ಇತ್ತೀಚಿನ ಸುದ್ದಿ
ಬೊಕ್ಕಪಟ್ಣ ಸರಕಾರಿ ಪದವಿಪೂರ್ವ ಕಾಲೇಜಿನ ನೂತನ ತರಗತಿ ಕೊಠಡಿಗಳ ಉದ್ಘಾಟನೆ
11/10/2021, 10:44
ಮಂಗಳೂರು(reporterkarnataka.com):
ಶಿಕ್ಷಣವು ಮಕ್ಕಳಲ್ಲಿ ಕಲಿಕೆಯ ಜೊತೆಗೆ ಶಿಸ್ತು, ದೇಶಭಕ್ತಿ, ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಳಿಸುತ್ತದೆ. ಮಕ್ಕಳೂ ಕೂಡ ಇವೆಲ್ಲದಕ್ಕೂ ಬದ್ಧರಾಗಿರಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಅವರು ನಗರದ ಹಂಪನಕಟ್ಟೆಯಲ್ಲಿರುವ ಬೊಕ್ಕಪಟ್ಣ ಸರಕಾರಿ ಪದವಿಪೂರ್ವ ಕಾಲೇಜಿನ ನೂತನ ತರಗತಿ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ವಿದ್ಯಾರ್ಥಿಗಳು ಸದ್ಗುಣಗಳನ್ನು ಮೈಗೂಡಿಸಿಕೊಂಡು ತಂದೆ – ತಾಯಿಯರನ್ನು ಗೌರವಿಸಿ ತಮ್ಮ ಜೀವನವನ್ನು ರೂಪಿಸುವೆಡೆಗೆ ಗಮನಹರಿಸಬೇಕು. ಶಿಸ್ತು, ಸಾಮರಸ್ಯ, ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಸದೃಢ ಭಾರತಕ್ಕೆ ನಾಂದಿಯಾಗಬೇಕು ಎಂದು ಕರೆ ನೀಡಿದರು.
ಮಂಗಳೂರು ನಗರದ ಹೃದಯ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ವಿಧ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹ ಶಿಕ್ಷಣವನ್ನು ಹೊಂದಿರುವ ಏಕೈಕ ಪದವಿಪೂರ್ವ ಕಾಲೇಜನ್ನು ಉನ್ನತೀಕರಿಸಲು ಸರಕಾರದಿಂದ 4.80 ಕೋಟಿ ಅನುದಾನವನ್ನು ಈಗಾಗಲೇ ಒದಗಿಸಿಕೊಟ್ಟು ಕಾಮಗಾರಿಯು ಅತೀ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿಧ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದ್ದ ಕಾರಣ ಸ್ಥಳಾವಕಾಶದ ಕೊರತೆ ಎದುರಾಗಿದ್ದು ವಿಧ್ಯಾರ್ಥಿಗಳ ಪಾಠ ಪ್ರವಚನಕ್ಕೆ ಅಡ್ಡಿಯಾಗದಂತೆ ಅತೀ ತ್ವರಿತಗತಿಯಲ್ಲಿ 100 ಮಕ್ಕಳಿಗೆ ಆಶ್ರಯವಾಗುವಂತಹ ವಿಶಾಲವಾದ ತರಗತಿ ಕೊಠಡಿಯನ್ನು ಲಭ್ಯವಿರುವ ಕಟ್ಟಡದ ಎರಡನೇ ಅಂತಸ್ತಿನಲ್ಲಿ ನಿರ್ಮಿಸಿ ಸಮರ್ಪಿಸಿದ್ದೇವೆ ಎಂದರು.
ಹೆಚ್ಚಾಗಿ ಆರ್ಥಿಕವಾಗಿ ಹಿಂದುಳಿದ ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದನ್ನು ಕಂಡು ಮಧ್ಯಾಹ್ನದ ದಾಸೋಹ ಯೋಜನೆಯನ್ನು ಕಾಲೇಜಿನಲ್ಲಿ ಆರಂಭಿಸಲು ಶ್ರಮಿಸುವುದಾಗಿ ಆಶ್ವಾಸನೆಯನ್ನು ನೀಡಿದರು. ಕೊಠಡಿ ನಿರ್ಮಿಸಿಕೊಟ್ಟ ದತ್ತ ಪ್ರಸಾದ್ ಬಿಲ್ಡರ್ಸ್ ಮಾಲಕರಾದ ಅವಿನಾಶ್ ಅಂಚನ್ ಅವರ ಕಾರ್ಯಕ್ಷಮತೆ ಹಾಗೂ ಸಾಮಾಜಿಕ ಕಳಕಳಿಯನ್ನು ಶಾಸಕರು ಶ್ಲಾಘಿಸಿದರು.
ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೋರೇಟರ್ ಹಾಗೂ ನಿಕಟಪೂರ್ವ ಮೇಯರ್ ದಿವಾಕರ್ ಪಾಂಡೇಶ್ವರ ಉಪಸ್ಥಿತರಿದ್ದು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸಿಪ್ರಿಯನ್ ಮೊಂತೇರೋ, ಅಭ್ಯಾಸಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಲತಾ. ಬಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ವಿನ್ಸೆಂಟ್ ಅಂಟೋನಿ ಮಸ್ಕರೇಸ್ಹಸ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ನಾಗೇಶ್ ನಾಯ್ಕ್ ಬಿ ಅತಿಥಿಗಳಿಗೆ ಶಾಲು ಹೊದೆಸಿ ಗೌರವ ಸಲ್ಲಿಸಿದರು. ಕನ್ನಡ ಉಪನ್ಯಾಸಕರಾದ ರಘು ಇಡ್ಕಿದು ವಂದಿಸಿ, ಉಪನ್ಯಾಸಕಿ ಮಲ್ಲಿಕಾ ಎಂ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಶ್ರೀಮತಿ ಯೋಗಿತಾ ಜಿ.ಕೆ. ಹಾಗೂ ಪ್ರೇಮರಾಣಿ ಕಾರ್ಯಕ್ರಮ ಆಯೋಜಿಸಿದರು.