಟ್ಟಾದ ದುಬಾರಿ ದರದ” ಚೇಂಬರ್ ಗಳಲ್ಲಿ ಒಂದು ಪಾದಚಾರಿಗಳ ತೂಕ ಭರಿಸಲಾಗದೆ ಮುರಿದು ಹೋಗಿದೆ. ಈಗ ಕತ್ತಲೆಯಲ್ಲಿ ನಡೆಯುವಾಗ (ಹಗಲಲ್ಲೂ ಅಪಾಯ ಇದೆ) ಈ ಚೇಂಬರ್ ಗೆ ಕಾಲಿಟ್ಟರೆ ಸೀದಾ ಚರಂಡಿಯ ಒಳಗಡೆ ಬೀಳಬೇಕು. ಆ ರೀತಿ ಬಿದ್ದಾಗ ಪ್ರಾಣ ಹೋದರೂ ಅಚ್ಚರಿಯಿಲ್ಲ. ಕೈಕಾಲು ಮುರಿಯುವುದಂತೂ ಗ್ಯಾರಂಟಿ. ಇದು ಬಿಜೆಪಿ ಆಡಳಿತದ ಸ್ಮಾರ್ಟ್ ಸಿಟಿ ಯ ದುರವಸ್ಥೆ. ಇಂತಹ ಅಧ್ವಾನಗಳು ದಿನಕ್ಕೊಂದು ಬಯಲಿಗೆ ಬರುತ್ತಿದೆ. ಭ್ರಷ್ಟಾಚಾರದ ಕತೆ ಒತ್ತಟ್ಟಿಗಿರಲಿ, ಮುರಿದಿರುವ ಚೇಂಬರ್ ತಕ್ಷಣವೇ ಬದಲಾಯಿಸಿ ನಾಗರಿಕರ ಪ್ರಾಣ, ಕೈಕಾಲು ಅಪಾಯಕ್ಕೀಡಾದಂತೆ ನೋಡಿಕೊಳ್ಳಬೇಕು ಎಂಬ ಕನಿಷ್ಟ ಪ್ರಜ್ಞೆಯೂ ಬಿಜೆಪಿ ಆಡಳಿತಕ್ಕಿಲ್ಲ. ಅವರು ಹೊಸ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸುವುದು, ಅಗೆಯುವುದು, ನಿರ್ಮಿಸುವುದು ಅಗೆಯುವುದು ಎಂಬ ದುಡ್ಢು ಹೊಡೆಯುವ, ಕಮೀಷನ್ ಹೊಡೆಯುವ ಕಾಯಕದಲ್ಲೇ ಬ್ಯುಸಿಯಾಗಿದ್ದಾರೆ. ಈಗ ರಿಪೇರಿ ಮಾಡದಿದ್ದರೆ, ಚೇಂಬರ್ ಗೆ ಕಾಲಿಟ್ಟು ಗುಂಡಿಗೆ ಬಿದ್ದು, ಇಂಟರ್ ಲಾಕ್ ಎಡವಿ ಬೀದಿಗೆ ಬಿದ್ದು ಕೈಕಾಲು ಮುರಿದವರನ್ನು ಎತ್ತಿಕೊಂಡು ನಗರ ಪಾಲಿಕೆ ಕಚೇರಿ ಮುಂಭಾಗ ಧರಣಿ ಕೂರುವುದು ಅನಿವಾರ್ಯ ಅಷ್ಟೆ ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.